ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಐಐಟಿ ಮದ್ರಾಸ್ ನಿರ್ದೇಶಕ ಪ್ರೊ. ವಿ. ಕಾಮಕೋಟಿ ಅವರನ್ನು “ಗೋಮೂತ್ರ ತಜ್ಞ” ಎಂದು ಕರೆದಿರುವುದಕ್ಕೆ ದೇಶದಾದ್ಯಂತದ 200ಕ್ಕೂ ಹೆಚ್ಚು ಶಿಕ್ಷಣ ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಪಕುಲಪತಿಗಳು ಹಾಗೂ ಮಾಜಿ ಉಪಕುಲಪತಿಗಳನ್ನು ಒಳಗೊಂಡಂತೆ ಒಟ್ಟು 215 ಶಿಕ್ಷಣ ತಜ್ಞರು ಪ್ರಿಯಾಂಕಾ ಗಾಂಧಿ ಅವರಿಗೆ ಬಹಿರಂಗ ಪತ್ರ ಬರೆದು ಅವರಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲಿ, ಈ ಹೇಳಿಕೆ ಕೇವಲ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡಿರುವುದಲ್ಲ, ಶೈಕ್ಷಣಿಕ ಚರ್ಚೆಗಳು ಮತ್ತು ವೈಜ್ಞಾನಿಕ ಸಂವಾದಗಳು ಯಾವ ರೀತಿಯಲ್ಲಿ ನಡೆಯಬೇಕು ಎಂಬ ಮೂಲಭೂತ ಪ್ರಶ್ನೆಯನ್ನೂ ಎತ್ತುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಒಬ್ಬ ವಿದ್ವಾಂಸರ ಅಭಿಪ್ರಾಯಗಳನ್ನು ವಿರೋಧಿಸುವುದಾದರೆ, ವೈಯಕ್ತಿಕ ಹಣೆಪಟ್ಟಿ ಕಟ್ಟುವ ಬದಲು ತಾರ್ಕಿಕ ಹಾಗೂ ವಿಚಾರಾಧಾರಿತ ಚರ್ಚೆಯ ಮೂಲಕ ಪ್ರತಿಕ್ರಿಯಿಸಬೇಕು ಎಂದು ಅವರು ಹೇಳಿದ್ದಾರೆ.
ಬಹಿರಂಗ ಪತ್ರದಲ್ಲಿ, “ಐಐಟಿ ಮದ್ರಾಸ್ ನಿರ್ದೇಶಕ ಪ್ರೊ. ವಿ. ಕಾಮಕೋಟಿ ಅವರನ್ನು ‘ಗೋಮೂತ್ರ ತಜ್ಞ’ ಎಂದು ನೀವು ಉಲ್ಲೇಖಿಸಿರುವ ಬಗ್ಗೆ ನಮಗೆ ತೀವ್ರ ನಿರಾಶೆಯಾಗಿದೆ. ಅದು ವ್ಯಂಗ್ಯವಾಗಿರಲಿ ಅಥವಾ ರಾಜಕೀಯ ಹೇಳಿಕೆಯಾಗಿರಲಿ, ಇಂತಹ ಪದಬಳಕೆ ಒಬ್ಬ ವ್ಯಕ್ತಿಯನ್ನು ಮೀರಿದ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ. ಪ್ರೊ. ಕಾಮಕೋಟಿ ಅವರು ದೇಶದ ಅತ್ಯುನ್ನತ ವೈಜ್ಞಾನಿಕ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಐಐಟಿ ಮದ್ರಾಸ್‌ನ ಮುಖ್ಯಸ್ಥರಾಗಿದ್ದಾರೆ” ಎಂದು ಉಲ್ಲೇಖಿಸಲಾಗಿದೆ.
ಪ್ರತಿ ಶಿಕ್ಷಣ ತಜ್ಞನಿಗೂ ತಮ್ಮ ವೈಜ್ಞಾನಿಕ ಪರಿಕಲ್ಪನೆಗಳನ್ನು ಮಂಡಿಸುವ, ಸಾಂಪ್ರದಾಯಿಕ ಜ್ಞಾನವನ್ನು ಚರ್ಚಿಸುವ ಹಾಗೂ ವೈಜ್ಞಾನಿಕ ಸಂವಾದಗಳಲ್ಲಿ ಭಾಗವಹಿಸುವ ಹಕ್ಕಿದೆ ಎಂದು ಪತ್ರದಲ್ಲಿ ಒತ್ತಿ ಹೇಳಲಾಗಿದೆ.
“ಪ್ರತಿ ಶಿಕ್ಷಣ ತಜ್ಞರಂತೆ ಪ್ರೊ. ಕಾಮಕೋಟಿಯವರಿಗೂ ತಮ್ಮ ಪರಿಕಲ್ಪನೆಗಳನ್ನು ಮಂಡಿಸುವ, ಸಾಂಪ್ರದಾಯಿಕ ಜ್ಞಾನವನ್ನು ಚರ್ಚಿಸುವ ಹಾಗೂ ವೈಜ್ಞಾನಿಕ ಸಂವಾದಗಳಲ್ಲಿ ಭಾಗವಹಿಸುವ ಹಕ್ಕಿದೆ. ಒಬ್ಬ ವಿದ್ವಾಂಸರ ಅಭಿಪ್ರಾಯಗಳ ಸಾರಾಂಶವನ್ನು ಚರ್ಚಿಸದೆ, ಅವರಿಗೆ ಹಣೆಪಟ್ಟಿ ಕಟ್ಟುವ ಮೂಲಕ ತಿರಸ್ಕರಿಸುವುದು, ಸಂವಿಧಾನವು ಪ್ರತಿಯೊಬ್ಬ ನಾಗರಿಕನಲ್ಲಿ ಬೆಳೆಸಬೇಕೆಂದು ಹೇಳಿರುವ ವೈಜ್ಞಾನಿಕ ಮನೋಭಾವವನ್ನೇ ದುರ್ಬಲಗೊಳಿಸುವ ಅಪಾಯವನ್ನು ಉಂಟುಮಾಡುತ್ತದೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
“ವೈಜ್ಞಾನಿಕ ಮನೋಭಾವ ಎಂದರೆ ಕೇವಲ ಸಂಪ್ರದಾಯೇತರ ವಿಚಾರಗಳ ಬಗ್ಗೆ ಅನುಮಾನ ವ್ಯಕ್ತಪಡಿಸುವುದಲ್ಲ. ಯಾವುದೇ ವಿಚಾರವನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಮೊದಲು ಅದನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸುವ ಮನೋಭಾವವೂ ಅದರ ಅವಿಭಾಜ್ಯ ಅಂಗವಾಗಿದೆ” ಎಂದು ಶಿಕ್ಷಣ ತಜ್ಞರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?
ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ್ದ ಪ್ರಿಯಾಂಕಾ ಗಾಂಧಿ, ಶಿಕ್ಷಣ ಕ್ಷೇತ್ರದ ಸುಧಾರಣೆಗಳ ಜಾರಿ ಹಾಗೂ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ಕೇಂದ್ರ ಸರ್ಕಾರ ರಚಿಸಿದ ಸಮಿತಿಯ ಸಂಯೋಜನೆ ಕುರಿತು ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು.
“ಪ್ರಧಾನಮಂತ್ರಿಗಳು ಹೊಸಹೊಸ ಸಮಿತಿಗಳನ್ನು ರಚಿಸಿದರೆ ಮಾತ್ರ ಸಮಸ್ಯೆ ಪರಿಹಾರವಾಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ರಾಧಾಕೃಷ್ಣನ್ ಸಮಿತಿಯ ಒಂದೇ ಒಂದು ಶಿಫಾರಸನ್ನೂ ಇದುವರೆಗೆ ಜಾರಿಗೆ ತರಲಾಗಿಲ್ಲ. ಆದರೆ ಹೊಸ ಸಮಿತಿಯಲ್ಲಿ ಮಾಜಿ ಐಬಿ ಮುಖ್ಯಸ್ಥರು, ಐಟಿ ಕಂಪನಿಯ ಮಾಲೀಕರು ಹಾಗೂ ಒಬ್ಬ ‘ಗೋಮೂತ್ರ ತಜ್ಞ’ ಕೂಡ ಇದ್ದಾರೆ” ಎಂದು ಅವರು ಹೇಳಿದ್ದರು.
ಪದ್ಮ ಪ್ರಶಸ್ತಿ ಪುರಸ್ಕೃತ ಪ್ರೊ. ವಿ. ಕಾಮಕೋಟಿ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬಳಿಕ ಪರೀಕ್ಷಾ ಸುಧಾರಣೆಗಳಿಗಾಗಿ ಕೇಂದ್ರ ಸರ್ಕಾರ ರಚಿಸಿದ್ದ ಆರು ಸದಸ್ಯರ ಕಾರ್ಯಪಡೆಯ (Task Force) ಸದಸ್ಯರಾಗಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ