ಕೊಲಂಬೊ/ತೆಹ್ರಾನ್: ಶ್ರೀಲಂಕಾ ಕರಾವಳಿಯ ಸಮೀಪ ಇರಾನ್ ದೇಶದ ಹಡಗಿನ ಮೇಲೆ ನಡೆದ ಸಬ್ಮರಿನ್ (ಜಲಂತರ್ಗಾಮಿ) ದಾಳಿಯಿಂದಾಗಿ 100ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಘಟನೆಯಲ್ಲಿ ಹತ್ತಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶ್ರೀಲಂಕಾ ನೌಕಾಪಡೆ ಮತ್ತು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದು, ದಾಳಿಯ ನಂತರ ಕನಿಷ್ಠ 101 ವ್ಯಕ್ತಿಗಳ ಸುಳಿವು ಸಿಗುತ್ತಿಲ್ಲ. ಸುಮಾರು 78 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಶ್ರೀಲಂಕಾದ ಕರಾವಳಿ ತೀರದಲ್ಲಿ ಈ ದಾಳಿ ನಡೆದಿದ್ದು, ಪರಿಸ್ಥಿತಿಯನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಶ್ರೀಲಂಕಾ ನೌಕಾಪಡೆಯಿಂದ ರಕ್ಷಣಾ ಕಾರ್ಯಾಚರಣೆ
ಮುಳುಗುತ್ತಿದ್ದ ಹಡಗಿನಿಂದ 32 ಜನರನ್ನು ರಕ್ಷಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಏಳು ಜನರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿ ಅನಿಲ ಜಾಸಿಂಘೆ ತಿಳಿಸಿದ್ದಾರೆ.
ವಿದೇಶಾಂಗ ಸಚಿವ ವಿಜಿತ ಹೇರತ್ ಸಂಸತ್ತಿನಲ್ಲಿ ಮಾತನಾಡಿ, “180 ಜನರಿದ್ದ ‘ಐರಿಸ್ ದೇನಾ’ (Iris Dena) ಹಡಗು ಸಂಕಷ್ಟದಲ್ಲಿದೆ ಎಂಬ ಮಾಹಿತಿ ಬಂದ ತಕ್ಷಣ ಶ್ರೀಲಂಕಾ ನೌಕಾಪಡೆ ಮತ್ತು ವಾಯುಪಡೆಯ ವಿಮಾನಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ” ಎಂದು ವಿವರಿಸಿದರು.
ಮರಣದಂಡನೆಯ ಎಚ್ಚರಿಕೆ ನೀಡಿದ ಇರಾನ್
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯನ್ನು ಯಾರಾದರೂ ಬೆಂಬಲಿಸಿದರೆ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಇರಾನ್ನ ನ್ಯಾಯಾಂಗ ಮುಖ್ಯಸ್ಥ ಘೋಲಂ ಹೊಸೈನಿ ಮೊಹ್ಸೆನಿ ಎಜೆಹೈ ಎಚ್ಚರಿಸಿದ್ದಾರೆ.
ಬುಧವಾರ ಇರಾನ್ ಸರ್ಕಾರಿ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಅವರು, “ಶತ್ರು ರಾಷ್ಟ್ರಗಳಿಗೆ ಸಹಾಯ ಮಾಡುವ ಅಥವಾ ದಾಳಿಯ ಪರವಾಗಿ ಮಾತನಾಡುವ ವ್ಯಕ್ತಿಗಳು ಮರಣದಂಡನೆ ಸೇರಿದಂತೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ಜನವರಿಯಲ್ಲಿ ನಡೆದ ದೇಶವ್ಯಾಪಿ ಪ್ರತಿಭಟನೆಗಳ ಪ್ರಕರಣಗಳಿಗೆ ನ್ಯಾಯಾಂಗ ಆದ್ಯತೆ ನೀಡಲಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ