ಕಾರವಾರ : ತಪ್ಪಿಸಿಕೊಳ್ಳಲು ಯತ್ನಿಸಿದ ಕಾರಿನಲ್ಲಿ ಕೋಟಿ ರೂ.ಸಿಕ್ಕಿದ್ದ ಪ್ರಕರಣದ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನೀಲವೇಣಿ ಗ್ರಾಮದ ಬಳಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಅಂಕೋಲಾ ತಾಲೂಕಿನ ರಾಮನಗುಳಿ ಬಳಿ ಕೆಲದಿನಗಳ ಹಿಂದೆ ನಿಲ್ಲಿಸಿದ್ದ ಕಾರಿನಲ್ಲಿ ಪತ್ತೆಯಾಗಿದ್ದ ಕೋಟಿ ರೂ.ಹಣದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಗಳಾದ ಮಂಗಳೂರು ಮೂಲದ ತಲ್ಹತ್ ತಂಗಲ್, ನೌಪಾಲಾ ಹಾಗೂ ಮೊಹಮ್ಮದ್ ಸಾಹಿಲ್ ಮೊಹಮ್ಮದ್ ಇಬ್ರಾಹಿಂ ಎಂಬವರನ್ನು ಬೆಳಗಾವಿ ಸಮೀಪದ ವಂಟಮೂರಿ ಘಾಟ್ ಬಳಿ ಪೊಲೀಸರು ಗುರುವಾರ ಮಧ್ಯಾಹ್ನ ಬಂಧಿಸಿದ್ದರು. ನಂತರ ಅವರನ್ನು ಅಲ್ಲಿಂದ ಅಂಕೋಲಾಕ್ಕೆ ಕರೆತರುತ್ತಿದ್ದಾಗ ಹಳಿಯಾಳ ಪೊಲೀಸ್ ಠಾಣೆ ವ್ಯಾಪ್ತಿಯ ತಟ್ಟಿಗೇರಾ ಕ್ರಾಸ್ ಬಳಿ ಮೂತ್ರ ವಿಸರ್ಜನೆಗೆಂದು ನಿಲ್ಲಿಸಲಾಗಿತ್ತು. ಈ ವೇಳೆ ಆರೋಪಿಗಳಾದ ಮಂಗಳೂರು ಮೂಲದ ತಲ್ಹತ್ ತಂಗಲ್ ಮತ್ತು ನೌಪಾಲಾ ಎಂಬವರು ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದರು.
ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಪೊಲೀಸರು ಅವರಿಗೆ ನಿಲ್ಲುವಂತೆ ಸೂಚಿಸಿದ್ದರೂ ಅವರು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಗಾಜಿನ ಬಾಟಲಿಯಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದರು. ಇದರಿಂದ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಕೆಲ ಪೊಲೀಸರಿಗೆ ಗಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಒಂದು ತಿಂಗಳ ಹಿಂದೆ ಅಂಕೋಲಾ ರಾಮನಗುಳಿ ಸನಿಹ ಕಾರಿನಲ್ಲಿ ಒಂದು ಕೋಟಿ ರೂ. ಹಣ ಸಿಕ್ಕ ಪ್ರಕರಣ ಇದಾಗಿದೆ. ಅಂಕೋಲಾದ ರಾಮನಗುಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿಯ ಪ್ರದೇಶದಲ್ಲಿ ನಿಲ್ಲಿಸಿಟ್ಟ ಕಾರಿನಲ್ಲಿ ಕೋಟಿ ರೂ. ಪತ್ತೆಯಾಗಿತ್ತು. ಈ ಪ್ರಕರಣ ತನಿಖೆ ನಡೆಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಬೆಳಗಾವಿ ಜಿಲ್ಲೆಯ ವಂಟಮೂರಿ ಘಾಟ್ ಬಳಿ ಆರೋಪಿಗಳನ್ನು ಬಂಧಿಸಿ ಅಂಕೋಲಾಕ್ಕೆ ಕರೆತರುತ್ತಿದ್ದಾಗ ಈ ಘಟನೆ ನಡೆದಿದೆ. ಗಾಯಗೊಂಡ ಪೊಲೀಸರಿಗೆ ಹಳಿಯಾಳದಲ್ಲಿ ಚಿಕಿತ್ಸೆ ನೀಡಲಾಗಿದೆ. ಹಾಗೂ ಗಾಯಗೊಂಡ ಇಬ್ಬರು ಆರೋಪಿಗಳಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ,
ನಿಮ್ಮ ಕಾಮೆಂಟ್ ಬರೆಯಿರಿ