ಸರ್ಕಾರ ನೀಡಿದ ಭಾಷಣ ಓದದೆ ಎರಡೇ ಸಾಲಿನ ಭಾಷಣ ಓದಿ ಸದನದಿಂದ ತೆರಳಿದ ರಾಜ್ಯಪಾಲರು

ಬೆಂಗಳೂರು: ಕರ್ನಾಟಕ ವಿಧಾನಮಂಡಲದ ಬಜೆಟ್ ಅಧಿವೇಶನದ ಆರಂಭದಲ್ಲೇ ರಾಜಭವನ ಮತ್ತು ರಾಜ್ಯ ಸರ್ಕಾರದ ನಡುವಿನ ಶೀತಲ ಸಮರ ಸ್ಫೋಟಗೊಂಡಿದೆ. ಗುರುವಾರ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರು, ಕೇವಲ ಎರಡೇ ಸಾಲುಗಳನ್ನು ಓದಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸರ್ಕಾರ ಸಿದ್ಧಪಡಿಸಿದ್ದ ಭಾಷಣದ ಪ್ರತಿಯಲ್ಲಿ ಉಲ್ಲೇಖಿಸಲಾಗಿದ್ದ ಕೆಲವು ಅಂಶಗಳಿಗೆ ರಾಜ್ಯಪಾಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಭಾಷಣದ ಸುಮಾರು 11 ಪ್ಯಾರಾಗ್ರಾಫ್‌ಗಳಲ್ಲಿ ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸಲಾಗಿತ್ತು. ವಿಶೇಷವಾಗಿ  ಮಹಾತ್ಮಾ ಗಾಂಧಿ ಖಾತ್ರಿ ಯೋಜನೆ (MGNREGA) ಯೋಜನೆಯ ಬದಲಾವಣೆ ಹಾಗೂ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನದ ಹಂಚಿಕೆ (Devolution of funds) ವಿಷಯಗಳಲ್ಲಿ ಕೇಂದ್ರವನ್ನು ದೂಷಿಸಲಾಗಿತ್ತು ಎನ್ನಲಾಗಿದೆ.
ಈ ಭಾಷಣಕ್ಕೆ ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಭಾಗಗಳನ್ನು ತೆಗೆದುಹಾಕುವಂತೆ ಅವರು ನೀಡಿದ್ದ ಸೂಚನೆಯನ್ನು ಸರ್ಕಾರ ಪಾಲಿಸದ ಹಿನ್ನೆಲೆಯಲ್ಲಿ ಗೆಹ್ಲೋಟ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಸರ್ಕಾರದ ಭಾಷಣಕ್ಕೆ ರಾಜ್ಯಪಾಲರು ವಿರೋಧ ವ್ಯಕ್ತ ಪಡಿಸಿದ್ದು, ಕೇವಲ ಎರಡೇ ಸಾಲಿನಲ್ಲಿ ಭಾಷಣ ಮುಗಿಸಿ ಅಧಿವೇಶನದಿಂದ ನಿರ್ಗಮಿಸುತ್ತಿದ್ದಂತೆ ಕಾಂಗ್ರೆಸ್‌ ಶಾಸಕರು ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆ
ರಾಜ್ಯಪಾಲರ ಈ ನಡವಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು ಸಾಂವಿಧಾನಿಕ ಬಿಕ್ಕಟ್ಟು ಎಂದು ಬಣ್ಣಿಸಿದ್ದಾರೆ.
“ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದುವುದು ರಾಜ್ಯಪಾಲರ ಸಾಂವಿಧಾನಿಕ ಕರ್ತವ್ಯ. ಆದರೆ ಗೆಹ್ಲೋಟ್ ಅವರು ಸಂವಿಧಾನದ ವಿಧಿ 176 ಮತ್ತು 163 ಅನ್ನು ಉಲ್ಲಂಘಿಸಿದ್ದಾರೆ. ನಾವು ಇದರ ವಿರುದ್ಧ ಪ್ರತಿಭಟಿಸುತ್ತೇವೆ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಬಗ್ಗೆಯೂ ಪರಿಶೀಲಿಸುತ್ತಿದ್ದೇವೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, “ರಾಜಭವನವು ಈಗ ಬಿಜೆಪಿ ಕಚೇರಿಯಂತೆ ಬದಲಾಗಿದೆ. ನಾವು ಭಾಷಣದಲ್ಲಿ ಕೇವಲ ಸತ್ಯಾಂಶಗಳನ್ನು ನೀಡಿದ್ದೆವು,ಆದರೂ ರಾಜ್ಯಪಾಲರು ಇದನ್ನು ಓದಲು ನಿರಾಕರಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ವಿರೋಧವಾದುದು,” ಎಂದು ಟೀಕಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement