ಜೈಲಿನಲ್ಲಿ ಇನ್ಸುಲಿನ್ ಕೊಡದೆ ಅರವಿಂದ ಕೇಜ್ರಿವಾಲ್ ಕೊಲ್ಲಲು ಬಿಜೆಪಿ ಬಯಸಿದೆ : ಇಂಡಿಯಾ ಮೈತ್ರಿಕೂಟದ ಸಮಾವೇಶದಲ್ಲಿ ಸುನೀತಾ ಕೇಜ್ರಿವಾಲ್ ಗಂಭೀರ ಆರೋಪ

ರಾಂಚಿ (ಜಾರ್ಖಂಡ್): ‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರನ್ನು ಕೊಲ್ಲುವ ಉದ್ದೇಶದಿಂದ ಅವರಿಗೆ ಜೈಲಿನಲ್ಲಿ ಇನ್ಸುಲಿನ್‌ ನೀಡುವುದನ್ನು ನಿರಾಕರಿಸಲಾಗುತ್ತಿದೆ’ ಎಂದು ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್‌ ಗಂಭೀರ ಆರೋಪ ಮಾಡಿದ್ದಾರೆ.
ಜಾರ್ಖಂಡದ ರಾಂಚಿ ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಿಪಕ್ಷಗಳ ಇಂಡಿಯಾ ಮೈತ್ರಿ ಕೂಟದ ‘ನ್ಯಾಯ’ ಚುನಾವಣಾ ಸಮಾವೇಶದಲ್ಲಿ ಅವರು ಈ ಆರೋಪ ಮಾಡಿದ್ದಾರೆ.
ನನ್ನ ಪತಿ ಅರವಿಂದ ಕೇಜ್ರಿವಾಲ್‌ ಅವರನ್ನು ಕೊಲ್ಲಬೇಕೆಂದು ಬಿಜೆಪಿ ಬಯಸಿದೆ. ಅವರ ಆಹಾರ ತಯಾರಿಕೆಯನ್ನೂ ಕೂಡ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗುತ್ತಿದೆ. ನನ್ನ ಪತಿ ಮಧುಮೇಹ ಪೀಡಿತರಾಗಿದ್ದು, 12 ವರ್ಷಗಳಿಂದ ಇನ್ಸುಲಿನ್‌ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಇನ್ಸುಲಿನ್‌ ನಿರಾಕರಿಸಲಾಗುತ್ತಿದೆ. ಅವರಿಗೆ ನಿತ್ಯ 50 ಯೂನಿಟ್‌ ಇನ್ಸುಲಿನ್‌ ಬೇಕಾಗುತ್ತದೆ’ ಎಂದು ಸುನೀತಾ ಕೇಜ್ರಿವಾಲ್‌ ಹೇಳಿದ್ದಾರೆ.

‘ಜನರ ಸೇವೆ ಮಾಡಿದ್ದಕ್ಕಾಗಿ ನನ್ನ ಪತಿಯನ್ನು ಜೈಲಿಗೆ ಹಾಕಲಾಗಿದೆ. ಅವರ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗಿಲ್ಲ, ಆದರೂ ಜೈಲಿನಲ್ಲಿ ಇರಿಸಲಾಗಿದೆ ಎಂದು ಹೇಳಿದ ಅವರು, ಬಿಜೆಪಿಯ ಏಕಚಕ್ರಾಧಿಪತ್ಯದ ವಿರುದ್ಧ ಹೋರಾಡಿ ನಾವು ಗೆಲುವು ಸಾಧಿಸಲಿದ್ದೇವೆ. ಅರವಿಂದ ಕೇಜ್ರಿವಾಲ್‌ ಹಾಗೂ ಹೇಮಂತ್‌ ಸೊರೇನ್‌ ಜೈಲಿನಿಂದ ಹೊರ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅರವಿಂದ ಕೇಜ್ರಿವಾಲ್ ಅವರ ಆರೋಗ್ಯ ಸ್ಥಿತಿ ಕುರಿತಾಗಿ ಏಪ್ರಿಲ್ 20ರಂದು ಮಾಹಿತಿ ನೀಡಿದ್ದ ತಿಹಾರ್ ಜೈಲಿನ ಆಡಳಿತಾಧಿಕಾರಿಗಳು, ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸುವ ಮುನ್ನ ತಿಂಗಳುಗಳ ಹಿಂದೆಯೇ ಅವರು ಇನ್ಸುಲಿನ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಸದ್ಯ ಅವರು ಮಾತ್ರೆಗಳನ್ನಷ್ಟೇ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ..| ರಸ್ತೆಬದಿ ರೋಲ್‌ ಮಾರುವ 10 ವರ್ಷದ ಬಾಲಕನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ; ಸ್ಫೂರ್ತಿಯೂ ಹೌದು; ಸಹಾಯ ಮಾಡುವೆ ಎಂದ ಆನಂದ ಮಹೀಂದ್ರಾ

ಈ ಸಂಬಂಧ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ. ಕೆ. ಸಕ್ಸೇನಾ ಅವರಿಗೆ ತಿಹಾರ್ ಜೈಲಿನ ಸಿಬ್ಬಂದಿ ಆರೋಗ್ಯ ವರದಿ ಸಲ್ಲಿಕೆ ಮಾಡಿದ್ದರು. ಆದರೆ, ಸುನೀತಾ ಕೇಜ್ರಿವಾಲ್‌ ಅವರು ತಮ್ಮ ಪತಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಜೈಲಿನಲ್ಲಿ ಇನ್ಸುಲಿನ್‌ ನೀಡುವುದನ್ನು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ರಾಂಚಿಯಲ್ಲಿ ಭಾನುವಾರ ನಡೆದ ಇಂಡಿಯಾ ಮೈತ್ರಿಕೂಟದ ಸಮಾವೇಶದ ವೇದಿಕೆಯಲ್ಲಿ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರಿಗೂ ಕುರ್ಚಿ ಕಾಯ್ದಿರಿಸಿದ್ದು ಗಮನ ಸೆಳೆಯಿತು.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement