ಬಿಜೆಪಿ ನಾಯಕ ಯೋಗೇಶ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಧಾರವಾಡದ ಬಿಜೆಪಿ ನಾಯಕ ಯೋಗೇಶ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಸೇರಿದಂತೆ ಒಟ್ಟು 16 ಮಂದಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
.ಏಪ್ರಿಲ್ 15 ರಂದು ವಿನಯ್ ಕುಲಕರ್ಣಿ ಮತ್ತು ಇತರರನ್ನು ದೋಷಿಗಳು ಎಂದು ತೀರ್ಪು ನೀಡಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್ ಅವರು ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.
ದೋಷಿಗಳಿಗೆ ಜೀವಾವಧಿ ಶಿಕ್ಷೆಯ ಜೊತೆಗೆ ತಲಾ 30,000 ರೂ. ದಂಡ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302 (ಕೊಲೆ) ಮತ್ತು 120B (ಅಪರಾಧ ಸಂಚು) ಅಡಿಯಲ್ಲಿ ಇವರೆಲ್ಲರೂ ದೋಷಿಗಳೆಂದು ಸಾಬೀತಾಗಿದೆ.
ಪ್ರಕರಣದ ಹಿನ್ನೆಲೆ 
ಧಾರವಾಡ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾಗಿದ್ದ ಬಿಜೆಪಿ ನಾಯಕ ಯೋಗೇಶ ಗೌಡ ಅವರನ್ನು ಜೂನ್ 15, 2016 ರಂದು ಧಾರವಾಡದ ಸಪ್ತಾಪುರದಲ್ಲಿರುವ ಅವರದ್ದೇ ಜಿಮ್‌ನಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆಯ ನಂತರ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಬಿಐ, ವಿನಯ ಕುಲಕರ್ಣಿ ಮತ್ತು ಇತರರ ವಿರುದ್ಧ ಸುದೀರ್ಘ ಚಾರ್ಜ್‌ಶೀಟ್ ಸಲ್ಲಿಸಿತ್ತು. ಇದರಲ್ಲಿ ಕೊಲೆಗೆ ಕ್ರಿಮಿನಲ್ ಸಂಚು ರೂಪಿಸಿರುವುದು, ಸಾಕ್ಷ್ಯ ನಾಶ ಮತ್ತು ಕಾನೂನುಬಾಹಿರವಾಗಿ ಗುಂಪು ಸೇರುವುದು, ಮಾರಕಾಸ್ತ್ರಗಳ ಬಳಕೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಹಾಗೂ ಆರೋಪಿಗಳನ್ನು ರಕ್ಷಿಸಲು ಸಾರ್ವಜನಿಕ ಸೇವಕರು ಕಾನೂನು ಉಲ್ಲಂಘಿಸಿರುವುದು ಇದೇ ಮೊದಲಾದ ಅಂಶಗಳನ್ನು ಪ್ರಸ್ತಾಪಿಸಲಾಗಿತ್ತು.
ನವೆಂಬರ್ 5, 2020ರಂದು ವಿನಯ ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿತ್ತು. ಆಗಸ್ಟ್ 11, 2021ರಂದು ಸುಪ್ರೀಂ ಕೋರ್ಟ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಜೂನ್ 7, 2025ರಂದು ವಿಚಾರಣೆ ವೇಳೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕುಲಕರ್ಣಿ ಅವರ ಜಾಮೀನನ್ನು ರದ್ದುಗೊಳಿಸಿತ್ತು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement