ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲಿನ ದೌರ್ಜನ್ಯಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಡಿಸೆಂಬರ್ 31 ರಂದು ಶರಿಯತ್ಪುರ ಜಿಲ್ಲೆಯಲ್ಲಿ ಖೋಕನ್ ದಾಸ್ (50) ಎಂಬ ಹಿಂದೂ ವ್ಯಕ್ತಿಯ ಮೇಲೆ ಭೀಕರ ದಾಳಿ ನಡೆಸಲಾಗಿದ್ದು, ದುಷ್ಕರ್ಮಿಗಳು ಅವರನ್ನು ಜೀವಂತವಾಗಿ ಸುಡಲು ಯತ್ನಿಸಿದ ಘಟನೆ ವರದಿಯಾಗಿದೆ.
ಖೋಕನ್ ದಾಸ್ ಅವರು ತಮ್ಮ ಮೆಡಿಕಲ್ ಶಾಪ್ ಮುಚ್ಚಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹಾದಿ ಮಧ್ಯೆ ತಡೆದ ಗುಂಪು ಮೊದಲು ಚಾಕುವಿನಿಂದ ಅವರ ಹೊಟ್ಟೆಯ ಕೆಳಭಾಗಕ್ಕೆ ಇರಿದಿದೆ. ನಂತರ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ದಾಸ್ ಅವರು ಪಕ್ಕದಲ್ಲಿದ್ದ ಕೆರೆಗೆ ಜಿಗಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಅವರು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಂಗ್ಲಾದೇಶದಲ್ಲಿ ಕಳೆದ 15 ದಿನಗಳಲ್ಲಿ ನಡೆದ ನಾಲ್ಕನೇ ಘಟನೆ ಇದಾಗಿದೆ. ಡಿಸೆಂಬರ್ 24ರಂದು ಅಮೃತ್ ಮೊಂಡಲ್ (29) ಎಂಬ ಯುವಕನನ್ನು ಗುಂಪೊಂದು ಹೊಡೆದು ಕೊಂದಿತ್ತು. ಡಿಸೆಂಬರ್ 18ರಂದು ಮೈಮೆನ್ಸಿಂಗ್ನಲ್ಲಿ ದೀಪು ಚಂದ್ರ ದಾಸ್ ಎಂಬುವವರನ್ನು ಸುಳ್ಳು ಧರ್ಮನಿಂದನೆಯ ಆರೋಪ ಹೊರಿಸಿ ಹತ್ಯೆ ಮಾಡಿ, ಶವವನ್ನು ಮರಕ್ಕೆ ನೇತುಹಾಕಿ ಬೆಂಕಿ ಹಚ್ಚಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಕ್ರಿಶ್ಚಿಯನ್ ಮತ್ತು ಬೌದ್ಧ ಸಮುದಾಯಗಳ ಮೇಲೂ ದಾಳಿಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಈ ದಾಳಿಗಳನ್ನು ಖಂಡಿಸಿದೆಯಾದರೂ, ಇವುಗಳ ಹಿಂದೆ ಕೋಮು ಪ್ರಚೋದನೆ ಇಲ್ಲ, ಬದಲಾಗಿ ಸುಲಿಗೆ ಮತ್ತು ಅಪರಾಧ ಚಟುವಟಿಕೆಗಳು ಕಾರಣ ಎಂದು ಹೇಳಿದೆ.
ಶೇಖ್ ಹಸೀನಾ (ಮಾಜಿ ಪ್ರಧಾನಿ) ಯೂನಸ್ ಸರ್ಕಾರವು ಉಗ್ರಗಾಮಿಗಳಿಗೆ ಬೆಂಬಲ ನೀಡುತ್ತಿದ್ದು, ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.
ಭಾರತದ ಕಳವಳ:
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಈ ಸರಣಿ ಹಿಂಸಾಚಾರದ ಬಗ್ಗೆ ಭಾರತ ತೀವ್ರ ಆತಂಕ ವ್ಯಕ್ತಪಡಿಸಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ ಇತ್ತೀಚೆಗೆ ಢಾಕಾಗೆ ಭೇಟಿ ನೀಡಿದ್ದು, ಅಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ