ಬೆಂಗಳೂರು : ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಸುತ್ತಿರುವ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ದೆಹಲಿ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.
ಇ.ಡಿ. ನೀಡಿದ ಸಾಕ್ಷ್ಯಗಳ ಕುರಿತಂತೆ ವಿಚಾರಣಾ ನ್ಯಾಯಾಲಯ ತನ್ನ ವಿವೇಚನೆ ಬಳಸಿಲ್ಲ. ಪ್ರಕರಣ ವಾದಿಸಲು ಇ.ಡಿ.ಗೆ ಸೂಕ್ತ ಅವಕಾಶ ನೀಡಿಲ್ಲ ಎಂದು ನ್ಯಾಯಮೂರ್ತಿ ಸುಧೀರಕುಮಾರ ಜೈನ್ ಹೇಳಿದ್ದಾರೆ.
ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಿ ಜೂನ್ 20ರಂದು ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಇ.ಡಿ. ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್‌ಎ) ಸೆಕ್ಷನ್ 45ರ ಅಡಿಯಲ್ಲಿ ಜಾಮೀನಿಗೆ ಅವಳಿ ಷರತ್ತುಗಳ ಕುರಿತಾದ ವಾದಕ್ಕೆ ವಿಚಾರಣಾ ನ್ಯಾಯಾಲಯ ಸೂಕ್ತವಾಗಿ ಪ್ರತಿಕ್ರಿಯಿಸಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೆ, ಕೇಜ್ರಿವಾಲ್ ಅವರ ಅಂತಹ ಹಕ್ಕನ್ನು ಹೈಕೋರ್ಟ್ ಸ್ವತಃ ಹಿಂದಿನ ಆದೇಶದಲ್ಲಿ ತಿರಸ್ಕರಿಸಿದ್ದರಿಂದ ಇ.ಡಿ. ಕಡೆಯಿಂದ ಲೋಪ ಉಂಟಾಗಿದೆ ಎನ್ನುವ ವಿಚಾರಣಾ ನ್ಯಾಯಾಲಯದ ತೀರ್ಮಾನ ತಪ್ಪಾದುದು ಎಂದು ಹೈಕೋರ್ಟ್ ಹೇಳಿದೆ.
ವಿಚಾರಣಾ ನ್ಯಾಯಾಲಯವು ಜೂನ್ 20ರಂದು ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ₹ 1 ಲಕ್ಷ ಜಾಮೀನು ಬಾಂಡ್ ಪಡೆದು ಅವರನ್ನು ಬಿಡುಗಡೆ ಮಾಡಲು ಆದೇಶಿಸಿತ್ತು.
ಕೇಜ್ರಿವಾಲ್ ಅವರ ಅಪರಾಧದ ಬಗ್ಗೆ ನೇರ ಸಾಕ್ಷ್ಯ ನೀಡಲು ಇ ಡಿ ವಿಫಲವಾಗಿದ್ದು ಇನ್ನೊಬ್ಬ ಆರೋಪಿ ವಿಜಯ ನಾಯರ್ ಕೇಜ್ರಿವಾಲ್ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅದು ಸಾಬೀತುಪಡಿಸಿಲ್ಲ ಎಂಬುದಾಗಿ ವಿಚಾರಣಾ ನ್ಯಾಯಾಲಯವಾದ ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ನಿಯಾಯ್ ಬಿಂದು ಜಾಮೀನು ನೀಡುವ ವೇಳೆ ತಿಳಿಸಿದ್ದರು
ಜಾಮೀನು ಪ್ರಶ್ನಿಸಿ ಇ.ಡಿ. ತಕ್ಷಣವೇ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು. ಪ್ರಕರಣದ ತುರ್ತು ವಿಚಾರಣೆ ನಡೆದು ಜೂನ್ 21ರಂದು ನ್ಯಾಯಮೂರ್ತಿ ಜೈನ್ ಅವರಿದ್ದ ಪೀಠ ಜಾಮಿನು ಆದೇಶ ಜಾರಿಗೆ ಎರಡು ದಿನಗಳ ಕಾಲ ಮಧ್ಯಂತರ ತಡೆ ನೀಡಿತ್ತು. ಇಂದು ಮಂಗಳವಾರ ಇದೇ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ಆದೇಶ ನೀಡಿದೆ.
ಈ ಮಧ್ಯೆ ಸೋಮವಾರ ʼಅಂತಿಮ ಆದೇಶ ನೀಡದೆ ಕೇಜ್ರಿವಾಲ್ ಅವರ ಜಾಮೀನಿಗೆ ದೆಹಲಿ ಹೈಕೋರ್ಟ್ ತಡೆ ನೀಡಿರುವುದು ವಾಡಿಕೆಯಲ್ಲಿಲ್ಲದ ಸಂಗತಿʼ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ, ಹೈಕೋರ್ಟ್‌ನ ಅಂತಿಮ ಆದೇಶಕ್ಕಾಗಿ ಕಾಯುವುದಾಗಿ ತಿಳಿಸಿದ್ದ ಸುಪ್ರೀಂ ಕೋರ್ಟ್ ಜೂನ್ 26ಕ್ಕೆ ವಿಚಾರಣೆ ಮುಂದೂಡಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ