ಉಡುಪಿಯಲ್ಲಿ ನಾಲ್ವರ ಹತ್ಯೆ ಪ್ರಕರಣ: ಬೆಳಗಾವಿಯಲ್ಲಿ ಆರೋಪಿ ಬಂಧನ

ಉಡುಪಿ: ಮಲ್ಪೆ ಸಮೀಪದ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಮಹಾರಾಷ್ಟ್ರ ಸಾಂಗ್ಲಿ ಮೂಲದ ಪ್ರವೀಣ ಚೌಗಲೆ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಉಡುಪಿಯಲ್ಲಿ ಕೊಲೆ ಮಾಡಿ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಸಂಬಂಧಿ ಮನೆಯಲ್ಲಿ ಅಡಗಿ ಕುಳಿತಿದ್ದ, ಆತನ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಉಡುಪಿ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ದೀಪಾವಳಿ ಹಬ್ಬದ ದಿನ ಉಡುಪಿ ಜಿಲ್ಲೆಯ ನೇಜಾರಿನ ತೃಪ್ತಿ ನಗರದಲ್ಲಿ ನಡೆದಿದ್ದ ನಾಲ್ವರ ಭೀಕರ ಹತ್ಯೆ ಇಡೀ ಕರಾವಳಿಯನ್ನೇ ಬೆಚ್ಚಿ ಬೀಳಿಸಿತ್ತು. ಭಾನುವಾರ ಬೆಳಗ್ಗೆ ದುಷ್ಕರ್ಮಿಯೊಬ್ಬ ತಾಯಿ ಹಸೀನಾ (46) ಆಕೆಯ ಮಕ್ಕಳಾದ ಅಫ್ನಾನ್ (23), ಅಯ್ನಾಜ್ (21), ಮತ್ತು ಅಸೀಮ್ (14) ದುಷ್ಕರ್ಮಿಯ ಇರಿತದಿಂದ ಮೃತಪಟ್ಟಿದ್ದರು. ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದರು.
ಪ್ರವೀಣ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ. ಈತ ವೈಯಕ್ತಿಕ ದ್ವೇಷದಿಂದ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಆರೋಪಿ ಭಾನುವಾರ ಬೆಳಗ್ಗೆ 8:30ರ ಸುಮಾರಿಗೆ ಸಂತೆಕಟ್ಟೆಯಿಂದ ತೃಪ್ತಿನಗರಕ್ಕೆ ಆಟೋ ಬಾಡಿಗೆಗೆ ಪಡೆದು ಬಂದಿದ್ದಾನೆ. ಏಕಾಏಕಿ ಮನೆಗೆ ನುಗ್ಗಿದ ಹಂತಕ ನಾಲ್ವರನ್ನು ಚಾಕುವಿನಿಂದ ಇರಿದಿದ್ದಾನೆ. ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕ ಗಲಾಟೆ ಕೇಳಿ ಮನೆಯೊಳಗೆ ನುಗ್ಗಿದ್ದು, ಆತನಿಗೂ ಕೂಡ ಚಾಕುವಿನಿಂದ ಇರಿದಿದ್ದಾನೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

ಕೇವಲ ಹದಿನೈದೇ ನಿಮಿಷದಲ್ಲಿ ಐವರಿಗೆ ಚಾಕು ಇರಿದಿದ್ದ ಹಂತಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದು, ಹಸೀನಾ ಅತ್ತೆ ಹಾಜಿರಾ (70) ಗಂಭೀರ ಗಾಯಗೊಂಡಿದ್ದರು.
ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಇನ್ನು ಆರೋಪಿ ಉಡುಪಿಗೆ ಬಂದಿದ್ದು ಕೆಲ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇನ್ನು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಉಡುಪಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement