ಬೆಲೆ ಏರಿಕೆ, ಇಂಧನ ದರ ಹೆಚ್ಚಳ ಖಂಡಿಸಿ ವಿಧಾನಸೌಧಕ್ಕೆ ಎತ್ತಿನ ಗಾಡಿಯಲ್ಲಿ ಹೊರಟ ಕಾಂಗ್ರೆಸ್‌ ನಾಯಕರು..!

ಬೆಂಗಳೂರು: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಇಂದು ವಿಧಾನ ಮಂಡಲ ಅಧಿವೇಶನದಲ್ಲಿ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದ್ದಾರೆ. ಮೊದಲ ದಿನವೇ ಅವರಿಗೆ ಕಾಂಗ್ರೆಸ್‌ ಮತ್ತು ರೈತರಿಂದ ಪ್ರತಿಭಟನೆ ಎದುರಿಸುವಂತಾಗಿದೆ.
ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಹಾಗೂ ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲ ಸಿಲಿಂಡರ್‌ ದರ ಏರಿಕೆ ಖಂಡಿಸಿ ಕಾಂಗ್ರೆಸ್ (Congress) ನಾಯಕರು ಎತ್ತಿನಗಾಡಿ ಚಲೋ ಪ್ರತಿಭಟನೆ ನಡೆಸಿದ್ದಾರೆ. ರೈತರು ವಿದಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.
ಇಂದಿನಿಂದ ಸೆ.24ರವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಬೆಲೆ ಏರಿಕೆಯನ್ನು ಖಂಡಿಸಿ ಕೈ ನಾಯಕರು ಎತ್ತಿನ ಬಂಡಿಯನ್ನು ಏರಿ ವಿಧಾನಸಭೆ ಕಲಾಪಕ್ಕೆ ಹೊರಟಿದ್ದಾರೆ. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ನಾನು ದೇಶದ ಸಾಮಾನ್ಯ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರ ಪ್ರತಿದಿನ ಜನರ ಪಿಕ್‌ ಪಾಕೆಟ್ ಮಾಡುತ್ತಿದೆ ಎಂದು ಆರೋಪಿಸಿದರು.
ತೈಲ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ. ಈ ಸರ್ಕಾರವನ್ನು ಕೆಳಗಿಳಿಸುವವರೆಗೂ ನಾವು ಹೋರಾಡುತ್ತೇವೆ ಎಂದು ಹೇಳಿಕೆ ನೀಡಿದ ಶಿವಕುಮಾರ ಪೆಟ್ರೋಲ್, ಡೀಸೆಲ್ ದರವನ್ನು 75 ರೂ.ಗಳಿಗೆ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ. ಹಿಂದಿನ ಸರ್ಕಾರ ಹೆಚ್ಚು ಸಾಲ ಮಾಡಿದೆ ಎಂದು ಹೇಳುತ್ತಾರೆ. ಕಚ್ಚಾ ತೈಲ ಬೆಲೆ ಹೆಚ್ಚಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾಗಿಲ್ಲ. ಕೇಂದ್ರ ಸರ್ಕಾರ ಬರೀ ಸುಳ್ಳು ಹೇಳುತ್ತಿದೆ. 7 ವರ್ಷದಲ್ಲಿ 24 ಲಕ್ಷ ಕೋಟಿ ರೂ. ಆದಾಯ ಬಂದಿದೆ. ಬೆಲೆ ಏರಿಕೆ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಲೆ ಏರಿಕೆಯಿಂದ ಭವಿಷ್ಯದಲ್ಲಿ ಎತ್ತಿನಗಾಡಿಯೇ ಗತಿ ಎಂಬ ಸಂದೇಶವನ್ನು ರವಾನಿಸುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಎತ್ತಿನಗಾಡಿಯನ್ನು ಏರಿ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಸಿದ್ದರಾಮಯ್ಯಗೆ ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಎಸ್​.ಆರ್.ಪಾಟೀಲ. ಮಾಜಿ ಸಚಿವ ಎಂ‌.ಬಿ.ಪಾಟೀಲ್ ಮತ್ತು ಪರಿಷತ್ ಸದಸ್ಯ ನಜೀರ್ ಅಹಮದ್ ಸಾಥ್ ನೀಡುತ್ತಿದ್ದಾರೆ.

ಪ್ರಮುಖ ಸುದ್ದಿ :-   ಅಂಜಲಿ ಹತ್ಯೆ ಪ್ರಕರಣ : ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಸಹೋದರಿ

ಎರಡು ಎತ್ತಿನಗಾಡಿಗೆ ಮಾತ್ರ ಅವಕಾಶ..:
ಕಾಂಗ್ರೆಸ್‌ನ ಎತ್ತಿನಗಾಡಿ ಚಲೋ ವಿಧಾನಸೌಧಕ್ಕೆ ತೆರಳಿದೆ. ಆದರೆ ಕೇವಲ ಎರಡು ಎತ್ತಿನ ಗಾಡಿಯಲ್ಲಿ ತೆರಳುವುದಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ಒಂದೇ ಎತ್ತಿನ ಬಂಡಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ಸಿದ್ದರಾಮಯ್ಯ ತೆರಳಿದ್ದಾರೆ.
ನಾಲ್ಕು ಎತ್ತಿನ ಗಾಡಿ ಸಹಿತ ನೂರಕ್ಕೂ ಅಧಿಕ ಪ್ರತಿಭಟನಾಕಾರರನ್ನು ವಿಂಡ್ಸನ್ ಮ್ಯಾನರ್ ಸರ್ಕಲ್ ಬಳಿ ಪೊಲೀಸರು ತಡೆದು, ಬ್ಯಾರಿಕೆಡ್ ಹಾಕಿ ಬಂದ್ ಮಾಡಿದ್ದಾರೆ. ಜೊತೆಗೆ ಚಾಲುಕ್ಯ ಸರ್ಕಲ್ ಬಳಿ ಎತ್ತಿನ ಗಾಡಿಯನ್ನು ತಡೆದ ಪೋಲಿಸರು ಬ್ಯಾರಿಕೆಡ್ ಹಾಕಿದ್ದಾರೆ.ಎರಡು ಎತ್ತಿನ ಗಾಡಿಯಲ್ಲಿ ತೆರಳಲು ಅನುಮತಿ ನೀಡಿದ್ದಾರೆ.
ಎತ್ತಿನ ಗಾಡಿಯಿಂದ ಕೆಳಗೆ ಬಿದ್ದ ಶಾಸಕ
ವಿಧಾನಸೌಧದ ಗೇಟ್ ಮುಂದೆ ಎತ್ತಿನ ಗಾಡಿಯಲ್ಲಿ ಹೋಗುತ್ತಿದ್ದಾಗ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಎತ್ತಿನ ಗಾಡಿಯಿಂದ ಕೆಳಗೆ ಬಿದ್ದರು. ವಿಧಾನಸೌಧದ ಬಳಿ ಗಲಾಟೆ ಆಗಿದ್ದರಿಂದ ಎತ್ತುಗಳು ಬೆದರಿದವು. ಹೀಗಾಗಿ  ಶಾಸಕ ವೆಂಕಟರಮಣಯ್ಯ ಎತ್ತಿನ ಗಾಡಿಯಿಂದ ಕೆಳಗೆ ಬಿದ್ದರು..
ವಿಧಾನಸೌಧದ ಆವರಣಕ್ಕೆ ಎತ್ತಿನಗಾಡಿ ಬಿಟ್ಟರೆ ಏನಾಗುತ್ತದೆ. ಆಕಾಶ ಬಿದ್ದು ಹೋಗುತ್ತದೆಯಾ ಎಂದು ಪೊಲೀಸರ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ವಿಧಾನಸೌಧದ ಗೇಟ್ ನಂಬರ್ 1ರ ಬಳಿ ಎತ್ತಿನಗಾಡಿ ಹೋಗಲು ಬಿಡಿ, ಇಲ್ಲ ಅಂದ್ರೆ ಮೇಲೆ ಓಡಿಸುತ್ತೇವೆ ಎಂದು ಪೊಲೀಸರ ಜೊತೆ ಕಾಂಗ್ರೆಸ್ ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಇಂದಿನಿಂದ (ಮೇ19) 5 ದಿನ ಧಾರಾಕಾರ ಮಳೆ

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement