ಬೆಂಗಳೂರು: ರಾಜ್ಯದಲ್ಲಿ 438 ‘ನಮ್ಮ ಕ್ಲಿನಿಕ್’ಗಳನ್ನು ಡಿಸೆಂಬರ್ 15ರ ವೇಳೆಗೆ ಕಾರ್ಯಾರಂಭ ಮಾಡಲಾಗುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 243 ಕ್ಲಿನಿಕ್‌ಗಳು ಆರಂಭವಾಗಲಿವೆ ಎಂದು ಆರೋಗ್ಯಸಚಿವ ಡಾ. ಕೆ. ಸುಧಾಕರ ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯ ಮಹಾಲಕ್ಷ್ಮಿ ಲೇಔಟ್‌ನ ವಾರ್ಡ್ – 58 ರ ಪಂಚ ಮುಖಿ ದೇವಸ್ಥಾನದ ಸಮೀಪ ‘ನಮ್ಮ ಕ್ಲಿನಿಕ್’ ಮಾದರಿ ರೂಪಿಸಿದ್ದು, ಇದನ್ನು ಸಚಿವರು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕ್ಲಿನಿಕ್‌ನಲ್ಲಿ ವೈದ್ಯ, ನರ್ಸಿಂಗ್ ಸಿಬ್ಬಂದಿ, ಲ್ಯಾಬ್ ಟೆಕ್ನೀಶಿಯನ್ ಹುದ್ದೆಗಳಿರುತ್ತವೆ. ಬಿಬಿಎಂಪಿ ವ್ಯಾಪ್ತಿಯ ಕ್ಲಿನಿಕ್‌ಗಳಿಗೆ ವೈದ್ಯರ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದು, 160 ವೈದ್ಯರು ಈಗಾಗಲೇ ನೇಮಕವಾಗಿದ್ದಾರೆ. ಬಾಕಿ ಉಳಿದ 83 ಕ್ಕೆ ಮತ್ತೆ ಅಧಿಸೂಚನೆ ಹೊರಡಿಸಲಾಗಿದೆ ಎಂದರು.
ಬಡತನ ರೇಖೆಗಿಂತ ಕೆಳಗಿರುವವರು, ಗುಡಿಸಲುಗಳಲ್ಲಿ ವಾಸಿಸುವ ಕಡು ಬಡವರಿಗಾಗಿ ಈ ಯೋಜನೆ ರೂಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಂತೆಯೇ ಕಾರ್ಯ ಮಾಡಲಿದೆ ಎಂದರು.
ಮಾರ್ಗಸೂಚಿಯ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಆದರೆ ನಗರ ಪ್ರದೇಶಗಳಲ್ಲಿ ಇದು ಕಡಿಮೆ ಇದೆ. ಆದ್ದರಿಂದಲೇ ಈ ಯೋಜನೆ ರೂಪಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಸಂಪೂರ್ಣ ಆರ್ಥಿಕ ಸಹಕಾರ ನೀಡಿದೆ ಎಂದು ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ