ಕರ್ನಾಟಕದ ಕೋವಿಡ್ ಪಾಸಿಟಿವಿಟಿ ದರ ರಾಷ್ಟ್ರೀಯ ದರಕ್ಕಿಂತ ಹೆಚ್ಚಿರುವುದು ಒಳ್ಳೆಯ ಬೆಳವಣಿಗೆಯಲ್ಲ

ಬೆಂಗಳೂರು: ದೇಶದ ಎಲ್ಲ ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದ್ದು, 2ನೇ ಅಲೆ ಆರಂಭ ಕಂಡುಬಂದಿದೆ. ರಾಜ್ಯದಲ್ಲ ಈಗ ಪಾಸಿಟಿವಿಟಿ ದರ 1.6% ಆಗಿದ್ದು, ರಾಷ್ಟ್ರೀಯ ಸರಾಸರಿ ಪಾಸಿಟಿವಿಟಿ ದರ 1.5% ಇದೆ. ನಮ್ಮ ರಾಜ್ಯದ ಪಾಸಿಟಿವಿಟಿ ದರ ಹೆಚ್ಚಿದೆ. ಇದನ್ನು ಒಳ್ಳೆಯ ಬೆಳವಣಿಗೆ ಅಲ್ಲ, ಹೀಗಾಗಿ ಜಾಗರೂಕತೆ ವಹಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರತಿ ದಿನ ಪರೀಕ್ಷೆ ಮಾಡಲಾಗುತ್ತಿದೆ. ದೇಶದ ಎಂಟ್ಹತ್ತು ರಾಜ್ಯಗಳಲ್ಲಿ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ 2.82 ಲಕ್ಷ, ಕೇರಳದಲ್ಲಿ 24 ಸಾವಿರ, ಪಂಜಾಬ್ ನಲ್ಲಿ 22 ಸಾವಿರ, ಕರ್ನಾಟಕದಲ್ಲಿ 19 ಸಾವಿರ ಸಕ್ರಿಯ ಪ್ರಕರಣಗಳಿವೆ. ಎಲ್ಲ ರಾಜ್ಯಗಳಲ್ಲಿ ಕೋವಿಡ್ ಎರಡನೇ ಅಲೆ ಆರಂಭವಾಗಿದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಮುಂಜಾಗ್ರತೆ ವಹಿಸದಿದ್ದರೆ ಸೋಂಕು ಹೆಚ್ಚಾಗಲಿದೆ ಚ ಎಂದರು.
ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಭೌತಿಕ ಅಂತರ ನಿಯಮ ಪಾಲಿಸಬೇಕು. ಎಲ್ಲರೂ ಲಸಿಕೆ ಪಡೆಯಬೇಕು.
ಆರೋಗ್ಯ ಸಿಬ್ಬಂದಿ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಗುರಿಯಲ್ಲಿ, ಬೀದರ್ ಶೇ.113, ಧಾರವಾಡ ಶೇ.107, ಗದಗ ಶೇ.103 ಲಸಿಕೆ ಗುರಿ ಸಾಧಿಸಿದೆ. ಬೆಂಗಳೂರು ನಗರ ಶೇ.61, ಬಾಗಲಕೋಟೆ ಶೇ.64, ದಾವಣಗೆರೆ ಹಾಗೂ ಕೊಪ್ಪಳ ಶೇ.65 ಗುರಿ ಸಾಧಿಸಿದೆ. ಇಲ್ಲಿವರೆಗೆ 2,22,377 ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗಿದೆ. 3,34,110 ಆರೋಗ್ಯ ಸಿಬ್ಬಂದಿಗೆ ಎರಡನೇ ಡೋಸ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
60 ವರ್ಷ ವಯಸ್ಸು ಮೇಲ್ಪಟ್ಟ 16,18,150 ಮಂದಿಗೆ ಲಸಿಕೆ ನೀಡಲಾಗಿದ್ದು, 45 ವರ್ಷದಿಂದ 60 ವರ್ಷದವರೆಗಿನ ಸಹ ಅಸ್ವಸ್ಥತೆ ಹೊಂದಿದ 4,70,602 ಮಂದಿ ಲಸಿಕೆ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವಲ್ಲಿ ಚಿತ್ರದುರ್ಗ ಶೇ.37, ರಾಮನಗರ ಶೇ.37.8, ಕೊಡಗು ಶೇ.38, ಚಾಮರಾಜನಗರ ಶೇ.38, ಕೊಪ್ಪಳ ಶೇ.48 ಗುರಿ ಸಾಧಿಸಿವೆ. ನಾಳೆ ಅಥವಾ ನಾಡಿದ್ದರಲ್ಲಿ 12 ಲಕ್ಷ ಕೊರೊನಾ ಲಸಿಕೆ ಡೋಸ್ ಬರಲಿದೆ ಎಂದು ತಿಳಿಸಿದರು.
ಕೋವಿಡ್ ನಿಯಂತ್ರಣ ಕ್ರಮದ ಅಂಗವಾಗಿ ಜಾತ್ರೆ ಆಚರಣೆಗೆ ಅನುಮತಿ ನೀಡುತ್ತಿಲ್ಲ. ಕ್ರಮೇಣ ಇನ್ನೂ ಬಿಗಿಯಾದ ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳನ್ನು ಕೋರಲಾಗಿದ್ದು, ಅವರು ಈ ವಿಚಾರದಲ್ಲಿ ನಿರ್ಣಯ ಕೈಗೊಳ್ಳುತ್ತಾರೆ ಎಂದರು.

ಪ್ರಮುಖ ಸುದ್ದಿ :-   ವಿಡಿಯೊ | ನೀಟ್ ಜಟಾಪಟಿ : ಬಿಜೆಪಿಯಿಂದ ಕೆಪಿಸಿಸಿ ಕಚೇರಿ ಮುತ್ತಿಗೆ ಯತ್ನ; ಬಿಜೆಪಿ ಶಾಸಕ ಬಿಪಿ ಹರೀಶ ಮೇಲೆ ಮೊಟ್ಟೆ ಎಸೆತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement