ಕುಮಟಾ: ಉತ್ತರ ಕನ್ನಡದಲ್ಲಿ ಜಿಲ್ಲೆಯಲ್ಲಿ ವಿಪರೀತ ಮಳೆಯಾಗುತ್ತಿದ್ದು, ಕರಾವಳಿ ಪ್ರದೇಶದಲ್ಲಿಂತೂ ಮಳೆಗೆ ಜನರು ಹೈರಾಣಾಗಿ ಹೋಗಿದ್ದಾರೆ. ಜೊತೆಗೆ ಗುಡ್ಡ ಕುಸಿತದ ಘಟನೆಗಳೂ ವರದಿಯಾಗುತ್ತಿವೆ.
ಇದೀಗ ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಯಲ್ಲಿ ಉಳ್ಳೂರಮಠ ಕ್ರಾಸ್ ಬಳಿ ಬೃಹತ್ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸಿ ರಸ್ತೆ ಸಂಚಾರ ಬಂದ್ ಆಗಿದೆ ಎಂದು ವರದಿಯಾಗಿದೆ.
ಸುಮಾರು ಕಿಲೋಮೀಟರ್‌ಗೂ ಹೆಚ್ಚು ದೂರದಿಂದ ಗುಡ್ಡ ಕುಸಿದು ಬಂದು ರಸ್ತೆಯ ಮೇಲೆ ರಾಶಿಯಾಗಿ ಬಿದ್ದಿದೆ. ಭೂ ಕುಸಿತದ ವೇಳೆ ಬೃಹತ್ ಮರಗಳು ರಸ್ತೆಯಲ್ಲಿ ಮೇಲೆ ಬಂದು ರಾಶಿ ಬಿದ್ದಿವೆ. ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸಿರುವುದರಿಂದ ರಸ್ತೆ ಸಂಚಾರ ಬಂದ್ ಆಗಿದೆ.
ಈಗ ಜಿಲ್ಲೆಯ ಘಟ್ಟದ ಮೇಲಿನ ಪ್ರದೇಶಗಳು ಹಾಗೂ ಕುಮಟಾದ ಸಂಪರ್ಕ ಬಹುತೇಕ ಸ್ಥಗಿತಗೊಂಡಿದೆ. ಶಿರಸಿ-ಕುಮಟಾ ರಸ್ತೆಯಲ್ಲಿ ರಾಗಿ ಹೊಸಳ್ಳಿ ಸಮೀಪ ಭೂಕುಸಿತ ಸಂಭವಿಸಿ ಕೆಲವು ದಿನಗಳಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಕುಮಟಾಕ್ಕೆ ಹೋಗುವವರು ಸಿದ್ದಾಪುರ-ದೊಡ್ಮನೆ-ಬಡಾಳ-ಕುಮಟಾ ಈ ರಾಜ್ಯ ಹೆದ್ದಾರಿಯಲ್ಲಿ ತೆರಳುತ್ತಿದ್ದರು. ಈಗ ಈ ರಸ್ತಯಲ್ಲಿಯೂ ಭೂ ಕುಸಿತ ಸಂಭವಿಸಿ ರಸ್ತೆ ಸಂವಾರ ಬಂದ್ ಆಗಿದೆ. ಈಗ ಯಲ್ಲಾಪುರದ ಮೇಲೆ ಹೋದರೂ ಕುಮಟಾ ತಲುಪಲು ಸಾಧ್ಯವಿಲ್ಲ. ಯಾಕೆಂದರೆ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿದು ದೊಡ್ಡ ಅನಾಹುತವೇ ಸಂಭವಿಸಿದೆ. ಹೀಗಾಗಿ ಈಗ ಉತ್ತರ ಕನ್ನಡ ಜಿಲ್ಲೆ ಘಟ್ಟದ ಕೆಳಗಿನ ಸಂಪರ್ಕ ಹಾಗೂ ಘಟ್ಟದ ಮೇಲಿನ ಸಂಪರ್ಕಕ್ಕೆ ಈರುವ ಏಕೈಕ ರಸ್ತೆಯೆಂದರೆ ಸಿದ್ದಾಪುರ-ಜೋಗ-ಗೇರುಸೊಪ್ಪಾ-ಹೊನ್ನಾವರ ಹೆದ್ದಾರಿ ಮಾರ್ಗವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ