ನವದೆಹಲಿ: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಸೇರಿದಂತೆ ವಿವಿಧೆಡೆ ಮತದಾರರ ಪಟ್ಟಿ ತಿರುಚಿ ಅಕ್ರಮ ಎಸಗಲಾಗಿದೆ ಎಂದು ರಾಹುಲ್ ಗಾಂಧಿ ಅವರು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠವು ಅರ್ಜಿ ವಜಾಗೊಳಿಸಿತು. ಮನವಿಯನ್ನು ಆಲಿಸಿದ ಎಸ್ಐಟಿಗೆ ತನಿಖೆ ವಹಿಸಲು ನಿರಾಕರಿಸಿತು. ಈ ವಿಷಯವನ್ನು ಭಾರತೀಯ ಚುನಾವಣಾ ಆಯೋಗದಲ್ಲಿ ಬಗೆಹರಿಸಿಕೊಳ್ಳಬೇಕೆಂದು ಅರ್ಜಿದಾರರಿಗೆ ಕೋರ್ಟ್ ಸೂಚಿಸಿತು. ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಿರುವುದು ಕಂಡುಬಂದರೆ ಚುನಾವಣಾ ಆಯೋಗದಲ್ಲಿ ದೂರು ಸಲ್ಲಿಸಿ ಎಂದು ಕೋರ್ಟ್ ಸೂಚಿಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು, ಚುನಾವಣಾ ಆಯೋಗಕ್ಕೆ ದೂರು ಕೊಡಲಾಗಿದ್ದು, ಆದರೂ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ ಎಂದು ತಿಳಿಸಿದರು. ಚುನಾವಣಾ ಆಯೋಗ ಯಾವಾಗ ಕ್ರಮ ಕೈಗೊಳ್ಳಬೇಕು ಎಂದು ಒಂದು ಗಡುವು ನಿಗದಿ ಮಾಡಬೇಕು ಎಂದೂ ಅರ್ಜಿದಾರರು ಮಅಡಿದ ಮನವಿಯನ್ನೂ ಪೀಠವು ತಿರಸ್ಕರಿಸಿತು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ನಕಲಿ, ಅನಧಿಕೃತ ವ್ಯಕ್ತಿಗಳ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲಾಗಿತ್ತು. ಇದು ಒಬ್ಬ ವ್ಯಕ್ತಿ ಒಂದು ಮತ ಚಲಾಯಿಸಬೇಕು ಎಂಬ ತತ್ವಕ್ಕೆ ಮಾರಕ ಎಂದು ಅರ್ಜಿ ದೂರಿತ್ತು.
ಕೆಲವು ಮತದಾರರಿಗೆ ಒಂದೇ ಇಪಿಐಸಿ (ಎಪಿಕ್) ಗುರುತಿನ ಚೀಟಿ ಇದ್ದರೂ ಹಲವು ಕ್ಷೇತ್ರಗಳಲ್ಲಿ ಅವರ ಹೆಸರು ನೋಂದಣಿಯಾಗಿದ್ದು ಕೆಲವರು ಒಂದೇ ಕ್ಷೇತ್ರದಲ್ಲಿ ಬೇರೆ ಬೇರೆ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ. ಮಹದೇವಪುರ ಕ್ಷೇತ್ರದಲ್ಲಿಯೇ 40,000ಕ್ಕೂ ಅಧಿಕ ಅನಧಿಕೃತ ಮತದಾರರು, 10,000ಕ್ಕೂ ಅಧಿಕ ನಕಲಿ ದಾಖಲೆಗಳು ಕಂಡುಬಂದಿವೆ. ಮಹಾರಾಷ್ಟ್ರದಲ್ಲಿಯೂ ಇಂಥದ್ದೇ ಅಕ್ರಮ ನಡೆದಿದೆ ಎಂದು ಅದು ಹೇಳಿತ್ತು. ಅಲ್ಲದೆ ಕಲಬುರ್ಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆಯೂ ಅರ್ಜಿಯಲ್ಲಿ ಆರೋಪಿಸಲಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ