ನವದೆಹಲಿ: ಹಿಂದೂ ಮಹಾಕಾವ್ಯ ರಾಮಾಯಣದಲ್ಲಿ ಮಹತ್ವದ ಸ್ಥಾನ ಪಡೆದಿರುವ ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭೇಟಿ ನೀಡಿದರು.
ರಾವಣನಿಂದ ಸೀತಾದೇವಿಯನ್ನು ಅಪಹರಿಸಿದ ನಂತರ ಜಟಾಯು ಸೀತಾದೇವಿಯನ್ನು ಹಿಂಬಾಲಿಸಿದ ಸ್ಥಳ ಲೇಪಾಕ್ಷಿ ಎಂದು ನಂಬಲಾಗಿದೆ.
ಸಾಯುತ್ತಿರುವ ಜಟಾಯು, ಸೀತಾ ದೇವಿಯ ಸೆರೆಯಲ್ಲಿರುವ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ತಿಳಿಸಿದ ನಂತರ, ಲೇಪಾಕ್ಷಿಯಲ್ಲಿ ಭಗವಾನ್ ರಾಮನಿಂದ ದಿವ್ಯ ವಿಮೋಚನೆಯಾಗಿ ‘ಮೋಕ್ಷ’ ಪಡೆದ ಸ್ಥಳ ಎಂದು ಐತಿಹ್ಯವಿದೆ.
ಅಯೋಧ್ಯೆಯ ಭವ್ಯವಾದ ರಾಮಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಕೆಲವೇ ದಿನಗಳ ಮೊದಲು ಪ್ರಧಾನಿ ಮೋದಿ ಈ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ನ್ಯೂ ಡ್ರೈ ಡಾಕ್ ಮತ್ತು ಇಂಟರ್ನ್ಯಾಷನಲ್ ಶಿಪ್ ರಿಪೇರಿ ಫೆಸಿಲಿಟಿ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಿ ಮಂಗಳವಾರದಿಂದ ಮೋದಿ ಆಂಧ್ರ ಪ್ರದೇಶ ಮತ್ತು ಕೇರಳಕ್ಕೆ ಎರಡು ದಿನಗಳ ಪ್ರವಾಸದಲ್ಲಿದ್ದಾರೆ.
ಬುಧವಾರ, ಪ್ರಧಾನಿ ಮೋದಿ ಅವರು ಕೇರಳದ ಗುರುವಾಯೂರು ಮತ್ತು ತ್ರಿಪ್ರಯಾರ್ ಶ್ರೀ ರಾಮಸ್ವಾಮಿ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ಲೇಪಾಕ್ಷಿ ಸ್ಥಳದ ಮಹತ್ವ….
ರಾಮಾಯಣ ಹಾಗೂ ಶಿವನ ಕತೆಗಳಿಗೆ ಕುರುಹಾಗಿ ನಿಂತಿರುವ ಲೇಪಾಕ್ಷಿ ಅದ್ಭುತ ಶಿಲ್ಪಕಲೆಗಳ ತವರೂರು. ಈ ಸ್ಥಳ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಹಿಂದೂಪುರದಿಂದ 15 ಕಿ.ಮೀ. ಗಳಷ್ಟು ದೂರದಲ್ಲಿ ಮತ್ತು ಬೆಂಗಳೂರು ನಗರದಿ೦ದ ಸುಮಾರು 125 ಕಿ.ಮೀ. ಗಳಷ್ಟು ದೂರದಲ್ಲಿದೆ. ತಾಯಿ ಸೀತೆಯನ್ನು ಅಪಹರಿಸುತ್ತಿದ್ದ ರಾವಣನೊಂದಿಗೆ ಹೋರಾಡಿದ ಜಟಾಯು ತೀವ್ರವಾಗಿ ಗಾಯಗೊಂಡ ನಂತರ ಬಿದ್ದ ಸ್ಥಳವೇ ಲೇಪಾಕ್ಷಿ ಎಂದು ಹೇಳಲಾಗುತ್ತದೆ.
ಸಾಯುವ ಹಂತದಲ್ಲಿ ಇಲ್ಲಿ ಬಿದ್ದ ಜಟಾಯುವನ್ನು ನೋಡಿದ ರಾಮ, ಸ್ಥಳೀಯ ಭಾಷೆಯಲ್ಲಿ’ಲೇ ಪಕ್ಷಿ’ ಎಂದು ಕರೆಯುತ್ತಾನೆ. ನಂತರದ ದಿನಗಳಲ್ಲಿ ಇದೇ ಲೇಪಾಕ್ಷಿಯಾಗುತ್ತದೆ. ಅಲ್ಲಿಗೆ ಭೇಟಿ ನೀಡಿದ ರಾಮನಿಗೆ ಮಾ ಸೀತೆಯನ್ನು ರಾವಣನು ದಕ್ಷಿಣಕ್ಕೆ ಕರೆದೊಯ್ದನೆಂದು ಹೇಳಿ ಜಟಾಯುವು ಇದೇ ಜಾಗದಲ್ಲಿ ಮೋಕ್ಷ ಪಡೆದಿದ್ದಾನೆ ಎಂಬುದು ನಂಬಿಕೆ.ಇಲ್ಲಿ ಪಾದದ ಗುರುತೊಂದನ್ನು ಕಾಣಬಹುದಾಗಿದ್ದು, ಇದು ಸೀತಾ ಮಾತೆಯ ಪಾದದ ಗುರುತು ಎಂದು ನಂಬಲಾಗಿದೆ. ಗುಪ್ತ ಮೂಲದಿಂದ ಬಂದ ನೀರು ಯಾವಾಗಲೂ ಇರುತ್ತದೆ. ಇಲ್ಲಿನ ಲೇಪಾಕ್ಷಿ ವೀರಭದ್ರಸ್ವಾಮಿ ದೇವಾಲಯದಲ್ಲಿ ಶಿವ ಪಾರ್ವತಿ ವಿವಾಹಕ್ಕಾಗಿ ನಿರ್ಮಿಸಿದ ಕಲ್ಯಾಣ ಮಂಟಪವನ್ನೂ ಕಾಣಬಹುದು. ಆದರೆ ಕಾರಣಾಂತರಗಳಿಂದ ಇಲ್ಲಿ ವಿವಾಹವಾಗಲಿಲ್ಲ ಎಂದು ಹೇಳಲಾಗಿದೆ. ಇಲ್ಲಿನ ಏಳು ಹೆಡೆಯ ನಾಗವು ಶಿವಲಿಂಗಕ್ಕೆ ಸುತ್ತಿರುವಂಥ ನಾಗಲಿಂಗ ಶಿಲ್ಪವು ಜನಪ್ರಿಯವಾಗಿದೆ. ದೇಶದಲ್ಲೇ ಅತಿ ದೊಡ್ಡ ನಂದಿ ವಿಗ್ರಹ ಕೂಡ ಇಲ್ಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ