ಕಲ್ಲಂಗಡಿ ಹಣ್ಣು ಮತ್ತು ನಮ್ಮ ಜೀವನದ ಮೌಲ್ಯಗಳು

 ಶ್ರೀಕಂಠ ಬಾಳಗಂಚಿ

ಹೇಳಿಕೇಳಿ ಇದು ಬೇಸಿಗೆ ಕಾಲ. ಬೇಸಿಗೆ ಕಾಲದಲ್ಲಿ ತಣ್ಣಗೆ ಇರುವ ಪದಾರ್ಥಗಳನ್ನು ತಿನ್ನುವ ಮತ್ತು ಕುಡಿಯುವ ಮೂಲಕ ದೇಹವನ್ನು ತಣ್ಣಗೆ ಇಟ್ಟುಕೊಳ್ಳಲು ಬಯಸುತ್ತೇವೆ. ಇದಕ್ಕೆ ಅನುಗುಣವಾಗಿ ನಮ್ಮ ಪ್ರಕೃತಿಯೂ ನಮ್ಮೊಂದಿಗೆ ಇದ್ದು ಬೇಸಿಗೆ ಕಾಲದಲ್ಲಿಯೇ ತಣ್ಣನೆ ಹಣ್ಣುಗಳಾದ ಕಲ್ಲಂಗಡಿ ಮತ್ತು ಕರ್ಬೂಜ (ಸಿದ್ದೋಟೆ ಹಣ್ಣು) ರಸ್ತೆಗಳ ಬದಿಗಳಲ್ಲಿಯೂ ಮತ್ತು ಮಾರುಕಟ್ಟೆಗಳಲ್ಲಿಯೂ ಸಿಗುತ್ತಿತ್ತು. ಉಳ್ಳವರು ಉಂಡೇಹಣ್ಣುಗಳನ್ನೇ ಕೊಂಡುಕೊಳ್ಳುತಿದ್ದರೆ, ಕೈಯ್ಯಲ್ಲಿಕಾಸಿಲ್ಲದವರು ಕತ್ತರಿಸಿಟ್ಟ ಹಣ್ಣುಗಳನ್ನು ತಿಂದು ತಮ್ಮನಾಲಿಗೆಯ ಬರವನ್ನು ಕಳೆದುಕೊಳ್ಳುತ್ತಿದ್ದರು.
ಆಗೆಲ್ಲಾ ಬೇಸಿಗೆಯ ಸಮಯದಲ್ಲಿ ನದಿಗಳು ಬತ್ತಿ ಹೋಗಿದ್ದಾಗ ನದಿಗಳ ತಟದಲ್ಲಿ ಕಲ್ಲಂಗಡಿ ಹಣ್ಣನ್ನು ಬೆಳೆಯುತ್ತಿದ್ದರು. ಚಳಿಗಾಲ ಮುಗಿಯುವ ಶಿವರಾತ್ರಿಯ ಫಲಾಹಾರದ ಸಮಯಕ್ಕೆ ಸರಿಯಾಗಿ ಲಭ್ಯವಿರುತ್ತಿದ್ದ ಕಲ್ಲಂಗಡಿ ಇಡೀ ಬೇಸಿಗೆಯಲ್ಲಿ ದೊರೆತು ಮಳೆಗಾಲದ ಆರಂಭದಲ್ಲಿ ಒಂದೆರಡು ಮಿಂಚುತಾಗಿದ ಕೂಡಲೇ ಹಣ್ಣುಗಳು ಕೊಳೆತು ಹೋಗುತ್ತಿದ್ದ ಕಾರಣ ಅಲ್ಲಿಗೆ ಮುಕ್ತಾಯವಾದರೆ ಮತ್ತೆ ಮುಂದಿನ ವರ್ಷದವರೆಗೂ ಕಾಯಲೇಬೇಕಿತ್ತು.
ಆದರೆ ಇಂದು ಕುಲಾಂತರಿ ತಳಿಗಳು ಬಂದಿರುವ ಕಾರಣ ವರ್ಷದ 365 ದಿನಗಳೂ ಕಲ್ಲಂಗಡಿ ಹಣ್ಣುಗಳು ಲಭ್ಯವಿದ್ದು ಬಹುತೇಕರ ಮನೆಗಳಲ್ಲಿ ಬೆಳಗಿನ ತಿಂಡಿಯೊಂದಿಗೋ ಇಲ್ಲವೇ ಮಧ್ಯಾಹ್ನದ ಊಟದೊಂದಿಗೆ ಕಡ್ಡಾಯವಾಗಿ ಕಲ್ಲಂಗಡಿ ಹಣ್ಣುಗಳನ್ನು ತಿನ್ನುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಅಂದೆಲ್ಲ ಕಲ್ಲಂಗಡಿ ಹಣ್ಣುಗಳನ್ನು ತಿನ್ನುವಾಗ ಬಾಯಿಗೆ ಸಿಗುತ್ತಿದ್ದ ಬೀಜಗಳು ಕಿರಿಕಿರಿಯನ್ನುಂಟುಮಾಡುತ್ತಿದ್ದರೂ ಮರಳುಮರಳಾಗಿ ಇರುತ್ತಿದ್ದ ಕಲ್ಲಂಗಡಿಹಣ್ಣುಗಳು ತಿನ್ನಲು ಬಲು ರುಚಿಯಾಗಿರುತ್ತಿದ್ದವು. ಆದರೆ ಇಂದುಬೀಜ ರಹಿತ ಕಲ್ಲಂಗಡಿ ಹಣ್ಣುಗಳಿಂದಾಗಿ ಬೀಜಗಳ ಕಿರಿಕಿರಿಯಿಂದ ಮುಕ್ತರಾಗಿದ್ದರೂ ಅಂದಿನ ಹಣ್ಣಿನಂತೆ ರುಚಿ ಇಂದು ಸಿಗದಿರುವುದು ವಿಪರ್ಯಾಸವೇ ಸರಿ. ಸಂತಾನೋತ್ಪತ್ತಿ ಪ್ರಕೃತಿಯ ನಿಯಮವಾಗಿದ್ದು ಹಣ್ಣುಗಳಲ್ಲಿ ಬೀಜಗಳೇ ಸಂತಾನೋತ್ಪತ್ತಿಯ ಕೇಂದ್ರಬಿಂದುವಾಗಿತ್ತು. ಆದರೆವಿಜ್ಞಾನಿಗಳು ಬೀಜಗಳು ಬಲಿಯುವ ಶಕ್ತಿಯನ್ನೇ ನಿಶ್ಶಕ್ತಿಯನ್ನಾಗಿ ಮಾಡಿರುವ ಕಾರಣ, ಹಣ್ಣುಗಳ ರುಚಿಯಲ್ಲಿಯೂ ವ್ಯತ್ಯಾಸವಾಗಿದೆ.
ಕಲ್ಲಂಗಡಿ ಹಣ್ಣುಗಳ ಬೀಜದ ಕುರಿತಾಗಿ ಚರ್ಚಿಸುತ್ತಿರುವಾಗ ಕೇಂದ್ರ ಸರ್ಕಾರದ ಮಾಜಿ ರಕ್ಷಣಾ ಸಚಿವರು ಮತ್ತು ಗೋವಾ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಮನೋಹರ ಪರಿಕ್ಕರ ಅವರ ಊರಿನಲ್ಲಿ ಬೆಳೆಯುತ್ತಿದ್ದ ಕಲ್ಲಂಗಡಿ ಹಣ್ಣಿನ ವೃತ್ತಾಂತವನ್ನು ನೆನಪಿಸಿಕೊಳ್ಳಲೇಬೇಕು.
ಪರಿಕ್ಕರ ಅವರ ಪೂರ್ವಜರು ಗೋವಾ ಸಮೀಪದ ಪರ್ರಾ ಎನ್ನುವ ಊರಾಗಿದ್ದ ಕಾರಣದಿಂದಲೇ ಅವರ ಕುಟುಂಬಕ್ಕೆ ಪರಿಕ್ಕರ ಅಡ್ಡ ಹೆಸರು ಬಂದಿತ್ತು. ಹಿಂದೆ ಅವರ ಊರು ದೊಡ್ಡ ದೊಡ್ಡ ಕಲ್ಲಂಗಡಿ ಹಣ್ಣಿಗೆ ಖ್ಯಾತಿ ಪಡೆದಿತ್ತು. ಅವರ ಸಣ್ಣವನಿರುವಾಗ ಮೇ ತಿಂಗಳಲ್ಲಿ ಹಣ್ಣು ಕಟಾವಿಗೆ ಬಂದಾಗ ಮಕ್ಕಳಿಗಾಗಿ ಕಲ್ಲಂಗಡಿ ಹಣ್ಣು ತಿನ್ನುವಸ್ಪರ್ಧೆ ಏರ್ಪಡಿಸುತ್ತಿದ್ದರು. ಎಲ್ಲ ಮಕ್ಕಳೂ ತಮಗೆ ಬೇಕಾದಷ್ಟು ಮತ್ತು ಸಾಧ್ಯವಾಗುವಷ್ಟು ಕಲ್ಲಂಗಡಿ ಹಣ್ಣುಗಳನ್ನು ತಿನ್ನುವುದೇ ಆಟದ ನಿಯಮ. ಅನಿಮಿಯತವಾದ ಕಲ್ಲಂಗಡಿ ಹಣ್ಣುಗಳನ್ನು ತಿನ್ನಬಹುದು ಎಂದು ಮಕ್ಕಳು ಅತ್ಯುತ್ಸಾಹದಿಂದತಾ ಮುಂದು, ನಾಮುಂದು ಎಂದು ಆ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು.
ಕೆಲವು ವರ್ಷಗಳು ಕಳೆದ ನಂತರ ಪರಿಕ್ಕರ ಮುಂಬೈನಲ್ಲಿ ತಮ್ಮ ಓದನ್ನು ಮುಗಿಸಿದ ನಂತರ ಮತ್ತದೇ ಮೇ ತಿಂಗಳಿನ ಕಲ್ಲಂಗಡಿ ಹಣ್ಣುಗಳನ್ನು ತಿನ್ನುವ ಸ್ಪರ್ಧೆ ನೋಡಲು ಹೋದಾಗ ಅಲ್ಲಿನ ಹಣ್ಣುಗಳ ಸಂಖ್ಯೆಯೂ ಕಡಿಮೆ ಇದ್ದವಲ್ಲದೇ, ಹಣ್ಣಿನ ಗಾತ್ರವೂ ಬಹಳ ಸಣ್ಣದಾಗಿತ್ತು.
ಅಂದು ಕಲ್ಲಂಗಡಿ ಹಣ್ಣುಗಳ ಸ್ಪರ್ಧೆ ಏರ್ಪರ್ಡಿಸುತ್ತಿದ್ದ ರೈತರು ಮೃತಪಟ್ಟಿದ್ದ ಕಾರಣ ಅವರ ಜಾಗದಲ್ಲಿ ಅವರ ಮಗ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದನ್ನು ಗಮಮಿಸಿದರು. ಅಂದು ಸ್ಪರ್ಥೆಯಲ್ಲಿ ಭಾಗವಹಿಸುತ್ತಿದ್ದ ಮಕ್ಕಳು ಕಲ್ಲಂಗಡಿ ಹಣ್ಣುಗಳನ್ನು ತಿನ್ನುವಾಗ ಬೀಜಗಳನ್ನು ಬಹಳ ಜಾಗೃತವಾಗಿ ಮತ್ತೊಂದು ಪಾತ್ರೆಯಲ್ಲಿ ಉಗುಳ ಬೇಕಿತ್ತು. ಆಗೆಲ್ಲ ರೈತ ಮಕ್ಕಳಿಗೆ ತಿನ್ನಲು ದೊಡ್ಡ ದೊಡ್ಡ ಚೆನ್ನಾಗಿ ಬಲಿತ ಕಲ್ಲಂಗಡಿಗಳನ್ನೇ ಸ್ಪರ್ಧೆಗೆ ನೀಡುತ್ತಿದ್ದರಿಂದ ಅವರಿಗೆ ಅತ್ಯುತ್ತಮ ಬೀಜಗಳು ಮುಂದಿನ ವರ್ಷದ ಬೆಳೆಗೆ ಸಿಗುತ್ತಿದ್ದವು.

ಆದರೆ ಆ ರೈತರ ಮಗ ಈಗ ಸ್ಪರ್ಧೆ ಮಾಡಿಸುವಾಗ ವೃಥಾ ದೊಡ್ಡಹಣ್ಣುಗಳನ್ನೇಕೆ ಮಕ್ಕಳಿಗೆ ತಿನ್ನಲು ಕೊಡಬೇಕು ಎಂದು ನಿರ್ಧರಿಸಿ ದೊಡ್ಡದೊಡ್ಡಹಣ್ಣುಗಳನ್ನು ಹೆಚ್ಚಿನ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಅಪ್ಪ ಹಾಕಿದ ಆಲದಮರ ಎಂಬಂತೆ ಕಾಟಾಚಾರಕ್ಕಾಗಿ ಸಣ್ಣಸಣ್ಣ ಕಲ್ಲಂಗಡಿ ಹಣ್ಣುಗಳನ್ನೇ ಸ್ಪರ್ಧೆಯಲ್ಲಿ ಮಕ್ಕಳಿಗೆ ಕೊಡುತ್ತಿದ್ದ. ಹಾಗಾಗಿ ನೋಡ ನೋಡುತ್ತಿದ್ದಂತೆಯೇ ಐದಾರು ವರ್ಷಗಳಲ್ಲಿ ಆ ದೊಡ್ಡದೊಡ್ಡ ಕಲ್ಲಂಗಡಿ ಹಣ್ಣುಗಳ ತಳಿಯೇ ಅವರಿಂದ ಮಾಯವಾಗಿ ಅವರಬಳಿ ಕೇವಲ ಸಣ್ಣಸಣ್ಣ ಕಲ್ಲಂಗಡಿಯ ತಳಿಯೇ ಉಳಿದುಕೊಂಡಿತು.

ಸದ್ಯದ ಪರಿಸ್ಥಿತಿಯಲ್ಲಿ ಭಾರತೀಯರ ಜೀವನಮೌಲ್ಯಗಳು ಇದೇರೀತಿ ಆಗಿ ಹೋಗಿರುವುದು ವಿಪರ್ಯಾಸವೇ ಸರಿ. ಒಂದುಕಾಲದಲ್ಲಿ ಜೀವನಮೌಲ್ಯಗಳನ್ನು ತಿಳಿಸುವುದರಲ್ಲಿ ಭಾರತ ವಿಶ್ವಕ್ಕೇ ಗುರುವಾಗಿತ್ತು. ನಮ್ಮ ಋಷಿಮುನಿಗಳು ತಮ್ಮೆಲ್ಲ ಅನುಭವಗಳನ್ನು ವೇದ-ಪುರಾಣ-ಯೋಗ ಮತ್ತು ಪ್ರಾಣಾಯಾಮಗಳ ಮುಖಾಂತರ ತಿಳಿಯ ಹೇಳುತ್ತಿದ್ದರು. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಜನರು ಜನಪದ ಶೈಲಿಯಲ್ಲಿ ಗಾದೆ ಮಾತುಗಳು ಮತ್ತು ಲಾವಣಿಗಳ ಮುಖಾಂತರ ತಮ್ಮ ಅನುಭವವನ್ನು ಒಬ್ಬರಿಂದೊಬ್ಬರಿಗೆ ಪ್ರಚುರ ಪಡಿಸುತ್ತಿದ್ದರು. ವೇದಸುಳ್ಳಾದರೂ ಗಾದೆಸುಳ್ಳಾಗದು ಎಂಬ ಮಾತೂ ಪ್ರಚಲಿತಕ್ಕೆ ಬರುವಷ್ಟು ಸತ್ಯವಾಗಿರುತ್ತಿತ್ತು.

ಬಸವಣ್ಣನವರು ಇದನ್ನೇ ಗಮನಿಸಿ ಅನುಭವ ಮಂಟಪದಲ್ಲಿ ಪರಿಚಯಿಸಿದರು. ಅಲ್ಲಿ ಜನರು ತಮ್ಮತಮ್ಮ ಅನುಭವಗಳನ್ನುಮುಕ್ತವಾಗಿ ಹಂಚಿಕೊಳ್ಳುವಂತಹ ವ್ಯವಸ್ಥೆ ಮಾಡಲಾಗಿತ್ತು.
ಒಬ್ಬರ ಜೀವನದ ರಸಾನುಭವ ಮತ್ತೊಬ್ಬರಿಗೆ ಜೀವನದ ಪಾಠವಾಗುತ್ತಿತ್ತು. ಅಂದು ಬಹುತೇಕರು ಅನಕ್ಷರಸ್ಥರಾಗಿದ್ದರೂ, ವಿಶಾಲವಾದ ಜೀವನದ ಅನುಭವದದ ಶಾಲೆಯ ಮೂಲಕ ವಿದ್ಯಾವಂತರಾಗಿರುತ್ತಿದ್ದರು. ಸಾಮಾಜಿಕ ಜ್ಞಾನ ಮತ್ತು ಜೀವನಮೌಲ್ಯಗಳು ಯಾವುದೇ ಅಕ್ಷರಸ್ಥರಿಗಿಂತಲೂ ಕಡಿಮೆಇರಲಿಲ್ಲ.
ಭಾರತಕ್ಕೆವ್ಯಾಪಾರಕ್ಕೆಂದು ಬಂದ ಬ್ರಿಟೀಷರು ಇದನ್ನು ಗಮನಿಸಿಯೇ ನಮ್ಮ ಜೀವನದಮೌಲ್ಯಗಳನ್ನುಮೌಢ್ಯ ಎಂದು ತುಳಿಯಲಾರಂಭಿಸಿದರು. ನಮ್ಮಆಚಾರ, ವಿಚಾರ, ಸಂಪ್ರದಾಯ ಮತ್ತು ಸಂಸ್ಕಾರಗಳನ್ನು ಕಂದಾಚಾರಎಂದುಹಳಿಯುತ್ತಲೇ ತಮ್ಮ ಸ್ವೇಚ್ಛಾ‍‍ಚಾರದ ಜೀವನಶೈಲಿಯ ರುಚಿಯನ್ನು ತೋರಿಸಿ ನಿಧಾನವಾಗಿ ಎಲ್ಲರನ್ನೂ ಸೆಳೆದುಕೊಳ್ಳಲು ಯಶಸ್ವಿಯಾದರು.

ಇವೆಲ್ಲದರ ಮಧ್ಯೆ ನಮಗರಿವಿಲ್ಲದಂತೆಯೇ ಸದ್ದಿಲ್ಲದೆ ನಮ್ಮ ವೇದ ಶಾಸ್ತ್ರ ಪುರಾಣಗಳನ್ನುತಮ್ಮದೇಶಕ್ಕೆತೆಗೆದುಕೊಂಡುಹೋಗಿ ಅದನ್ನು ಆಳವಾಗಿ ಅಧ್ಯಯನಮಾಡಿ ಅದರಲ್ಲಿದ್ದ ಸಾರವನ್ನು ಬಸಿದುಕೊಂಡು ಅದನ್ನುತಮ್ಮದೇ ಅನ್ವೇಷಣೆ ಅಥವಾ ಆವಿಷ್ಕಾರ ಎಂಬಂತೆ ಬಿಂಬಿಸತೊಡಗಿದರು. ಹಿತ್ತಲ ಗಿಡಮದ್ದಲ್ಲ ಎನ್ನುವಂತೆ ನಮ್ಮ ಮೌಲ್ಯಗಳನ್ನೇ ವಿದೇಶದವರು ಹೇಳಿದಾಗ ಅದನ್ನೇ ವೇದವಾಕ್ಯ ಎನ್ನುವಂತೆ ಸ್ವೀಕರಿಸುವಷ್ಟರ ಮಟ್ಟಿಗಿನ ಬೌದ್ಧಿಕ ದಿವಾಳಿಗಳಾಗಿ ಹೋಗಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.

ಇದೇ ರೀತಿಯಲ್ಲಿ ಮುಂದುವರೆದರೆ, ಕಲ್ಲಂಗಡಿಹಣ್ಣುಗಳಲ್ಲಿ ಹೇಗೆ ದೊಡ್ಡದೊಡ್ಡ ಹಣ್ಣುಗಳ ತಳಿಗಳು ನಾಶವಾದವೋ ಹಾಗೆಯೇ ನಮ್ಮ ಮೌಲ್ಯಗಳೂ ನಾಶವಾಗಿ ಪ್ರತಿಯೊಂದಕ್ಕೂ ಪರಕೀಯರ ಪರಾವಲಂಬನೆ ಮಾಡಬೇಕಾಗುವ ಸಂದರ್ಭ ಇನ್ನೇನು ಕೆಲವೇವರ್ಷಗಳಲ್ಲಿ ಬಂದರೆ ಆಶ್ಚರ್ಯವಿಲ್ಲ.
ಇನ್ನೂ ಕಾಲ ಮಿಂಚಿಲ್ಲ. ನಮ್ಮಮಕ್ಕಳಿಗೆ ಶಿಕ್ಷಣ ನೀಡುವಾಗ ನಾವು ಎಲ್ಲಿ ಎಡವಿದ್ದೇವೆಯೋ ಅದನ್ನು ಈಕೂಡಲೇ ಸರಿಪಡಿಸಿದಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ಮತ್ತೆ ನಮ್ಮ ಯುವಸಮೂಹ ನಮ್ಮ ಮೌಲ್ಯಗಳನ್ನು ರೂಢಿಸಿಕೊಳ್ಳುವುದರ ಮೂಲಕ ಭಾರತ ಮತ್ತೆ ವಿಶ್ವಗುರುವಾಗುವುದರಲ್ಲಿ ಸಂದೇಹವೇ ಇಲ್ಲ.

ಏನಂತೀರೀ?
ನಿಮ್ಮವನೇ ಉಮಾಸುತ

5 / 5. 8

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement