ಬದೌನ್: ಪತ್ನಿ ಹಾಗೂ ಅವರ ತವರು ಮನೆಯವರೊಂದಿಗಿನ ಜಗಳದಿಂದಾಗಿ ಮನನೊಂದ ಯುವಕನೊಬ್ಬ ಬುಧವಾರ ಮಧ್ಯಾಹ್ನ ಉತ್ತರ ಪ್ರದೇಶದ ಬದೌನ್‌ನಲ್ಲಿರುವ ಎಸ್‌ಎಸ್‌ಪಿ ಕಚೇರಿಯ ಗೇಟ್‌ನಲ್ಲಿ ತನಗೆ ತಾನೇ ಬೆಂಕಿ ಹಚ್ಚಿಕೊಂಡ ಆಘಾತಕಾರಿ ಘಟನೆ ನಡೆದಿದೆ.
ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಯುವಕ ಕಚೇರಿ ಎದುರು ಬೆಂಕಿ ಹಚ್ಚಿಕೊಂಡ ನಂತರ ಪೊಲೀಸ್ ಅಧಿಕಾರಿಗಳು ಬೆಂಕಿ ನಂದಿಸಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ವ್ಯಕ್ತಿ ಬೆಂಕಿ ಹಚ್ಚಿಕೊಳ್ಳುತ್ತಿದ್ದಂತೆ ಸ್ಥಳದಲ್ಲಿದ್ದ ಜನ ಜೋರಾಗಿ ಕಿರುಚಿಕೊಂಡಿದ್ದು, ಇದನ್ನು ಕೇಳಿದ ಪೊಲೀಸರು ಬೆಂಕಿ ನಂದಿಸಲು ಓಡಿ ಬಂದಿದ್ದಾರೆ. ಮಾಹಿತಿ ಪ್ರಕಾರ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತನ ಸ್ಥಿತಿ ಗಂಭೀರವಾದ ಕಾರಣ, ನಂತರ ಅವರನ್ನು ಬರೇಲಿಯ ಆಸ್ಪತ್ರೆಗೆ ದಾಖಲಿಸಲಾಯಿತು.
ಗುಲ್ಫಾಮ್ ಎಂಬ ವ್ಯಕ್ತಿ ನೈ ಸರೈ ನಿವಾಸಿಯಾಗಿದ್ದು, ಆತನ ಪತ್ನಿ ಈತನ ಜೊತೆಗಿನ ಭಿನ್ನಾಭಿಪ್ರಾಯದ ನಂತರ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದಳು. ಈತ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಎರಡು ದಿನಗಳ ಹಿಂದೆ ಡಿಸೆಂಬರ್ 30 ರಂದು (ಸೋಮವಾರ) ಆತನ ಬಾಮೈದನ ಪತ್ನಿ ಆತನ ವಿರುದ್ಧ ಕಿರುಕುಳದ ಪ್ರಕರಣ ದಾಖಲಿಸಿದ್ದಳು. ಇದರ ಬೆನ್ನಲ್ಲೇ ಗುಲ್ಪಾಮ್ ತನಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ.
ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ), ಸಿಟಿ ಸರ್ಕಲ್ ಆಫೀಸರ್ (ಸಿಒ) ಮತ್ತು ಸ್ಥಳೀಯ ಶಾಸಕರು ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತ ಆರೋಪಿಸಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯುವಾಗ ಆತ ಈ ಆರೋಪಗಳನ್ನು ಪುನರಾವರ್ತಿಸಿದ್ದಾನೆ. ಜಗಳದ ನಂತರ ಆತನ ಅತ್ತೆ ಮತ್ತು ಇತರ ಆರೋಪಿಗಳು ತನ್ನನ್ನು ಒತ್ತೆಯಾಳಾಗಿಟ್ಟುಕೊಂಡು ಮೊಬೈಲ್ ಫೋನ್, ನಗದು ಮತ್ತು ಇ-ರಿಕ್ಷಾವನ್ನು ಕಸಿದುಕೊಂಡರು ಎಂದು ಆರೋಪಿಸಿದ್ದಾನೆ.
ಎಸ್‌ಎಸ್‌ಪಿ ಡಾ. ಬ್ರಿಜೇಶಕುಮಾರ ಸಿಂಗ್ ಪ್ರಕಾರ, ವ್ಯಕ್ತಿ ಕಳೆದ ಎರಡು ವರ್ಷಗಳಿಂದ ತನ್ನ ಅತ್ತೆಯೊಂದಿಗೆ ಜಗಳವಾಡುತ್ತಿದ್ದ. ಈತನ ವಿರುದ್ಧ ಕೊತ್ವಾಲಿ, ಸಿವಿಲ್ ಲೈನ್ಸ್ ಮತ್ತು ಮುಜಾರಿಯಾ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಡಿಸೆಂಬರ್ 30 ರಂದು, ಅವನು ತನ್ನ ಅತ್ತೆಯ ಮನೆಗೆ ನುಗ್ಗಿದ್ದ, ಇದು ಆತನ ಬಾಮೈದನ ಹೆಂಡತಿ ಕಿರುಕುಳದ ದೂರು ನೀಡಲು ಕಾರಣವಾಯಿತು ಎಂದು ಹೇಳಿದ್ದಾರೆ.
ಈ ಘಟನೆಗಳಿಂದ ಒತ್ತಡಕ್ಕೊಳಗಾದ ವ್ಯಕ್ತಿ ತನಗೆ ತಾನೇ ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದ್ದಾನೆ. ಸದ್ಯ ಬರೇಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ