ಎರಡು ತಿಂಗಳಲ್ಲಿ ಪೌರಕಾರ್ಮಿಕರ ನೌಕರಿ ಕಾಯಂ: ಸಚಿವ ಕಾರಜೋಳ ಭರವಸೆ

ಮೈಸೂರು: ‘ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಇನ್ನೆರಡು ತಿಂಗಳಲ್ಲಿ ಕಾಯಂಗೊಳಿಸಿ ಸರ್ಕಾರಿ ನೌಕರರನ್ನಾಗಿ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದರು.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಮತ್ತು ಜಿಲ್ಲಾಡಳಿತ ಸಹಯೋಗದಲ್ಲಿ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಏರ್ಪಡಿಸಿದ್ದ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜಾಗೃತಿ ಸಂದರ್ಭದಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಬಂದು 75 ವರ್ಷಗಳಾದವು.‌ ಆದರೆ, ದೀನ-ದಲಿತರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿಲ್ಲ. ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಇನ್ನೂ ಇದ್ದಾರೆ ಎಂದು ನಾವು ನಾಚಿಕೆಪಟ್ಟುಕೊಳ್ಳಬೇಕಾಗಿದೆ. ಮಲ ಹೊರುವ ಪದ್ಧತಿ ನಿಷೇಧಿಸಿದ ನಂತರವೂ ಪೌರಕಾರ್ಮಿಕರ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಎಂದು ವಿಷಾದಿಸಿದರು.

ನಮ್ಮ ಮಕ್ಕಳಿಗೂ ಶಿಕ್ಷಣ ಸಿಗಬೇಕು. ನಮ್ಮನ್ನು ಸರ್ಕಾರಿ ನೌಕರರೆಂದು‌ ಪರಿಗಣಿಸಬೇಕು ಎಂದು ಸಫಾಯಿ ಕರ್ಮಚಾರಿಗಳು ಅಂಗಲಾಚಿದರೂ ಅವರ ಬೇಡಿಕೆ ಈಡೇರಿರಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನನ್ನ ಕೋರಿಕೆಯ ಮೇರೆಗೆ ಸಫಾಯಿ‌ ಕರ್ಮಚಾರಿ ಆಯೋಗ ಸ್ಥಾಪಿಸಿದರು. ಆದಾಗ್ಯೂ ಅವರ ಸಮಸ್ಯೆಗಳು ಉಳಿದಿವೆ. ಆದರೆ, ನಮ್ಮ ಸರ್ಕಾರವು ಪೌರಕಾರ್ಮಿಕರ ಕಾಯಂಗೆ ಕ್ರಮ ವಹಿಸಿದೆ. ಅಲ್ಲಿವರೆಗೆ ಸಂಕಷ್ಟ ಪರಿಹಾರವಾಗಿ ತಲಾ ₹ 2ಸಾವಿರ ನೀಡುತ್ತಿದೆ. ಅವರನ್ನು ಕಾಯಂಗೊಳಿಸುವವರೆಗೂ‌ ನಮಗೆ ಸಮಾಧಾನವಿಲ್ಲ. ಕಾಯಂಗೊಳಿಸಲು ಎದುರಾಗಿರುವ ಕಾನೂನು ತೊಡಕು ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಈಗಿರುವ ನೇಮಕಾತಿ ಕಾನೂನಿನ ಪ್ರಕಾರ ಶೇ 82ರಷ್ಟು ಹುದ್ದೆಗಳನ್ನು ಬೇರೆ ಸಮಾಜದವರಿಗೆ ಕೊಡಬೇಕು ಎಂದಿದೆ. ಆದರೆ, ಶೇ 100ರಷ್ಟು ನಮ್ಮ ಸಮಾಜದವರೇ ಬರಬೇಕು ಎನ್ನುವುದು ನಮ್ಮ ಆಶಯ. ಇದಕ್ಕಾಗಿ ವಿಶೇಷ ನೇಮಕಾತಿ ನಿಯಮ ರೂಪಿಸಲು ಸಮಿತಿ‌ ರಚಿಸಲಾಗಿದೆ. ತ್ವರತವಾಗಿ ವರದಿ ಪಡೆದು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

ನಗರ ಪ್ರದೇಶದಲ್ಲಿರುವ 52 ಸಾವಿರ ಪೌರಕಾರ್ಮಿಕರೆಲ್ಲರಿಗೂ ನ್ಯಾಯ ಒದಗಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಕೇವಲ 6 ಸಾವಿರ ಪೌರಕಾರ್ಮಿಕರಿದ್ದಾರೆ ಎಂದು ವರದಿ ಕೊಟ್ಟಿದ್ದಾರೆ. ಆಯೋಗದ ಅಧ್ಯಕ್ಷರು ಎಲ್ಲ ಗ್ರಾ.ಪಂಗಳ ಅಧ್ಯಕ್ಷರು, ಅಧಿಕಾರಿಗಳ ಸಭೆ ನಡೆಸಿ ನಿಖರ ಮಾಹಿತಿ ಪಡೆದುಕೊಳ್ಳಬೇಕು. ಅಧಿಕಾರಿಗಳು ಅಸೆಡ್ಡೆಯಿಂದ ನೌಕರಿ ಮಾಡಬಾರದು ಎಂದು ಸೂಚಿಸಿದರು.
ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಸಫಾಯಿ‌ ಕರ್ಮಚಾರಿಗಳ ಮಕ್ಕಳಿಗೆ ಶೇ 5ರಷ್ಟು ಸೀಟುಗಳನ್ನು ಕೊಡಲಾಗುತ್ತದೆ. ಅದಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಪಾವತಿಸುತ್ತದೆ. ಸಮಾಜದವರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಮಾತನಾಡಿದರು. ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ತಿಳಿಸಿದರು.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪೌರಕಾರ್ಮಿಕರ 81 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement