ರಾಜಸ್ಥಾನ ಬಿಕ್ಕಟ್ಟಿನ ನಡುವೆ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ರೇಸ್‌ನಿಂದ ಗೆಹ್ಲೋಟ್ ಔಟ್: ಈಗ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ, ದಿಗ್ವಿಜಯ ಹೆಸರು ಮುಂಚೂಣಿಗೆ

ನವದೆಹಲಿ: ರಾಜಸ್ಥಾನದಲ್ಲಿ ತೀವ್ರ ರಾಜಕೀಯ ಬಿಕ್ಕಟ್ಟು ಮತ್ತು ಕಾಂಗ್ರೆಸ್ ಆಂತರಿಕ ಕಲಹದ ನಡುವೆ, ಪಕ್ಷದ ಅಧ್ಯಕ್ಷೀಯ ಚುನಾವಣೆಯ ರೇಸ್‌ನಿಂದ ಅಶೋಕ್ ಗೆಹ್ಲೋಟ್ ಹೊರಬಿದ್ದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರಸ್ತುತ ಕಾಂಗ್ರೆಸ್‌ನ ಉನ್ನತ ನಾಯಕತ್ವಕ್ಕಾಗಿ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ ಮತ್ತು ದಿಗ್ವಿಜಯ ಸಿಂಗ್ ಹೆಸರು ಮಂಚೂಣಿಗೆ ಬಂದಿದೆ.
“ಅವರು (ಅಶೋಕ್ ಗೆಹ್ಲೋಟ್) ಕಾಂಗ್ರೆಸ್ ಅಧ್ಯಕ್ಷೀಯ ರೇಸ್‌ನಿಂದ ಹೊರಗುಳಿದಿದ್ದಾರೆ. ಸೆಪ್ಟೆಂಬರ್ 30 ರ ಮೊದಲು ನಾಮಪತ್ರ ಸಲ್ಲಿಸುವ ಇತರ ನಾಯಕರು ಇದ್ದಾರೆ. ಮುಕುಲ್ ವಾಸ್ನಿಕ್, ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ ಸಿಂಗ್, ಕೆಸಿ ವೇಣುಗೋಪಾಲ ರೇಸ್‌ನಲ್ಲಿದ್ದಾರೆ” ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ಗೆಹ್ಲೋಟ್ ನಡೆದುಕೊಂಡ ರೀತಿ ಪಕ್ಷದ ನಾಯಕತ್ವಕ್ಕೆ ಸರಿ ಹೋಗಿಲ್ಲ. ಅವರು ಅವರ ಬಗ್ಗೆ ತುಂಬಾ ಅಸಮಾಧಾನ ಹೊಂದಿದ್ದಾರೆ” ಎಂದು ಸಿಡಬ್ಲ್ಯೂಸಿ ಸದಸ್ಯರಾಗಿರುವ ಮತ್ತೊಬ್ಬ ನಾಯಕ ಹೇಳಿದರು.
ಗೆಹ್ಲೋಟ್ ಅವರ ನಿಷ್ಠಾವಂತರಾದ 82 ರಾಜಸ್ಥಾನದ ಶಾಸಕರು ರಾಜೀನಾಮೆ ಸಲ್ಲಿಸಿದ ನಂತರ ಭಾನುವಾರ ಸಂಜೆಯಿಂದ ನಡೆದ ಡ್ರಾಮಾ ಮುಂದುವರಿದಿದೆ. ಗೆಹ್ಲೋಟ್ ಪಕ್ಷದ ಮುಖ್ಯಸ್ಥರಾಗಿ ಆಯ್ಕೆಯಾದ ಸಂದರ್ಭದಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಆಗಿ ಸೇರ್ಪಡೆಗೊಳ್ಳುವ ನಿರ್ಧಾರವನ್ನು ಪಕ್ಷದ ಶಾಸಕರ ಬೆಂಬಲದೊಂದಿಗೆ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಸಚಿನ್ ಪೈಲಟ್ ಅವರ ನಾಯಕತ್ವ ಒಪ್ಪಿಕೊಳ್ಳಲು ಗೆಹ್ಲೋಟ್‌ ಬೆಂಬಲಿಗರು ಸಿದ್ಧರಿಲ್ಲ ಎಂದು ಹೇಳಿದರು.
ಗೆಹ್ಲೋಟ್ ಬಣದೊಂದಿಗೆ ಕಡಿಮೆ ಅಥವಾ ಯಾವುದೇ ಸಮಾಲೋಚನೆಯಿಲ್ಲದೆ ನಿರ್ಧಾರ ರವಾನಿಸಲಾಗಿದೆ ಎಂಬ ಕಾರಣಕ್ಕೆ ಅಸಮಾಧಾನಗೊಂಡ ಶಾಸಕರು ರಾಜೀನಾಮೆ ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ. ಹೀಗಾಗಿ ಪಕ್ಷಕ್ಕೆ ಹೊಸ ಬಿಕ್ಕಟ್ಟು ಎದುರಾಗಿದೆ. ಒಮ್ಮತವನ್ನು ತಲುಪಲು ಮತ್ತು ನಿರ್ಣಯಕ್ಕೆ ಬರುವ ಪ್ರಯತ್ನವನ್ನು ಶನಿವಾರ ರಾತ್ರಿಯಿಡೀ ನಡೆಸಲಾಯಿತು ಆದರೆ ಪಕ್ಷವು ಬಿಕ್ಕಟ್ಟಿನಿಂದ ಹೊರಬರಲು ವಿಫಲವಾಯಿತು.
ಸೋಮವಾರ ಪಕ್ಷದ ಹಿರಿಯ ನಾಯಕರಾದ ಅಜಯ್ ಮಾಕನ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿ ಅವರಿಗೆ ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿನ ಬಗ್ಗೆ ವಿವರಿಸಿದರು. ಸಭೆಯ ನಂತರ, ಅಜಯ್ ಮಾಕನ್ ಮಾಧ್ಯಮಗಳನ್ನು ಉದ್ದೇಶಿಸಿ ಅಶೋಕ್ ಗೆಹ್ಲೋಟ್ ಅವರ ನಿಷ್ಠಾವಂತ ಶಾಸಕರ ಬೇಡಿಕೆಗಳ ಬಗ್ಗೆ ಮಾತನಾಡಿದರು. ಅಜಯ್ ಮಾಕನ್ ಅಶೋಕ ಗೆಹ್ಲೋಟ್‌ ಬೆಂಬಲಿಗರ ಷರತ್ತುಗಳನ್ನು ‘ಹಿತಾಸಕ್ತಿ ಸಂಘರ್ಷ’ ಎಂದು ಕರೆದರು.
ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಬಣಗಳ ನಡುವಿನ ಜಗಳಕ್ಕೆ ಮಧ್ಯಸ್ಥಿಕೆ ವಹಿಸಲು ಕಾಂಗ್ರೆಸ್ ಹೈಕಮಾಂಡ್ ಕಮಲನಾಥ ಅವರನ್ನು ನೇಮಿಸಿದೆ ಎಂದು ಮೂಲಗಳು ತಿಳಿಸಿವೆ. ಅಶೋಕ್ ಗೆಹ್ಲೋಟ್ ಅವರೊಂದಿಗೆ ಮಾತನಾಡುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕ ಕಮಲನಾಥ ಸೋಮವಾರ ಹೇಳಿದ್ದಾರೆ.
ಏತನ್ಮಧ್ಯೆ, ಬಿಜೆಪಿಯ ಅಮಿ ಮಾಳವಿಯಾ ಅವರು ಗೆಹ್ಲೋಟ್‌ಗೆ ವಿಭಿನ್ನ ಮಾನದಂಡದ  ಪ್ರಶ್ನೆ ಎತ್ತಿದ್ದಾರೆ. ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಇಬ್ಬರೂ ಏಕಕಾಲದಲ್ಲಿ ಪ್ರಧಾನಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಅಶೋಕ್ ಗೆಹ್ಲೋಟ್ ಅವರು ಆಯ್ಕೆಯಾದರೆ ಕಾಂಗ್ರೆಸ್ ಅಧ್ಯಕ್ಷರಾಗುವುದರೊಂದಿಗೆ ಮುಖ್ಯಮಂತ್ರಿಯಾಗಲು ಬಯಸುತ್ತಾರೆ. ಇದಕ್ಕೆ ಗಾಂಧಿಗಳು ಮತ್ತು ಉಳಿದವರಿಗೆ ವಿಭಿನ್ನ ಮಾನದಂಡಗಳು ಏಕೆ ಇರಬೇಕು ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ, ಎಎಪಿಯ ರಾಘವ್ ಚಡ್ಡಾ, “ಕಾಂಗ್ರೆಸ್ ಮುಗಿದಿದೆ, ಕೇಜ್ರಿವಾಲ್ ಈಗ ಕಾಂಗ್ರೆಸ್‌ಗೆ ಪರ್ಯಾಯ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   26/11ರ ಮುಂಬೈ ಭಯೋತ್ಪಾಕ ದಾಳಿ: ಹೇಮಂತ್ ಕರ್ಕರೆ ಕೊಂದಿದ್ದು ಉಗ್ರ ಕಸಬ್‌ ಅಲ್ಲ, ಕೊಂದಿದ್ದು ಆರ್‌ ಎಸ್‌ ಎಸ್ ನಂಟಿನ ಪೊಲೀಸ್‌ ಅಧಿಕಾರಿ ; ಕಾಂಗ್ರೆಸ್​ ನಾಯಕನ ವಿವಾದಿತ ಹೇಳಿಕೆ

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement