ಕುಮಟಾ : ಸೌರಭ ಸಂಸ್ಥೆ ವತಿಯಿಂದ ಆಯೋಜಿಸಿದ್ದ ‘ರಜತ ಸಂಭ್ರಮ ಸೌರಭ’ ಕಾರ್ಯಕ್ರಮದಲ್ಲಿ ತಾನಸೇನ್ ಪ್ರಶಸ್ತಿ ಪುರಸ್ಕೃತ ಹಿಂದುಸ್ತಾನೀ ಗಾಯಕ ಪಂ. ಗಣಪತಿ ಭಟ್ಟ ಹಾಸಣಗಿ ಅವರಿಗೆ ʼಸೌರಭ ರಾಷ್ಟ್ರೀಯ ಸಮ್ಮಾನʼ ಪುರಸ್ಕಾರ ನೀಡಿ ಗೌರವಿಸಲಾಯಿತು.
‘ರಜತ ಸಂಭ್ರಮ ಸೌರಭ’ ಕಾರ್ಯಕ್ರಮದ ನಿಮಿತ್ತ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹವ್ಯಕ ಸಭಾ ಭವನದಲ್ಲಿ ಭಾನುವಾರ ದಿನವಿಡೀ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಂಡಿತ ಗಣಪತಿ ಭಟ್ ಹಾಸಣಗಿ ಅವರಿಗೆ ʼಸೌರಭ ರಾಷ್ಟ್ರೀಯ ಸಮ್ಮಾನʼ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಿಖರ ನುಡಿ ಆಡಿದ ‘ಥಟ್ ಅಂತ ಹೇಳಿ’ ಕಾರ್ಯಕ್ರಮ ನಿರೂಪಕ, ವೈದ್ಯ, ಚಿಂತಕ ಡಾ. ನಾ. ಸೋಮೇಶ್ವರ ಅವರು, ಸಂಗೀತ, ಸಾಹಿತ್ಯ, ಯಕ್ಷಗಾನ, ನೃತ್ಯ ಮೊದಲಾದ ಸಾಂಸ್ಕೃತಿಕ ಮೌಲ್ಯಗಳಿಂದ ಸಮೃದ್ಧವಾದ ನಮ್ಮ ಭಾರತೀಯ ಸಂಸ್ಕೃತಿ ಈಗ ಪಾಶ್ಚಾತ್ಯ ಅಂಧಾನುಕರಣೆಯಿಂದ ಅಪಾಯದ ಅಂಚಿನಲ್ಲಿದೆ. ಇದನ್ನು ಮನಗಂಡು ಕಳೆದು 28 ವರ್ಷಗಳಿಂದ ಸಾಂಸ್ಕೃತಿಕ ಲೋಕಕ್ಕೆ ಒತ್ತಾಸೆಯಾಗಿ ನಿಂತಿರುವ ಸೌರಭ ಸಂಸ್ಥೆಯ ಸದಸ್ಯರ ಕಾರ್ಯ ಶ್ಲಾಘನೀಯ. ಭಾರತೀಯ ಸಂಸ್ಕೃತಿಯು ಉತ್ಕೃಷ್ಟವಾದ ಸಂಸ್ಕೃತಿಯಾಗಿದೆ. ಈ ಸಾಂಸ್ಕೃತಿಕ ಸಮೃದ್ಧಿ, ಪರಂಪರೆ ಹಾಗೂ ಮೌಲ್ಯ ಉಳಿಸಲು ಸೌರಭ ಸಂಘಟನೆ ಮೂಲಕ ಅನೇಕರು ಕಟಿಬದ್ಧರಾಗಿ ನಿಂತಿದ್ದಾರೆ ಎಂದರು.
ಭಾರತೀಯ ಸಂಗೀತ ಪರಂಪರೆಯಲ್ಲಿ ಗುರು-ಶಿಷ್ಯ ಬಾಂಧವ್ಯ ಪ್ರಧಾನವಾಗಿದೆ ಹಾಗೂ ಪರಂಪರೆಯಾಗಿದೆ. ಪಂ. ಗಣಪತಿ ಭಟ್ಟ ಹಾಸಣಗಿ ಅವರು ಇಂತಹ ಗುರು-ಶಿಷ್ಯ ಪರಂಪರೆ ಅಡಿಯಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ಬೆಳೆದವರು, ಸಂಗೀತ ರೂಢಿಸಿಕೊಂಡವರು. ಇಂತಹ ಸರಸ್ವತೀ ಆರಾಧಕರಿಗೆ ರಾಷ್ಟ್ರೀಯ ಸೌರಭ ಸಮ್ಮಾನ್ ಪ್ರಶಸ್ತಿ ದೊರೆತಿದೆ ಎಂಬುದೇ ಸಂತಸದ ವಿಚಾರ. ಇವರಿಗೆ ಪದ್ಮ ಪ್ರಶಸ್ತಿ ಏಕೆ ಬಂದಿಲ್ಲ ಎಂಬುದೇ ಪ್ರಶ್ನೆಯಾಗಿದೆ. ಆದಷ್ಟು ಶೀಘ್ರ ಅವರಿಗೆ ಪದ್ಮ ಪ್ರಶಸ್ತಿ ದೊರೆಯುವಂತಾಗಲಿ ಎಂದು ಹಾರೈಸಿದರು.
ರಾಷ್ಟ್ರೀಯ ಸೌರಭ ಸಮ್ಮಾನ್ ಸ್ವೀಕರಿಸಿ ಮಾತನಾಡಿದ ಪಂ. ಗಣಪತಿ ಭಟ್ಟ ಹಾಸಣಗಿ, ನಾನು ಕಾಲೇಜು ದಿನಗಳಲ್ಲಿಯೇ ಸಂಗೀತದ ಸೆಳೆತಕ್ಕೆ ಒಳಗಾಗಿ ಅದನ್ನು ಕಲಿಯಲು ಮುಂದಾದೆ. ನನ್ನನ್ನು ತಿದ್ದಿ ತೀಡಿ ಈ ರೀತಿಯಾಗಿ ರೂಪಿಸಿರುವುದು ನನ್ನ ಗುರುಗಳು. ನಾನು ಸಂಗೀತಗಾರನಾಗಲು ಅವರ ಕಾರ್ಯವೇ ದೊಡ್ಡದು, ಇದರಲ್ಲಿ ನನ್ನದೇನೂ ಇಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೌರಭದ ಅಧ್ಯಕ್ಷ ಶ್ರೀಕಾಂತ ಭಟ್ಟ ತುಂಬಲೆಮಠ ಮಾತನಾಡಿ ಆರ್ಥಿಕ, ರಾಜಕೀಯ, ಇತರ ಯಾವುದೇ ಉದ್ದೇಶವಿಲ್ಲದೆ ಸುಧೋರಣೆಯಿಂದ ಉಚಿತವಾಗಿ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಉಚಿತವಾಗಿ ನೀಡುತ್ತ ಬಂದ ಸಂತೃಪ್ತಿ ಇರುವ ಸಾಂಸ್ಕೃತಿಕ ಸಂಘಟನೆ ನಮ್ಮದು. ಎಲ್ಲರ ಸಹಕಾರದಿಂದ ಈ ಸಂಘಟನೆಯು ಯಶಸ್ವಿಯಾಗಿ ರಜತ ಸಂಭ್ರಮ ಆಚರಿಸಲು ಕಾರಣವಾಯಿತು ಎಂದು ಸ್ಮರಿಸಿದರು.
ಉಪಾಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಸೌರಭದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ತರ ಕನ್ನಡದಲ್ಲಿ ಸಾಂಸ್ಕೃತಿಕ ವಾತಾವರಣ ಮೂಡಿಸುವುದು, ಮುಂದಿನ ಪೀಳಿಗೆಯಲ್ಲಿ ಕಲಾಸಕ್ತಿ ಮೂಡಿಸುವುದು ನಮ್ಮ ಗುರಿ ಎಂದರು.
ಡಾ. ಅನಿಲ ಹೆಗಡೆ ಸ್ವಾಗತಿಸಿದರು, ಕಾರ್ಯದರ್ಶಿ ಅರುಣ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ಗಣೇಶ ಜೋಶಿ ಸಂಕೊಳ್ಳಿ ನಿರೂಪಿಸಿದರು. ಎಸ್. ವಿ ಹೆಗಡೆ ವಂದಿಸಿದರು. ಸದಸ್ಯರಾದ ಜಯಂತ ಮಣಕಿಕರ, ವಿನಾಯಕ ಹೆಗಡೆಕಟ್ಟೆ, ಆನಂದ ಹೆಗಡೆ, ಕಿರಣ ಭಟ್ಟ, ಡಿ.ಜಿ ಹೆಗಡೆ ಇದ್ದರು.
ದಿನವಿಡೀ ನಡೆದ ವೈಶಿಷ್ಟ್ಯಪೂರ್ಣವಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಂಜಾನೆ ‘ಉದಯರಾಗ ಸೌರಭ’ ಕಾರ್ಯಕ್ರಮದಲ್ಲಿ ಗಾಯಕ ಪಂ. ಶ್ರೀಪಾದ ಹೆಗಡೆ ಕಂಪ್ಲಿ ಹಿಂದೂಸ್ತಾನೀ ಗಾಯನ, ‘ಕಾವ್ಯಾಭಿನಯ ಸೌರಭ’ ಕಾರ್ಯಕ್ರಮದಲ್ಲಿ ಡಾ. ಶ್ರೀಪಾದ ಭಟ್ ಪರಿಕಲ್ಪನೆಯ ‘ಹಕ್ಕಿ ಮತ್ತು ಅವಳು’ ಕಾವ್ಯಾಭಿನಯ ಕೋಟದ ಸುವಿಕಾ ಸಾಂಸ್ಕೃತಿಕ ಸಂಘಟನೆಯ ಕಾವ್ಯಾ ಹಂದೆ ಪ್ರಸ್ತುತಪಡಿಸಿದರು. ಯುವ ಸಾಹಿತಿ, ಪತ್ರಕರ್ತ ಪ್ರಮೋದ ಮೋಹನ ಹೆಗಡೆ ಯುವ ಸಾಹಿತ್ಯ ಸೌರಭ ಕಾರ್ಯಕ್ರಮ ನಡೆಸಿಕೊಟ್ಟರು ಹಾಗೂ ‘ಚಿಂತನ ಸೌರಭ’ ಕಾರ್ಯಕ್ರಮದಲ್ಲಿ ಚಿಂತಕ, ಚಂದನ ವಾಹಿನಿಯ ಥಟ್ ಅಂತ ಹೇಳಿ ಖ್ಯಾತಿಯ ಡಾ. ನಾ. ಸೋಮೇಶ್ವರ ಭಾರತೀಯತೆಯ ಹಿರಿಮೆ-ಘರಿಮೆ ವಿಷಯದ ಕುರಿತು ಉಪನ್ಯಾಸ ನೀಡಿದರು.
‘ಯಕ್ಷ-ಗಾನ- ವ್ಯಾಖ್ಯಾನ ಸೌರಭ’ ಕಾರ್ಯಕ್ರಮದಲ್ಲಿ ವಿದ್ವಾನ್ ಗಣಪತಿ ಭಟ್ಟ ಯಲ್ಲಾಪುರ ವಿದ್ವಾನ್ ಕೆ. ಶ್ರೀಪತಿ ಉಪಾಧ್ಯಾಯ ಪಾಲ್ಗೊಂಡಿದ್ದರು, ಮೃದಂಗದಲ್ಲಿ ಬಾಲಚಂದ್ರ ಭಾಗ್ವತ್, ವಯೊಲಿನ್ ನಲ್ಲಿ ಶರ್ಮಿಳಾ ರಾವ್ ಉಡುಪಿ ಪಾಲ್ಗೊಂಡಿದ್ದರು.
ಎಂ.ಎ ಹೆಗಡೆ ದಂಟಕಲ್ ವಿರಚಿತ ‘ದಶಾವತಾರ’ದ ಅನನ್ಯ ಪ್ರಸ್ತುತಿ ‘ಲೀಲಾವತಾರಮ್’ ರೂಪಕವನ್ನು, ಬಾಲ ಪ್ರತಿಭೆ ತುಳಸಿ ಹೆಗಡೆ ಯಕ್ಷ ರೂಪಕದಲ್ಲಿ ಪ್ರಸ್ತುತಪಡಿಸಿದರು. ಭಾಗವತರಾಗಿ ಕೊಳಗಿ ಕೇಶವ ಹೆಗಡೆ, ಮೃದಂಗದಲ್ಲಿ ಶಂಕರ ಭಾಗವತ ಯಲ್ಲಾಪುರ, ಚಂಡೆಯಲ್ಲಿ ವಿಘ್ನೇಶ್ವರ ಕೆಸರಕೊಪ್ಪ, ಪ್ರಸಾದನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕರಿಸಿದರು.
‘ಸಂಧ್ಯಾ ರಾಗ ಸೌರಭ’ ಕಾರ್ಯಕ್ರಮದಲ್ಲಿ ಪಂ. ಗಣಪತಿ ಭಟ್ಟ ಹಾಸಣಗಿ ಹಿಂದೂಸ್ತಾನೀ ಗಾಯನ ಪ್ರಸ್ತುತಪಡಿಸಿದರು. ತಬಲಾದಲ್ಲಿ ಶ್ರೀಧರ ಮಾಂಡ್ರೆ, ಸಂವಾದಿನಿಯಲ್ಲಿ ಸತೀಶ ಭಟ್ಟ ಹೆಗ್ಗಾರ ಸಹಕರಿಸಿದರು. ‘ನೃತ್ಯ ಸೌರಭ’ ಕಾರ್ಯಕ್ರಮದಲ್ಲಿ, ದೆಹಲಿ ದೂರದರ್ಶನ ‘ಬಿ’ ಶ್ರೇಣಿಯ ಕಲಾವಿದೆ ಶ್ರೀಮತಿ ದೀಪ್ತಿ ವಿ. ಹೆಗಡೆ, ವಿದುಷಿ ಡಾ. ಜಯಶ್ರೀ ಶ್ರೀಕಾಂತ್ ಭಟ್ಟ ಬಳ್ಳಾರೆ, ಸೃಷ್ಟಿ ನೃತ್ಯ ಕಲಾ ಕುಟೀರ (ರಿ.) ಉಡುಪಿ ಡಾ. ಮಂಜರಿ ಚಂದ್ರ ಪುಷ್ಪರಾಜ್ ಹಾಗೂ ಅವರ ಶಿಷ್ಯ ಅವರಿಂದ ಭರತನಾಟ್ಯ ಪ್ರಸ್ತುತಿ “ಸಮರ್ಪಣಾ” ಕಾರ್ಯಕ್ರಮ ನಡೆಯಿತು.
ನಿಮ್ಮ ಕಾಮೆಂಟ್ ಬರೆಯಿರಿ