ಖ್ಯಾತ ಯಕ್ಷಗಾನ ಭಾಗವತ-ಕಲಾವಿದ ಗುಣವಂತೆ ಕೃಷ್ಣ ಭಂಡಾರಿ ನಿಧನ

ಹೊನ್ನಾವರ: ಯಕ್ಷಗಾನ ಭಾಗವತ, ಕಲಾವಿದ ಗುಣವಂತೆ ಕೃಷ್ಣ ಭಂಡಾರಿ (61 ವರ್ಷ) ಶನಿವಾರ ರಾತ್ರಿ ಸುಮಾರು 10.20 ಕ್ಕೆ ಗುಣವಂತೆಯಲ್ಲಿ ನಿಧನರಾಗಿದ್ದಾರೆ.
ಕೃಷ್ನ ಭಂಡಾರಿ ಅವರು ಯಕ್ಷಗಾನದ ಹಿನ್ನೆಲೆಯಿರುವ ಕುಟುಂಬದಿಂದಲೇ ಬಂದಿದ್ದರು. ಅಜ್ಜ ವೆಂಕಪ್ಪ ಭಂಡಾರಿ ವೇಷಧಾರಿಯಾಗಿದ್ದರು. ಹಾಗೂ ತಂದು ಮಂಜು ಭಂಡಾರಿ ಮದ್ದಳೆ ವಾದಕರಾಗಿದ್ದರು.ಅವರು ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಯಕ್ಷಗಾನ ಹಿನ್ನೆಲೆಯ ಕುಟುಂಬದಿಂದ ಬಂದಿದ್ದ  ಕೃಷ್ಣ ಭಂಡಾರಿಯವರು ಯಕ್ಷಗಾನದ ಎಲ್ಲ ವಿಭಾಗಗಳಲ್ಲಿ ಹಿಡಿತ ಸಾಧಿಸಿದ್ದರೂ ಅವರು ಹೆಚ್ಚು ಜನಪ್ರಿಯರಾಗಿದ್ದು ಭಾಗವತರಾಗಿ. ಉಡುಪಿಯ ಶಿವರಾಮ ಕಾರಂತ ಯಕ್ಷಗಾನ ಕೇಂದ್ರದಲ್ಲಿ ಕಲಿತಿದ್ದ ಅವರು ನಂತರ ಯಕ್ಷಗಾನದ ಖ್ಯಾತ ಕಲಾವಿದ ಕೆರೆಮನೆ ಮಹಾಬಲ ಹೆಗಡೆಯವರ ಬಳಿ ಹೆಚ್ಚಿನ ಅಭ್ಯಾಸ ಮಾಡಿದ್ದರು. ಅನಂತರ ಇಡಗುಂಜಿ ಯಕ್ಷಗಾನ ಮೇಳ ಸೇರಿದಂತೆ ಅನೇಕ ಕಡೆಗಳಲ್ಲಿ ಕಲಾವಿದರಾಗಿದ್ದರು. ದಿವಂಗತ ಶಂಭು ಹೆಗಡೆ ಕೆರೆಮೆನೆ ಮೊದಲಾದವರ ಜೊತೆ ಕೆಲಸ ಮಾಡಿದ್ದರು.

ರ ಇಡಗುಂಜಿ ಮೇಳದಲ್ಲಿ ಯಕ್ಷಲೋಕದ ಪಯಣವನ್ನು ಆರಂಭಿಸಿ ಉತ್ತರಪ್ರದೇಶ, ತಮಿಳುನಾಡು, ಮುಂಬೈ ಸೇರಿದಂತೆ ರಾಷ್ಟ್ರದ ಉದ್ದಗಲಕ್ಕೂ ಸಂಚರಿಸಿ ತಮ್ಮ ಕಂಚಿನ ಕಂಠದ ಭಾಗವತಿಕೆಯಿಂದ ಕಲಾವಿದರನ್ನು ಕುಣಿಸಿದ್ದಾರೆ 1992 ರಲ್ಲಿ ಇಡಗುಂಜಿ ಮೇಳದ ಕಲಾವಿದರಾಗಿ ದಿವಂಗತ ಶಂಭು ಹೆಗಡೆಯವರ ಜೊತೆ ಫ್ರಾನ್ಸ್ ಮತ್ತು ಸ್ಪೇನ್ ತಿರುಗಾಟಕ್ಕೆ ಹೋಗಿದ್ದರು. ತದನಂತರ ಮೇಳದ ಹಲವಾರು ಪ್ರವಾಸಕ್ಕೆ ಭಾಗವತಾರಾಗಿ ಹಾಗೂ ಮದ್ದಲೆ ವಾದಕರಾಗಿ ಪಾಲ್ಗೊಂಡಿದ್ದರು.

ಪ್ರಮುಖ ಸುದ್ದಿ :-   ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಮೇ 10ರ ವರೆಗೆ ಮಳೆ ಮುನ್ಸೂಚನೆ

ಇಡಗುಂಜಿ, ಪೆರ್ಡೂರು, ಸಾಲಿಗ್ರಾಮ ಮೇಳಗಳು ಹಾಗೂ ಸಾವಿರಾರು ಬಯಲಾಟದ ಪ್ರಸಂಗಗಳಲ್ಲಿ ಬರುವ ಪಾತ್ರಗಳ ಭಾಗವತರಾಗಿದ್ದ ಅವರು ೨೦೧೨-೧೩ ನೇ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು.
ಶ್ರೀ ನಾಗಚೌಡೇಶ್ವರಿ ಯಕ್ಷಕಲಾ ಟ್ರಸ್ಟ್ ರಚಿಸಿಕೊಂಡು ಕಾರವಾರ, ಅಂಕೋಲಾ, ಕುಮಟಾ, ಗೋಕರ್ಣ, ಹೊನ್ನಾವರ, ಮುರ್ಡೇಶ್ವರ, ಶಿರಾಲಿ, ಗುಣವಂತೆ, ಹೊನ್ನಾವರ, ಭಟ್ಕಳ, ಮಂಗಳೂರು ಮುಂತಾದ ಕಡೆ ಯಕ್ಷಗಾನ ತರಬೇತಿ ಶಿಬಿರಗಳನ್ನು ಆಯೋಜಿಸಿ ಯಕ್ಷಗಾನ ಪ್ರಸಾರ ಕಾರ್ಯ ಮಾಡಿದ್ದರು.

ಅವರು ಯಕ್ಷಗಾನದ ಪರಂಪರೆ ಎಂದೂ ಬಿಟ್ಟವರಲ್ಲ ಹಾಗೂ ಎಳೆಯ ವಯಸ್ಸಿನವರಿಂದ ವೃದ್ಧರ ವರೆಗೂ ಕರೆದಲ್ಲಿ ಹೋಗಿ ಯಕ್ಷಗಾನದ ಕಲಿಸುವಂಥವರಾಗಿದ್ದರು. ಅತ್ಯಂತ ಸರಳ ವ್ಯಕ್ತಿತ್ವದರಾಗಿದ್ದ ಕೃಷ್ಣ ಭಂಡಾರಿ ಶನಿವಾರ ರಾತ್ರಿ ನಿಧನರಾದರು.ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಹಾಗೂ ಅಪಾರ ಯಕ್ಷಗಾನ ಪ್ರೇಮಗಳನ್ನು ಅಗಲಿದ್ದಾರೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement