ಹಿಂದೂಗಳ ಸಂತತಿಯಲ್ಲಿ ಇಳಿಕೆಯಾಗುವುದು ಬೇಡ :ಸ್ವರ್ಣವಲ್ಲೀ ಶ್ರೀಗಳು

ಶಿರಸಿ: ಹಿಂದೂ ಸಮಾಜದಲ್ಲಿ ತಡವಾಗಿ ವಿವಾಹ ಎನ್ನುವುದು ಅನೇಕ ಸಮಸ್ಯೆಗೆ ಕಾರಣವಾಗಿದೆ. ಸೂಕ್ತ ವಯಸ್ಸಿಗೆ ಮದುವೆಯಾದರೆ ಹೆಚ್ಚು ಮಕ್ಕಳನ್ನು, ಸಶಕ್ತ ಮಕ್ಕಳನ್ನು ಸಮಾಜಕ್ಕೆ ನೀಡಬಹುದು. ಸಂತತಿ ನಿಯಂತ್ರಣದಿಂದ ಹಿಂದೂಸ್ಥಾನದಲ್ಲಿ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಿಂದೂಸ್ಥಾನದಲ್ಲಿ ನಾವು ನಾವು ಅಲ್ಪಸಂಖ್ಯಾತರಾಗುವ ಅಪಾಯ ಬರದಂತೆ ಎಚ್ಚರ ವಹಿಸಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ದೇವನಳ್ಳಿಯಲ್ಲಿ ಭಾನುವಾರ ನಡೆದ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದ ಅವರು, ಪ್ರಸ್ತುತ ಹಿಂದೂ ಸಮಾಜದಲ್ಲಿ ಮೂರು ಸಮಸ್ಯೆಗಳಿವೆ. ಮಕ್ಕಳಿಗೆ ತಡವಾಗಿ ವಿವಾಹ ಮಾಡುತ್ತಿರುವುದು, ಸಮಾಜದಲ್ಲಿ ವಿಚ್ಛೇದನಗಳು ಹೆಚ್ಚುತ್ತಿರುವುದು ಹಾಗೂ ವಿವಾಹದ ವಿಷಯದಲ್ಲಿ ಹಿಂದೂ ಸಮಾಜಕ್ಕೆ ಒಂದು ಕಾನೂನು, ಬೇರೆಯವರಿಗೆ ಬೇರೆಯದೇ ಕಾನೂನು ಎಂಬುದು ಈ ದೇಶದಲ್ಲಿರುವುದು ದೌರ್ಭಾಗ್ಯವಾಗಿದೆ ಎಂದರು. ಹಿಂದೂಗಳು ಸಂತತಿಯನ್ನ ಅತೀ ನಿಯಂತ್ರಣ ಮಾಡುತ್ತಿದ್ದಾರೆ. ಅತಿ ನಿಯಂತ್ರಣ ಆಗಬಾರದು ಎಂದು ಅವರು ಹೇಳಿದರು.
ಹಿಂದೂ ಸಮಾಜದಲ್ಲಿ ಬೇರೆ ಬೇರೆ ಹೆಸರಿನ ಪಂಗಡಗಳಿರಬಹುದು. ಆದರೆ ಅವರೆಲ್ಲರೂ ಸೇರಿ ಒಂದೇ ಹಿಂದೂ ಗಂಗಾ ನದಿಯಾಗಿ ಹರಿಯಬೇಕು. ಐಕ್ಯ ಚಿಂತನೆ ನಮ್ಮಲ್ಲಿರಬೇಕು. ಹಿಂದೂಗಳಲ್ಲಿ ಜಾಗೃತಿ ಆದರೆ ಮತ್ತೊಮ್ಮೆ ಭಾರತ ವಿಶ್ವಗುರು ಆಗುತ್ತದೆ. ಜ್ಞಾನದ ಬೆಳಕು ನೀಡಿ ವಿಶ್ವವನ್ನೇ ಒಂದಾಗಿಸುತ್ತದೆ ಎಂದು ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪ್ರಮುಖ ಸುದ್ದಿ :-   ದೇವರಾಜೇಗೌಡಗೆ ಪೆನ್ ಡ್ರೈವ್ ಕೊಟ್ಟಿದ್ದು ನಾನೇ, ಬೇರೆ ಯಾರಿಗೂ ಕೊಟ್ಟಿಲ್ಲ : ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ ಹೇಳಿಕೆ

ಯುವ ಬ್ರಿಗೇಡ್‌ ಮಾರ್ಗದರ್ಶಕ, ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಹಿಂದೂ ಧರ್ಮವಿಲ್ಲದಿದ್ದರೆ ಭಾರತವನ್ನಷ್ಟೇ ಅಲ್ಲ, ಜಗತ್ತನ್ನು ಕಾಪಾಡುವುದೂ ಕಷ್ಟವಿದೆ. ಹೀಗಾಗಿ ಜಗತ್ತು ಸುಂದರವಾಗಿರಲು ಹಿಂದೂಗಳ ಸದೃಢ ಅಸ್ತಿತ್ವ ಬೇಕು. ಯಾವ ಧರ್ಮ ನಮ್ಮ ಉಸಿರೋ, ಆದರ್ಶವೋ, ಇಡೀ ಜಗತ್ತಿಗೆ ಬೆಳಕಾಗಲು ಕಾರಣವೋ ಅದನ್ನು ನಿಂದಿಸಿದರೆ ಸಹಿಸಲು ಆಗದು ಎಂದರು.
ಹಿಂದೂ ಎನ್ನುವುದು ಧರ್ಮ ಲಿಂಗಭೇದ, ಜಾತಿ ಮತ ಧರ್ಮ ಮೀರಿದ್ದಾಗಿದೆ. ಭೂ ಮಂಡಲದಲ್ಲಿ ಇರುವುದು ಹಿಂದೂ ಧರ್ಮವೊಂದೇ. ಈ ಧರ್ಮವನ್ನು ನಾವು ಬಿಟ್ಟರೂ ಅದು ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಧರ್ಮ ಎನ್ನುವುದು ಬಟ್ಟೆಯಂತೆ. ಕಳಚಿ ಬದುಕಲು ಸಾಧ್ಯವಿಲ್ಲ ಎಂದರು.
ನಾರಿಯರು ಜಾಗೃತರಾಗಬೇಕು
ಬಣ್ಣದ ಮಠದ ಶ್ರೀ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ನೀತಿಯಿಲ್ಲದ ಶಿಕ್ಷಣ, ಭೀತಿಯಿಲ್ಲದ ಶಾಸನದಿಂದ ನಮ್ಮ ಧರ್ಮ ನಾಶವಾಗುತ್ತಿದೆ. ಹಿಂದೂ ಸಮಾಜದ ಐಕ್ಯತೆಗೆ ನಾರಿಯರು ಕಟಿಬದ್ಧರಾಗಬೇಕು ಎಂದರು.

ಅಂಡಗಿ ನಾಮಧಾರಿ ಗುರುಮಠದ ಶ್ರೀ ಕಲ್ಯಾಣ ಸ್ವಾಮೀಜಿ, ಗುರು ಸೇವೆಯಿಂದ ಭಕ್ತರ ಕಷ್ಟ ದೂರವಾಗುತ್ತದೆ. ಇದರಿಂದ ಬದುಕು ಉದ್ಧಾರಧಿವಾಗುತ್ತದೆ. ಎಲ್ಲರೂ ದಾನ ಧರ್ಮ ಮೈಗೂಡಿಸಿಕೊಂಡು ಸಮಾಜವನ್ನು ಮುನ್ನಡೆಸಬೇಕು ಎಂದರು.
ಶ್ರೀ ಕ್ಷೇತ್ರ ಮಂಜಗುಣಿಯ ಅರ್ಚಕ ಶ್ರೀನಿವಾಸ ಭಟ್ಟ ಮಾತನಾಡಿ, ನಮ್ಮ ಸಂಸ್ಕೃತಿ, ಪರಂಪರೆ ನಮ್ಮನ್ನು ಪ್ರಜೆಯಾಗಿ ನೋಡಿತ್ತು. ಆದರೆ ಇಂದು ನಾವು ಅದನ್ನು ಮರೆತಿದ್ದೇವೆ. ನಮ್ಮನ್ನು ಕೇವಲ ಮತದಾರರಾಗಿ ಪರಿಗಣಿಸುತ್ತಿದ್ದಾರೆ. ಹೀಗಾಗಿ ಪ್ರಜೆ ಎಂಬ ಪ್ರಜ್ಞೆ ನಮ್ಮಲ್ಲಿ ಜಾಗೃತವಾಗಬೇಕು ಎಂದರು.
ಆರ್‌ಎಸ್‌ಎಸ್‌ ಶಿರಸಿ ಕಾರ್ಯವಾಹ ಶ್ರೀಧರ ತೆಂಗಿನಗದ್ದೆ ಪ್ರಾಸ್ತಾವಿಕ ಮಾತನಾಡಿದರು. ನಾರಾಯಣ ಮರಾಠೆ, ಕೇಶವ ಮರಾಠೆ, ಮಧು ಕಿರಗಾರ ಮುಂತಾದವರು ಹಾಜರಿದ್ದರು. ದಯಾನಂದ ಮರಾಠೆ ನಿರೂಪಿಸಿದರು. ವೆಂಕಟರಮಣ ಕಳಾಸೆ ವಂದಿಸಿದರು. ದೇವನಹಳ್ಳಿ, ಮಂಜಗುಣಿ, ಬಂಡಲ, ಹುಣಸೆಕೊಪ್ಪ, ಸಾಲ್ಕಣಿ ಪಂಚಾಯಿತಿ ವ್ಯಾಪ್ತಿ ಒಳಗೊಂಡು 5 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.

ಪ್ರಮುಖ ಸುದ್ದಿ :-   ಪೆನ್‌ ಡ್ರೈವ್ ಪ್ರಕರಣ : 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಲು ಪ್ರಜ್ವಲ್‌ , ಎಚ್‌ಡಿ ರೇವಣ್ಣಗೆ ಎಸ್‌ಐಟಿ ನೋಟಿಸ್‌ ; ವರದಿ

3.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement