ಅಮೆರಿಕದ ಫೆಡರಲ್ ನ್ಯಾಯಾಧೀಶರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೇಶದಲ್ಲಿ ಜಾರಿಯಲ್ಲಿರುವ ಜನ್ಮದತ್ತ ಪೌರತ್ವದ ಹಕ್ಕನ್ನು ರದ್ದುಪಡಿಸುವ ಕಾರ್ಯಕಾರಿ ಆದೇಶವನ್ನು ತಡೆಹಿಡಿದಿದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಗುರುವಾರ ವರದಿ ಮಾಡಿದೆ. ನ್ಯಾಯಾಧೀಶರು ಆದೇಶವನ್ನು “ಅಸಂವಿಧಾನಿಕ” ಎಂದು ಕರೆದಿದ್ದಾರೆ.
ನಾಲ್ಕು ಡೆಮಾಕ್ರಟಿಕ್ ನೇತೃತ್ವದ ರಾಜ್ಯಗಳ ಅರ್ಜಿಯನ್ನು ಪರಿಗಣಿಸಿರುವ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಜಾನ್ ಕೊಘೆನರ್ ಅವರು ಆದೇಶವನ್ನು ಜಾರಿಗೊಳಿಸದಂತೆ ಟ್ರಂಪ್ ಆಡಳಿತವನ್ನು ನಿರ್ಬಂಧಿಸುವ ತಾತ್ಕಾಲಿಕ ಆದೇಶ ನೀಡಿದ್ದಾರೆ. ಜನವರಿ 20 ರಂದು ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಟ್ರಂಪ್, ತಮ್ಮ ಅಧಿಕಾರದ ಮೊದಲ ದಿನವಾದ ಸೋಮವಾರ ಈ ಆದೇಶಕ್ಕೆ ಸಹಿ ಹಾಕಿದ್ದರು. ಈ ಕಾನೂನು ಅಮೆರಿಕದಲ್ಲಿ ಜನಿಸಿದ ಮಕ್ಕಳಿಗೆ ಸ್ವಾಭಾವಿಕವಾಗಿ ಅಲ್ಲಿನ ನಾಗರಿಕತ್ವ ನೀಡುತ್ತಿದ್ದ ಜನ್ಮಸಿದ್ಧ ಪೌರತ್ವ ಹಕ್ಕನ್ನು ನೀಡುತ್ತಿತ್ತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅದನ್ನು ರದ್ದುಪಡಿಸುವ ಆದೇಶಕ್ಕೆ ಸಹಿ ಮಾಡಿದ್ದರು. ಈ ಆದೇಶದ ಪ್ರಕಾರ ಜನನ ಹಕ್ಕು ಪೌರತ್ವವನ್ನು ಕೊನೆಗೊಳಿಸಲು ಫೆ.20 ಕೊನೆಯ ದಿನಾಂಕವಾಗಿದೆ.
ಈ ಮೊದಲು ಅಮೆರಿಕದಲ್ಲಿ ಜನಿಸಿದ ಮಕ್ಕಳಿಗೆ ಸ್ವಾಭಾವಿಕವಾಗಿ ಅಲ್ಲಿನ ನಾಗರಿಕತ್ವ ದೊರಕುತ್ತಿತ್ತು. ಇದನ್ನು ಬಳಸಿಕೊಂಡು ಅನೇಕರು ತಾತ್ಕಾಲಿಕ ವೀಸಾ ಪಡೆದು ಅಥವಾ ಅಮೆರಿಕ್ಕೆ ಹೋಗಿ ಮಕ್ಕಳಿಗೆ ಜನ್ಮ ನೀಡುತ್ತಿದ್ದರು. ಆದರೆ ಫೆ.19ರ ಬಳಿಕ ಜನಿಸುವ ಮಕ್ಕಳ ಪೋಷಕರಲ್ಲಿ ಒಬ್ಬರಾದರೂ ಅಮೆರಿಕ ನಾಗರಿಕ ಆಗಿರಬೇಕು. ಒಂದು ವೇಳೆ ತಂದೆ-ತಾಯಿ ಇಬ್ಬರೂ ಅಮೆರಿಕ ನಾಗರಿಕ ಆಗದೇ ಇದ್ದರೆ, ಜನ್ಮಸಿದ್ಧ ಪೌರತ್ವ ಸಿಗುವುದಿಲ್ಲ ಎಂಬ ಕಾನೂನು ಜಾರಿಗೆ ಟ್ರಂಪ್ ಸಹಿ ಹಾಕಿದ್ದಾರೆ.
ಟ್ರಂಪ್ ಆದೇಶವನ್ನು ದೀರ್ಘಾವಧಿಗೆ ನಿರ್ಬಂಧಿಸಬೇಕೆ ಎಂಬುದರ ಕುರಿತು ನಿರ್ಧರಿಸಲು ನ್ಯಾಯಾಧೀಶ ಕೆಘೆನೂರ್ ಫೆಬ್ರವರಿ 6 ರಂದು ವಿಚಾರಣೆ ನಿಗದಿಪಡಿಸಿದ್ದಾರೆ.
ವಾಷಿಂಗ್ಟನ್, ಅರಿಜೋನಾ, ಇಲಿನಾಯ್ಸ್ ಮತ್ತು ಒರೆಗಾನ್‌ನಂತಹ ಡೆಮಾಕ್ರಟಿಕ್ ಆಡಳಿತದ ರಾಜ್ಯಗಳು ಟ್ರಂಪ್ ಅವರ ಆದೇಶವು ಅಮೆರಿಕದ ಸಂವಿಧಾನದ 14 ನೇ ತಿದ್ದುಪಡಿಯ ಪೌರತ್ವ ಷರತ್ತಿನಲ್ಲಿ ಪ್ರತಿಪಾದಿಸಲಾದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿವೆ. ಇದು ಅಮೆರಿಕದಲ್ಲಿ ಜನಿಸಿದ ಯಾರಾದರೂ ದೇಶದ ಪ್ರಜೆ ಎಂದು ನಿಬಂಧನೆಗಳನ್ನು ನೀಡುತ್ತದೆ.
‘ ತೀರ್ಪಿಗೆ ಮೇಲ್ಮನವಿ ಸಲ್ಲಿಸುತ್ತೇವೆ’
ಜನ್ಮಸಿದ್ಧ ಪೌರತ್ವವನ್ನು ನಿರ್ಬಂಧಿಸುವ ಅವರ ಪ್ರಯತ್ನವನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಫೆಡರಲ್ ನ್ಯಾಯಾಧೀಶರ ನಿರ್ಧಾರವನ್ನು ತಮ್ಮ ಆಡಳಿತವು ಮೇಲ್ಮನವಿ ಸಲ್ಲಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ.
ವಾಷಿಂಗ್ಟನ್ ರಾಜ್ಯದ ಜಿಲ್ಲಾ ನ್ಯಾಯಾಧೀಶ ಜಾನ್ ಕೊಘೆನೋರ್ ಅವರ ತೀರ್ಪಿನ ಬಗ್ಗೆ ಕೇಳಿದಾಗ “ನಿಸ್ಸಂಶಯವಾಗಿ ನಾವು ಅದನ್ನು ಮೇಲ್ಮನವಿ ಸಲ್ಲಿಸುತ್ತೇವೆ” ಎಂದು ಟ್ರಂಪ್ ಓವಲ್ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.
ಟ್ರಂಪ್ ಆಡಳಿತದ ಆದೇಶವು ನಾಗರಿಕರಲ್ಲದವರ ಮಕ್ಕಳು ಅಮೆರಿಕದ “ಅಧಿಕಾರಕ್ಕೆ ಒಳಪಟ್ಟಿಲ್ಲ” ಮತ್ತು ಆದ್ದರಿಂದ ಪೌರತ್ವಕ್ಕೆ ಅರ್ಹರಲ್ಲ ಎಂದು ಹೇಳುತ್ತದೆ. ಗುರುವಾರ ರಾಜ್ಯಗಳ ಪರವಾಗಿ ವಾದಿಸಿದ ವಾಷಿಂಗ್ಟನ್ ಸಹಾಯಕ ಅಟಾರ್ನಿ ಜನರಲ್ ಲೇನ್ ಪೊಲೊಜೋಲಾ ಆ ವ್ಯಾಖ್ಯಾನವನ್ನು “ಅಸಂಬದ್ಧ” ಎಂದು ಕರೆದರು, ಅಕ್ರಮವಾಗಿ ವಲಸೆ ಬಂದವರು ಅಥವಾ ಅವರ ಮಕ್ಕಳು ಅಮೆರಿಕದ ಕಾನೂನಿನಿಂದ ವಿನಾಯಿತಿ ಪಡೆದಿಲ್ಲ ಎಂದು ಹೇಳಿದರು.
“ಟ್ರಂಪ್ ಆಡಳಿತದ ಕಾರ್ಯನಿರ್ವಾಹಕ ಆದೇಶವು ಇದರ ಅಡಿಯಲ್ಲಿ ತಮ್ಮ ಪೌರತ್ವವನ್ನು ಕಳೆದುಕೊಳ್ಳುವ ದೇಶಾದ್ಯಂತ ಲಕ್ಷಾಂತರ ನಾಗರಿಕರ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.
ಅಮೆರಿಕದಲ್ಲಿ ಸದ್ಯ 54 ಲಕ್ಷ ಭಾರತೀಯರು ನೆಲೆಸಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ ಬಹುತೇಕರು ಎಚ್1ಬಿ ವೀಸಾ ಹಾಗೂ ಪ್ರವಾಸಿ ವೀಸಾದ ಮೇಲೆ ನೆಲೆಸಿರುವ ಭಾರತೀಯರಿಗೆ ಮಕ್ಕಳಾಗಿದ್ದು, ಅವರು ಪೌರತ್ವಕ್ಕಾಗಿ ಮತ್ತೆ ಅರ್ಜಿ ಸಲ್ಲಿಸಬೇಕು. ಇಲ್ಲವೇ ಪ್ರವಾಸಿ ವಾಪಸ್ ತೆರಳಬೇಕಾಗಿದೆ. ಹೀಗಾಗಿ ಟ್ರಂಪ್ ಅವರ ಈ ಆದೇಶಕ್ಕೆ ಭಾರತೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ