6ನೇ ವರ್ಷಕ್ಕೆ ಕತ್ತಲೆ ಕೋಣೆಯಲ್ಲಿ ಬಂಧಿಯಾದ ಹುಡುಗಿ; 20 ವರ್ಷದ ನಂತ್ರ ಬಿಡುಗಡೆ ಭಾಗ್ಯ, ದೃಷ್ಟಿಗೆ ಹಾನಿ : ಕಾರಣ..?

ಬಸ್ತಾರ್ (ಛತ್ತೀಸ್‌ಗಢ ) : ಜಗತ್ತು ಆಟವಾಡುತ್ತಿರುವಾಗ, ಆರು ವರ್ಷದ ಪುಟ್ಟ ಲೀಸಾಳ ಜೀವನ ಕತ್ತಲ ಕೋಣೆಯಲ್ಲಿ ಬಂಧಿಯಾಗಿತ್ತು.  6 ನೇ ವಯಸ್ಸಿನಲ್ಲಿ ಕೂಡಿ ಹಾಕಿದ ಕೋಣೆಯಲ್ಲೇ ಬದುಕುತ್ತಿದ್ದ ಲೀಸಾ, 20 ವರ್ಷಗಳ ನಂತರ ಬಾಗಿಲು ದಾಟಿ ಹೊರಬಂದಿದ್ದಾಳೆ.  ಆದರೆ ಬೆಳಕನ್ನು ನೋಡುವ ಸಾಮರ್ಥ್ಯವನ್ನು ಬಹುತೇಕ ಕಳೆದುಕೊಂಡಿದ್ದಾಳೆ..
ಕೆಲವು ಕಥೆಗಳು ಗಾಯದಂತೆ ತೆರೆದುಕೊಳ್ಳುತ್ತವೆ. ಲೀಸಾಳ ಜೀವನವೂ ಅಂತಹದ್ದೇ. ಛತ್ತೀಸ್‌ಗಢದ ಬಾಸ್ಟರ್ ಜಿಲ್ಲೆಯ ಬಕಾವಂಡ್ ಗ್ರಾಮದ ನಿವಾಸಿ ಲೀಸಾ, ತನ್ನ ಬಾಲ್ಯವನ್ನು ಮೌನದಲ್ಲಿ ಕಳೆದಳು. ಆರನೇ ವಯಸ್ಸಿನಲ್ಲಿ, ಅವಳನ್ನು ಹೊರ ಪ್ರಪಂಚದ ಧ್ವನಿಗಳಿಂದ ದೂರವಿರಿಸಲಾಯಿತು. ಆಕೆ ಇದ್ದ ಕೋಣೆಯ ಬಾಗಿಲು ಕೇವಲ ಊಟ ತಲುಪಿಸಲು ಮಾತ್ರ ತೆರೆಯುತ್ತಿತ್ತು,  ಇಪ್ಪತ್ತು ವರ್ಷಗಳ ನಂತರ ಅಧಿಕಾರಿಗಳು ಆಕೆಯನ್ನು ಪತ್ತೆಹಚ್ಚಿದಾಗ, ಅವಳ ಕಣ್ಣುಗಳಲ್ಲಿ ಮಾತ್ರವಲ್ಲ, ನೆನಪುಗಳಲ್ಲೂ ಕೇವಲ ಕತ್ತಲು ತುಂಬಿತ್ತು. ಅವಳ ಗುರುತು ನೆರಳುಗಳಿಂದಲೇ ರೂಪುಗೊಂಡಿತ್ತು. ದಶಕಗಳ ಕಾಲದ ಬಂಧನದ ನಂತರ, ಈಗ ಆಕೆ ತನ್ನ ಹೆಸರಿಗೂ ಪ್ರತಿಕ್ರಿಯಿಸಲು ಹೆಣಗಾಡುತ್ತಿದ್ದಾಳೆ.
 
ಕೊಲೆ ಬೆದರಿಕೆ ಮುಳುವಾಯಿತು…
ಲೀಸಾಳ ಬಂಧನ ಸರಪಳಿಯಿಂದ ಆರಂಭವಾಗಿರಲಿಲ್ಲ, ಬದಲಿಗೆ ಭಯದಿಂಧ ಆರಂಭವಾಗಿತ್ತು. 2000 ಇಸವಿಯಲ್ಲಿ, ಆಕೆ ಎರಡನೇ ತರಗತಿಯಲ್ಲಿ ಓದುತ್ತಿದ್ದಾಗ, ಗ್ರಾಮದ  ವ್ಯಕ್ತಿಯೊಬ್ಬ ಆಕೆಯನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದ. ಈ ಮಾತುಗಳು ಆಕೆಯನ್ನು ತೀವ್ರವಾಗಿ ಬೆಚ್ಚಿಬೀಳಿಸಿದವು, ಮತ್ತು ಆಕೆ ಮೌನಕ್ಕೆ ಜಾರಿದಳು. ಆಕೆಯ ತಾಯಿ ನಿಧನರಾಗಿದ್ದರು. ರೈತನಾಗಿದ್ದ ತಂದೆ ದುರ್ಬಲರಾಗಿದ್ದರು ಮತ್ತು ಭಯಭೀತರಾಗಿದ್ದರು. ಮಗಳನ್ನು ರಕ್ಷಿಸಲು ಬೇರೆ ದಾರಿ ಕಾಣದ ತಂದೆ ಒಂದು ಭಯಾನಕ ನಿರ್ಧಾರ ಕೈಗೊಂಡರು. ಮುಂದಿನ ಇಪ್ಪತ್ತು ವರ್ಷಗಳ ಕಾಲ ಮಗಳು ಸುರಕ್ಷಿತವಾಗಿರಲಿ ಎಂದು ನಂಬಿ, ಅವಳನ್ನು ಕಿಟಕಿ ಇಲ್ಲದ ತಮ್ಮ ಮಣ್ಣಿನ ಮನೆಯ ಕೋಣೆಯೊಳಗೆ ಕೂಡಿಹಾಕಿದರು. ಬೆಳಕಿಲ್ಲ, ಸಂಭಾಷಣೆ ಇಲ್ಲ, ಮಾನವ ಸಂಪರ್ಕವಿಲ್ಲ. ಬಾಗಿಲ ಬಳಿ ಊಟದ ತಟ್ಟೆ, ಅಷ್ಟೇ ಜೀವನ! ಹೀಗೆ ಅವಳನ್ನು ಉಳಿಸಲು ತೆಗೆದುಕೊಂಡ ನಿರ್ಧಾರ ಅಂತಿಮವಾಗಿ ಅವಳ ಜೀವನವನ್ನೇ ನುಂಗಿಹಾಕಿತು.
ಹದಗೆಟ್ಟ ಆರೋಗ್ಯ ಸ್ಥಿತಿ: ದೃಷ್ಟಿ ಮಸುಕು…
ಸಮಾಜ ಕಲ್ಯಾಣ ಇಲಾಖೆಯ ತಂಡ ಆ ಗುಡಿಸಲಿಗೆ ಪ್ರವೇಶಿಸಿದಾಗ, ದೃಷ್ಟಿ ಸಂಪೂರ್ಣವಾಗಿ ಹದಗೆಟ್ಟಿದ್ದ ಈ ಯುವತಿ ಅವರಿಗೆ ಸಿಕ್ಕಳು. ವೈದ್ಯರ ಪ್ರಕಾರ, ಸೂರ್ಯನ ಬೆಳಕಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳದಿರುವುದು ದೃಷ್ಟಿ ಮರಳಿ ಪಡೆಯುವ ಸಾಧ್ಯತೆಗಳನ್ನು ಅತ್ಯಂತ ಕಡಿಮೆ ಮಾಡಿದೆ. ಆಕೆಯಮಾನಸಿಕ ಬೆಳವಣಿಗೆಯ ಮೇಲೂ ತೀವ್ರ ಪರಿಣಾಮ ಬೀರಿದ್ದು, ಅವಳು ತನ್ನ ವಯಸ್ಸಿಗಿಂತ ಚಿಕ್ಕವರಂತೆ ವರ್ತಿಸುತ್ತಿದ್ದಾಳೆ.
ಅಧಿಕಾರಿಗಳು ಅವಳನ್ನು ಜಗದಾಲ್‌ಪುರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಘಾತದಿಂದ ನಿಂತುಹೋದ ಬಾಲ್ಯ ಮತ್ತು ಸಂವೇದನಾ ಅಭಾವದಿಂದ ರೂಪುಗೊಂಡ ಪ್ರಬುದ್ಧತೆ ಈಕೆಯದ್ದಾಗಿದೆ.
 ತನಿಖೆ ಮತ್ತು ಮುಂದಿನ ಕ್ರಮ
ಸಮಾಜ ಕಲ್ಯಾಣ ಇಲಾಖೆ ಔಪಚಾರಿಕ ತನಿಖೆ ಆರಂಭಿಸಿದೆ. ಇಪ್ಪತ್ತು ವರ್ಷಗಳ ಕಾಲ ಆಕೆ ಏಕೆ ಬಂಧನದಲ್ಲಿದ್ದಳು ಮತ್ತು ಈ ಬಂಧನ ಕಾನೂನುಬಾಹಿರ ಬಂಧನವಾಗಿದೆಯೇ ಎಂದು ತಿಳಿಯಲು ಅಧಿಕಾರಿಗಳು ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರನ್ನು ಪ್ರಶ್ನಿಸುತ್ತಿದ್ದಾರೆ.
ಜಿಲ್ಲಾಡಳಿತ ಅಧಿಕಾರಿಗಳು, “ತನಿಖಾ ವರದಿ ಸಲ್ಲಿಕೆಯಾದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ. ತಂದೆ ಭಯ ಮತ್ತು ಅಜ್ಞಾನದಿಂದಾಗಿ ಶಾಲೆಗಳು, ಪಂಚಾಯತ ಅಥವಾ ಆರೋಗ್ಯ ಸೇವೆಗಳಿಂದ ಸಹಾಯ ಪಡೆಯಲು ವಿಫಲರಾಗಿದ್ದಾರೆಯೇ ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಆಶ್ರಮದಲ್ಲಿ ಹೊಸ ಜೀವನದ ಹೆಜ್ಜೆ
ಪ್ರಸ್ತುತ ಲೀಸಾ ಅವರು ‘ಘರೌಂದಾ ಆಶ್ರಮ’ ದಲ್ಲಿ ವಾಸಿಸುತ್ತಿದ್ದಾರೆ. ಆರೈಕೆದಾರರು ಮತ್ತು ಸಲಹೆಗಾರರು ಅವಳಿಗೆ ಹೊಸ ಜೀವನವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತಿದ್ದಾರೆ. ಇಲ್ಲಿ, ಅವಳು ನಿಧಾನವಾಗಿ ನಗಲು, ಮಾನವರನ್ನು ನಂಬಲು, ಹೆದರಿಕೆಯಿಲ್ಲದೆ ಬದುಕಲು, ತಿನ್ನಲು, ಸ್ನಾನ ಮಾಡಲು ಮತ್ತು ಮಾತನಾಡಿದಾಗ ಅದಕ್ಕೆ ಪ್ರತಿಕ್ರಿಯಿಸಲು ಕಲಿಯುತ್ತಿದ್ದಾಳೆ. ವೈದ್ಯರು ದೃಷ್ಟಿ ಮರಳುವ ಸಾಧ್ಯತೆ ಇಲ್ಲದಿದ್ದರೂ, ಭಾವನಾತ್ಮಕ ಮತ್ತು ಅರಿವಿನ ಚೇತರಿಕೆ ಸಾಧ್ಯ ಎಂದು ನಂಬಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸುಚಿತ್ರಾ ಲಕ್ರಾ ಅವರು, “ನಾವು ಆಕೆಯನ್ನು ರಕ್ಷಿಸಿ ಈಗ ಆಶ್ರಯದಲ್ಲಿ ಇರಿಸಿದ್ದೇವೆ. ಆಕೆ ಒಂಟಿತನದಲ್ಲಿ ಎಲ್ಲವನ್ನೂ ಕಳೆದುಕೊಂಡಳು. ಅವಳು ಈಗ ಸುರಕ್ಷಿತವಾಗಿದ್ದಾಳೆ, ಸರಿಯಾಗಿ ತಿನ್ನುತ್ತಾಳೆ, ಸ್ನಾನ ಮಾಡುತ್ತಾಳೆ ಮತ್ತು ಮಾತನಾಡುತ್ತಾಳೆ” ಎಂದು ತಿಳಿಸಿದ್ದಾರೆ.
ಲೀಸಾ ಮತ್ತೆ ಪ್ರಪಂಚವನ್ನು ನೋಡದೇ ಇರಬಹುದು, ಆದರೆ ಆಕೆಯ ನಾಳೆ ಎಂಬುದು ನಿನ್ನೆಗಳಂತೆ ಇರಬಾರದು. ಸಮಾಜ ಮತ್ತು ಸರ್ಕಾರಿ ಸಂಸ್ಥೆಗಳು ಆಕೆಯ ಬೆಂಬಲಕ್ಕೆ ನಿಂತರೆ, ಆಕೆಯ ಆಳವಾದ ಗಾಯಗಳು ದಯೆಯಿಂದ ಮೃದುವಾಗಬಹುದು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement