ಸೋನಾ ಪಪ್ಪು ಸುಲಿಗೆ ಪ್ರಕರಣ: ಕೋಲ್ಕತ್ತಾ ಡಿಸಿಪಿ ಶಾಂತನು ಸಿನ್ಹಾ ಬಿಸ್ವಾಸ್ ಬಂಧಿಸಿದ ಇ.ಡಿ.

ನವದೆಹಲಿ: ಸುಲಿಗೆ, ಹಣ ವರ್ಗಾವಣೆ ಮತ್ತು ಭೂಕಬಳಿಕೆ ಆರೋಪಗಳನ್ನು ಎದುರಿಸುತ್ತಿರುವ ಹೈಪ್ರೊಫೈಲ್ ಸೋನಾ ಪಪ್ಪು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಗುರುವಾರ ಕೋಲ್ಕತ್ತಾ ಉಪ ಪೊಲೀಸ್ ಆಯುಕ್ತ (DCP) ಶಾಂತನು ಸಿನ್ಹಾ ಬಿಸ್ವಾಸ್ ಅವರನ್ನು ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು ಈ ಹಿಂದೆ ಹಲವು ಬಾರಿ ಸಮನ್ಸ್ ಜಾರಿ ಮಾಡಿದ್ದರೂ, ಶಾಂತನು ಸಿನ್ಹಾ ಬಿಸ್ವಾಸ್ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಅವರು ದೇಶ ಬಿಟ್ಟು ಪರಾರಿಯಾಗಬಹುದು ಎಂಬ ಶಂಕೆಯ ಮೇಲೆ ತನಿಖಾ ಸಂಸ್ಥೆಯು ಈಗಾಗಲೇ ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿತ್ತು. ನಿರಂತರವಾಗಿ ಸಮನ್ಸ್ ನಿರ್ಲಕ್ಷಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಇ.ಡಿ. ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.

ಏನಿದು ‘ಸೋನಾ ಪಪ್ಪು’ ಪ್ರಕರಣ?
ಕೋಲ್ಕತ್ತಾದ ಬಾಲಿಗಂಜ್ ನಿವಾಸಿಯಾಗಿರುವ ಸೋನಾ ಪಪ್ಪು ಎಂಬ ವ್ಯಕ್ತಿಯ ವಿರುದ್ಧ ಭೂ ಕಬಳಿಕೆ, ಬೆದರಿಕೆ ಹಾಕಿ ಹಣ ವಸೂಲಿ ಮಾಡುವುದು ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣದ ಬೆನ್ನುಹತ್ತಿದ್ದ ಇ.ಡಿ. ಅಧಿಕಾರಿಗಳು, ಈ ಹಿಂದೆ ಬೆಹಾಲಾದ ಉದ್ಯಮಿ ಜೋಯ್ ಕಾಮ್ದಾರ್ ಎಂಬುವವರನ್ನು ಬಂಧಿಸಿದ್ದರು.ತನಿಖೆಯ ವೇಳೆ ಪೊಲೀಸ್ ಅಧಿಕಾರಿ ಶಾಂತನು ಸಿನ್ಹಾ ಬಿಸ್ವಾಸ್ ಅವರ ಸಂಪರ್ಕವಿರುವುದು ಬೆಳಕಿಗೆ ಬಂದಿದೆ.
ಕಳೆದ ತಿಂಗಳು ಕೋಲ್ಕತ್ತಾದ ಫರ್ನ್ ರೋಡ್‌ನಲ್ಲಿರುವ ಡಿಸಿಪಿ ನಿವಾಸದ ಮೇಲೆ ಇ.ಡಿ. ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದರು. ಸುಮಾರು 20 ಗಂಟೆಗಳ ಕಾಲ ಅಂದರೆ ಮಧ್ಯರಾತ್ರಿ 2 ಗಂಟೆಯವರೆಗೆ ಈ ಶೋಧ ಕಾರ್ಯ ನಡೆದಿತ್ತು. ಈ ವೇಳೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎನ್ನಲಾಗಿದೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಬಿಸ್ವಾಸ್ ಅವರ ಜೊತೆಗೆ ಅವರ ಇಬ್ಬರು ಪುತ್ರರಿಗೂ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಈ ಹಿಂದೆ ಸೂಚಿಸಿತ್ತು. ಆದರೆ ಇಡೀ ಕುಟುಂಬವೇ ತನಿಖೆಯಿಂದ ದೂರ ಉಳಿದಿತ್ತು. ಕೇವಲ ಸೋನಾ ಪಪ್ಪು ಪ್ರಕರಣ ಮಾತ್ರವಲ್ಲದೆ, ಈ ಹಿಂದೆ ಕಾಳೀಘಾಟ್ ಪೊಲೀಸ್ ಠಾಣೆಯ ಓಸಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ‘ಮರಳು ದಂಧೆ’ ಪ್ರಕರಣದಲ್ಲೂ ಬಿಸ್ವಾಸ್ ಹೆಸರು ಕೇಳಿಬಂದಿತ್ತು. ಒಟ್ಟು 5 ಬಾರಿ ಸಮನ್ಸ್ ನೀಡಿದರೂ ಸಹಕರಿಸದ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ ಎಂದು ಹೇಳಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಬಂಧನವು ಪೊಲೀಸ್ ಇಲಾಖೆಗೆ ದೊಡ್ಡ ಮುಜುಗರ ತಂದಿಟ್ಟಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement