ಕೋಲ್ಕತ್ತಾ: ಬಂಗಾಳ ಚುನಾವಣೆಯ ಹೀನಾಯ ಸೋಲಿನ ನಂತರ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಭಿನ್ನಮತ ತಾರಕಕ್ಕೇರಿದೆ. ಪಕ್ಷವನ್ನು ಸಮಾಧಾನಪಡಿಸುವ ಮತ್ತು ಕಾರ್ಯಕರ್ತರಲ್ಲಿ ಚೈತನ್ಯ ತುಂಬುವ ನಿಟ್ಟಿನಲ್ಲಿ ಟಿಎಂಸಿ ಸುಪ್ರಿಮೋ ಮಮತಾ ಬ್ಯಾನರ್ಜಿ ಮತ್ತೆ ತಮ್ಮ ಹಳೆಯ ‘ಸ್ಟ್ರೀಟ್ ಫೈಟರ್’ (ಬೀದಿ ಹೋರಾಟಗಾರ್ತಿ) ಅವತಾರಕ್ಕೆ ಮರಳಿದ್ದಾರೆ. ಸೋಲಿನ ನಂತರ ಹಮ್ಮಿಕೊಂಡ ಮೊದಲ ಬೃಹತ್ ಪ್ರತಿಭಟನೆಯಲ್ಲಿ ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ 71 ವರ್ಷದ ಮಮತಾ, “ಲಡೇಂಗೆ ಯಾ ಮರೇಂಗೆ” (ಹೋರಾಡುತ್ತೇವೆ ಇಲ್ಲವೇ ಸಾಯುತ್ತೇವೆ) ಎಂದು ಗುಡುಗಿದ್ದಾರೆ. ಆದರೆ, ಈ ಪ್ರತಿಭಟನೆಯು ಮಮತಾ ಅವರ ಒಂಟಿತನ ಮತ್ತು ಪಕ್ಷದ ಒಳಗಿನ ಬಿರುಕನ್ನು ಜಗಜ್ಜಾಹೀರು ಮಾಡಿದೆ.
ಪ್ರತಿಭಟನೆಯಲ್ಲಿ ಎದ್ದು ಕಾಣಿಸಿದ ನಾಯಕರ ಗೈರುಹಾಜರಿ: ಮಮತಾ ಒಂಟಿ?
ಕೋಲ್ಕತ್ತಾದ ಹೃದಯಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿಗೆ ಸವಾಲು ಹಾಕಿದರಾದರೂ, ವೇದಿಕೆಯ ಮೇಲಿನ ಚಿತ್ರಣ ಪಕ್ಷಕ್ಕೆ ಆಶಾದಾಯಕವಾಗಿರಲಿಲ್ಲ. ಟಿಎಂಸಿಯ ಒಟ್ಟು 78 ಶಾಸಕರ ಪೈಕಿ (ಒಟ್ಟು 80, ಆದರೆ ಇಬ್ಬರನ್ನು ಉಚ್ಚಾಟಿಸಲಾಗಿದೆ) ಕೇವಲ 8 ಶಾಸಕರು ಮಾತ್ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು…! ಶೋವಂದೇಬ್ ಚಟ್ಟೋಪಾಧ್ಯಾಯ, ನಯನಾ ಬಂದೋಪಾಧ್ಯಾಯ, ಮದನ್ ಮಿತ್ರಾ, ಅಶೋಕ ದೇಬ್, ಆಸಿಮಾ ಪಾತ್ರಾ, ಬಿಮನ್ ಬ್ಯಾನರ್ಜಿ, ಫಿರ್ಹಾದ್ ಹಕೀಮ್ ಮತ್ತು ಕುನಾಲ್ ಘೋಷ್ ಮಾತ್ರ ಮಮತಾ ಜೊತೆ ಪಾಲ್ಗೊಂಡಿದ್ದರು. 70 ಶಾಸಕರು ದೂರ ಉಳಿದಿದ್ದಾರೆ. ಕೇವಲ 6 ಸಂಸದರು (ಡೋಲಾ ಸೇನ್, ಕಲ್ಯಾಣ ಬ್ಯಾನರ್ಜಿ, ಡೆರೆಕ್ ಒಬ್ರಿಯನ್, ಸಮೀರುಲ್ ಇಸ್ಲಾಂ, ಮೇನಕಾ ಗುರುಸ್ವಾಮಿ ಮತ್ತು ನದೀಮುಲ್ ಹಕ್) ಮಾತ್ರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಲೋಕಸಭೆ ಹಾಗೂ ರಾಜ್ಯಸಭೆ ಸೇರಿ ಟಿಎಂಸಿಯಲ್ಲಿ 41 ಸಂಸದರಿದ್ದಾರೆ. ಈ ಅತ್ಯಲ್ಪ ಹಾಜರಾತಿಯು, ಚುನಾವಣಾ ಸೋಲಿನ ನಂತರ ಮಮತಾ ಬ್ಯಾನರ್ಜಿ ಅವರು ತಮ್ಮ ಶಾಸಕರು ಮತ್ತು ಸಂಸದರನ್ನು ಒಟ್ಟಾಗಿ ಮುನ್ನಡೆಸಲು ಕಷ್ಟಪಡುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಸಹಿ ಫೋರ್ಜರಿ ವಿವಾದ ; ತೃಣಮೂಲದಲ್ಲಿ ಬಂಡಾಯದ ಮುನ್ಸೂಚನೆ
ಟಿಎಂಸಿ ಪಕ್ಷವು ಸದ್ಯ ಇಳಿಮುಖದ ಹಾದಿಯಲ್ಲಿದ್ದು, ಪಕ್ಷ ಒಡೆಯುವ ಹಂತಕ್ಕೆ ತಲುಪಿದೆ ಎಂಬ ಮುನ್ಸೂಚನೆಗಳು ಸಿಗುತ್ತಿವೆ. ಇದಕ್ಕೆ ಪೂರಕವಾಗಿ ಹಲವು ಆಘಾತಕಾರಿ ವಿದ್ಯಮಾನಗಳು ನಡೆದಿವೆ:
ಪಕ್ಷದಿಂದ ಉಚ್ಚಾಟಿತರಾಗಿರುವ ಶಾಸಕರಾದ ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರು ಕೋಲ್ಕತ್ತಾದ ಶಾಸಕರ ಭವನದಲ್ಲಿ (MLA hostel) ಹಲವು ಟಿಎಂಸಿ ಶಾಸಕರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ಸಹಿ ಫೋರ್ಜರಿ ಆರೋಪ: ಶೋವಂದೇಬ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲು ಸಿದ್ಧಪಡಿಸಲಾದ ಪತ್ರದಲ್ಲಿ ಹಲವು ಟಿಎಂಸಿ ಶಾಸಕರ ಸಹಿಗಳನ್ನು ಫೋರ್ಜರಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇದರ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರು ತಮ್ಮ ನಿವಾಸದಲ್ಲಿ ಕರೆದಿದ್ದ ಮಹತ್ವದ ಸಭೆಗೆ 80 ಶಾಸಕರಲ್ಲಿ ಬರೋಬ್ಬರಿ 60 ಶಾಸಕರು ಗೈರುಹಾಜರಾಗುವ ಮೂಲಕ ನಾಯಕತ್ವದ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಭಿಷೇಕ ಬ್ಯಾನರ್ಜಿ ನಾಯಕತ್ವಕ್ಕೆ ಆಂತರಿಕ ವಿರೋಧ?
ಮಮತಾ ಬ್ಯಾನರ್ಜಿ ಅವರ ಸೋದರಳಿಯನಾಗಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ ಬ್ಯಾನರ್ಜಿ ಮೇಲಿನ ದಾಳಿಯ ಸುತ್ತ ನಡೆದಿರುವ ರಾಜಕೀಯ ಹೈಡ್ರಾಮಾ ಪಕ್ಷದ ಆಂತರಿಕ ಭಿನ್ನಮತವನ್ನು ಮತ್ತಷ್ಟು ಬಯಲು ಮಾಡಿದೆ. ಚುನಾವಣಾ ನಂತರದ ಹಿಂಸಾಚಾರ ಪೀಡಿತ ಸಂಕಷ್ಟಕ್ಕೊಳಗಾದವರನ್ನು ಭೇಟಿಯಾಗಲು ಸೋನಾರಪುರಕ್ಕೆ ತೆರಳಿದ್ದ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ಕಲ್ಲು ಹಾಗೂ ಮೊಟ್ಟೆಗಳಿಂದ ದಾಳಿ ನಡೆಸಲಾಗಿತ್ತು. ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಪಕ್ಷದ ಪ್ರಭಾವಿ ನಾಯಕನ ಮೇಲೆಯೇ ದಾಳಿ ನಡೆದರೂ ಟಿಎಂಸಿಯ ಬಹುತೇಕ ಪ್ರಮುಖ ನಾಯಕರು ಸಾರ್ವಜನಿಕವಾಗಿ ಇದನ್ನು ಖಂಡಿಸಲು ಮುಂದೆ ಬರಲಿಲ್ಲ.
ಭಿಷೇಕ ಬ್ಯಾನರ್ಜಿ ಅವರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಪಕ್ಷದೊಳಗೆ ತೀವ್ರ ಅಸಮಾಧಾನವಿದ್ದು, ಈಗಾಗಲೇ ಪ್ರಮುಖ ನಾಯಕಿಯಾಗಿರುವ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರು ಪಕ್ಷದ ಎಲ್ಲಾ ಸಾಂಸ್ಥಿಕ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಈಗಾಗಲೇ 100ಕ್ಕೂ ಹೆಚ್ಚು ಕೌನ್ಸಿಲರ್‌ಗಳು ಪಕ್ಷ ತೊರೆದಿದ್ದಾರೆ.
“ಪಕ್ಷವನ್ನು ಒಡೆಯಲು ಬಿಜೆಪಿ ಯತ್ನಿಸುತ್ತಿದೆ”: ಮಮತಾ ಆರೋಪ
ಪ್ರತಿಭಟನೆಯಲ್ಲಿ ಮಮತಾ ಬ್ಯಾನರ್ಜಿ ಅವರು ಪ್ರಸ್ತುತ ಸುವೇಂದು ಅಧಿಕಾರಿಯವರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
“ಬಿಜೆಪಿಯು ಚುನಾವಣೆಯಲ್ಲಿ ಮತಗಳನ್ನು ಲೂಟಿ ಮಾಡಿ ಅಧಿಕಾರಕ್ಕೆ ಬಂದಿದೆ. ಈಗ ನಮ್ಮ ಶಾಸಕರು ಮತ್ತು ಕೌನ್ಸಿಲರ್‌ಗಳಿಗೆ ಪೊಲೀಸರ ಮೂಲಕ ಬೆದರಿಕೆ ಹಾಕಿ, ಟಿಎಂಸಿ ಪಕ್ಷವನ್ನು ಒಡೆಯಲು ಸಂಚು ರೂಪಿಸುತ್ತಿದೆ” ಎಂದು ಆರೋಪಿಸಿದರು.
“ಸೋನಾರಪುರದಲ್ಲಿ ಅಭಿಷೇಕ್ ಬ್ಯಾನರ್ಜಿ ಮತ್ತು ಹೂಗ್ಲಿಯಲ್ಲಿ ಸಂಸದ ಕಲ್ಯಾಣ ಬ್ಯಾನರ್ಜಿ ಅವರ ಮೇಲೆ ದಾಳಿ ನಡೆಸಲಾಗಿದೆ. ಅಂದು ಬಿದ್ದ ಕಲ್ಲು ಅಭಿಷೇಕ ತಲೆಗೆ ತಗುಲಿದ್ದರೆ ಆತ ಪ್ರಾಣ ಕಳೆದುಕೊಳ್ಳುತ್ತಿದ್ದ” ಎಂದು ಭಾವುಕರಾಗಿ ನುಡಿದರು.
ಕೋಲ್ಕತ್ತಾ ಪೊಲೀಸರು ಪ್ರತಿಭಟನೆ ನಡೆಸಲು, ಮೈಕ್ ಅಳವಡಿಸಲು, ಸ್ಟೇಜ್ ಹಾಕಲು ಅನುಮತಿ ನೀಡುತ್ತಿಲ್ಲ. ಪ್ರಜಾಪ್ರಭುತ್ವದ ರಾಜಕೀಯ ಚಟುವಟಿಕೆಗಳಿಗೆ ಸುವೇಂದು ಸರ್ಕಾರ ಅಡ್ಡಿಪಡಿಸುತ್ತಿದೆ. ಮೊದಲು ರಾಣಿ ರಾಶ್ಮೋನಿ ಅವೆನ್ಯೂದಲ್ಲಿ ಪ್ರತಿಭಟನೆಗೆ ನಿರ್ಧರಿಸಲಾಗಿತ್ತು, ಆದರೆ ಅನುಮತಿ ನಿರಾಕರಿಸಿದ ಕಾರಣ ಅನಿವಾರ್ಯವಾಗಿ ಎಸ್‌ಪ್ಲನೇಡ್‌ನ ವೈ-ಚಾನೆಲ್‌ಗೆ ಸ್ಥಳಾಂತರಿಸಬೇಕಾಯಿತು ಎಂದು ದೂರಿದರು.
ಸುವೇಂದು ವಿರುದ್ಧ ಆಕ್ರೋಶ
ತಮ್ಮ ಹಳೆಯ ಆಪ್ತ, ಪ್ರಸ್ತುತ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹಾಗೂ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ, “ಮೋದಿಜಿಯವರು ಬಂಗಾಳವನ್ನು ಸಮಾಜವಿರೋಧಿಗಳು ಮತ್ತು ಬುಲ್ಡೋಜರ್ ಪ್ರಿಯ ರಾಜಕಾರಣಿಗಳ ಕೈಗೆ ಒಪ್ಪಿಸಿ ರಾಜ್ಯವನ್ನು ಕತ್ತಲೆಗೆ ತಳ್ಳಿದ್ದಾರೆ. ಬಡವರ ಮನೆಗಳನ್ನು ನೆಲಸಮಗೊಳಿಸಲಾಗುತ್ತಿದೆ, ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ” ಎಂದು ಕಿಡಿಕಾರಿದರು.
‘ಬೀದಿ ಹೋರಾಟಗಾರ್ತಿ’ಗೆ ಅಸ್ತಿತ್ವದ ಸವಾಲು
“ನಾನು ನಿಮ್ಮನ್ನೆಲ್ಲಾ ಅಧಿಕಾರದಿಂದ ಕೆಳಗಿಳಿಸುವವರೆಗೂ ಸಾಯುವುದಿಲ್ಲ, ಈ ಪ್ರತಿಭಟನೆ ಹೀಗೇ ಮುಂದುವರಿಯುತ್ತದೆ” ಎಂದು ಮಮತಾ ಬ್ಯಾನರ್ಜಿ ಸವಾಲು ಹಾಕಿದರೂ, ಬಿಜೆಪಿ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯ ಶಾಸಕರು ಹಾಗೂ ಸಂಸದರು ಪಾಲ್ಗೊಳ್ಳದೇ ಇರುವುದು ಸದ್ಯದ ಪರಿಸ್ಥಿತಿ ಅವರ ಪರವಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಬಂಗಾಳದ ಅಪ್ರತಿಮ ‘ಸ್ಟ್ರೀಟ್ ಫೈಟರ್’ ಮರಳಿ ಬೀದಿಗೆ ಇಳಿದಿರುವುದು ಹೌದಾದರೂ, ಸ್ವಪಕ್ಷದ ಶಾಸಕರು ಮತ್ತು ಸಂಸದರೇ ಅವರ ಬೆನ್ನಿಗೆ ನಿಲ್ಲುತ್ತಿಲ್ಲ.
ಆಂತರಿಕ ಬಂಡಾಯ ಮತ್ತು ನಾಯಕತ್ವದ ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿರುವ ತೃಣಮೂಲ ಕಾಂಗ್ರೆಸ್ ಅನ್ನು ಮಮತಾ ಬ್ಯಾನರ್ಜಿ ಅವರು ಹೇಗೆ ಮುನ್ನಡೆಸುತ್ತಾರೆ ಮತ್ತು ಪಕ್ಷದೊಳಗೆ ಮತ್ತೆ ಹೇಗೆ ವಿಶ್ವಾಸ ಮೂಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.


ನಿಮ್ಮ ಕಾಮೆಂಟ್ ಬರೆಯಿರಿ