25 ವರ್ಷದ ಹಿಂದಿನ ಸಾಲ ತೀರಿಸಲು ವಿಳಾಸ, ಮೊಬೈಲ್ ನಂಬರ್‌ ಇಲ್ಲದೆ ಸ್ನೇಹಿತನ ಹುಡುಕಿಕೊಂಡು ಕೇರಳದಿಂದ ತೆಲಂಗಾಣಕ್ಕೆ ಬಂದ ವ್ಯಕ್ತಿ…!

ಧರ್ಮಪುರಿ (ತೆಲಂಗಾಣ): ಸ್ನೇಹ ಮತ್ತು ಪ್ರಾಮಾಣಿಕತೆಗೆ ಅಪರೂಪದ ನಿದರ್ಶನವಾಗಿ, ಕೇರಳದ ವ್ಯಕ್ತಿಯೊಬ್ಬರು ಸುಮಾರು 25 ವರ್ಷಗಳ ಹಿಂದೆ ಸ್ನೇಹಿತನಿಂದ ಪಡೆದಿದ್ದ ಸಾಲವನ್ನು ತೀರಿಸಲು ತೆಲಂಗಾಣದ ಧರ್ಮಪುರಿಗೆ ಬಂದು ಅದನ್ನು ಮರಳಿಸಿದ ಘಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಆದರೆ, ಅವರಿಗೆ ತಮ್ಮ ಹಳೆಯ ಸ್ನೇಹಿತನನ್ನು ಖುದ್ದಾಗಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರು ಪ್ರಸ್ತುತ ಗಲ್ಫ್ ದೇಶದಲ್ಲಿದ್ದಾರೆ. ಹೀಗಾಗಿ, ಅವರು ಸಾಲದ ಹಣವನ್ನು ಸ್ನೇಹಿತನ ಕುಟುಂಬ ಸದಸ್ಯರಿಗೆ ಅದನ್ನು ನೀಡಿ ತಮ್ಮ ಮಾತು ಉಳಿಸಿಕೊಂಡಿದ್ದಾರೆ. ಕೇರಳದ ಪಾಲಕ್ಕಾಡ್ ಮೂಲದ ಮುಹಮ್ಮದ್ ಇಸ್ಮಾಯಿಲ್ ಎಂಬವರು ಹಲವು ವರ್ಷಗಳಿಂದ ಮನಸ್ಸಿನಲ್ಲೇ ಹೊತ್ತುಕೊಂಡಿದ್ದ ಸಾಲದ ಹೊರೆ ಇದೀಗ ಇಳಿದಿದೆ.
ಸುಮಾರು 25 ವರ್ಷಗಳ ಹಿಂದೆ ಈ ಅಪರೂಪದ ಸ್ನೇಹದ ಕಥೆ ಆರಂಭವಾಗಿತ್ತು. ಆಗ ಮುಹಮ್ಮದ್ ಇಸ್ಮಾಯಿಲ್ ಹಾಗೂ ತೆಲಂಗಾಣದ ಜಗಿತ್ಯಾಳ ಜಿಲ್ಲೆ ಧರ್ಮಪುರಿ ನಿವಾಸಿ ಎಡ್ಲಾ ಲಚ್ಚಣ್ಣ ಅವರು ಸೌದಿ ಅರೇಬಿಯಾದ ಖಾಸಗಿ ಕಂಪನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ವಿದೇಶದಲ್ಲಿ ಸಂಕಷ್ಟದ ಬದುಕಿನ ನಡುವೆ ಇಬ್ಬರ ನಡುವೆ ಗಾಢ ಸ್ನೇಹ ಬೆಳೆದಿತ್ತು.
ಆ ಅವಧಿಯಲ್ಲಿ  ಹಣಕಾಸಿನ ತುರ್ತು ಎದುರಾದಾಗ ಇಸ್ಮಾಯಿಲ್ ಅವರು ಲಚ್ಚಣ್ಣ ಅವರಿಂದ ಹಣವನ್ನು ಸಾಲವಾಗಿ ಪಡೆದಿದ್ದರು. ಗಲ್ಫ್ ಉದ್ಯೋಗ ಮುಗಿಸಿ ಭಾರತಕ್ಕೆ ಹಿಂದಿರುಗಿದ ಬಳಿಕ ಸಾಲವನ್ನು ಮರುಪಾವತಿಸುವುದಾಗಿ ಅವರು ಸ್ನೇಹಿತನಿಗೆ ಮಾತು ಕೊಟ್ಟಿದ್ದರು.
ಆದರೆ, ಬಳಿಕ ಕೇರಳಕ್ಕೆ ಮರಳಿದ ಇಸ್ಮಾಯಿಲ್ ಅವರಿಗೆ ಆರ್ಥಿಕ ಸಂಕಷ್ಟಗಳು ಎದುರಾದ ಕಾರಣ ಸಾಲವನ್ನು ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ವರ್ಷಗಳು ಕಳೆದರೂ ಸ್ನೇಹಿತನಿಗೆ ನೀಡಿದ್ದ ಮಾತು ಅವರ ಮನಸ್ಸಿನಿಂದ ಮರೆಯಾಗಲಿಲ್ಲ. ಹೇಗಾದರೂ ಮಾಡಿ ಸಾಲ ತೀರಿಸಬೇಕೆಂಬ ಸಂಕಲ್ಪವನ್ನು ಅವರು ಮಾಡಿದ್ದರು.
ಹಣ ಕೊಡಬೇಕು ಎಂದು ಅಂದುಕೊಂಡಾಗ ಲಚ್ಚಣ್ಣ ಅವರ ಸಂಪೂರ್ಣ ವಿಳಾಸವೂ ಇಸ್ಮಾಯಿಲ್ ಅವರಿಗೆ ತಿಳಿದಿರಲಿಲ್ಲ. ಅವರ ಮೊಬೈಲ್ ಸಂಖ್ಯೆಯೂ ಇರಲಿಲ್ಲ. ಸ್ನೇಹಿತನ ಊರು ಧರ್ಮಪುರಿ ಎಂಬುದು ಮಾತ್ರ ಅವರಿಗೆ ನೆನಪಿತ್ತು.
ಅದನ್ನೇ ಆಧಾರವಾಗಿಸಿಕೊಂಡು ಗೂಗಲ್‌ನಲ್ಲಿ ಹುಡುಕಟ ನಡೆಸಿದ ಅವರು, ತೆಲಂಗಾಣದಲ್ಲಿ ಧರ್ಮಪುರಿ ಇರುವ ಸ್ಥಳವನ್ನು ಪತ್ತೆಹಚ್ಚಿದರು. ಬಳಿಕ ಕೇರಳದ ಪಾಲಕ್ಕಾಡ್‌ನಿಂದ ತೆಲಂಗಾಣದ ಧರ್ಮಪುರಿಗೆ ಪ್ರಯಾಣ ಬೆಳೆಸಿ ಸ್ನೇಹಿತನನ್ನು ಭೇಟಿಯಾಗಿ ಸಾಲದ ಹಣವನ್ನು ಹಿಂದಿರುಗಿಸಲು ನಿರ್ಧರಿಸಿದರು.
ಪರಿಚಯವೇ ಇಲ್ಲದ ಊರಲ್ಲಿ ಯಾವುದೇ ವಿಳಾಸವಿಲ್ಲದೆ ಸ್ನೇಹಿತನನ್ನು ಹುಡುಕುವುದು ಅವರಿಗೆ ದೊಡ್ಡ ಸವಾಲಾಗಿತ್ತು. ಆದರೂ ಧರ್ಮಪುರಿಗೆ ತಲುಪಿದ ಬಳಿಕ ಅಲ್ಲಿನ ಹಲವರನ್ನು ವಿಚಾರಿಸಿದರು. ನಂತರ ಗುರುವಾರ ಮಧ್ಯಾಹ್ನ ವಿಳಾಸ ಹುಡುಕಿ ಲಚ್ಚಣ್ಣ ಅವರ ಮನೆಗೆ ತಲುಪುವಲ್ಲಿ ಯಶಸ್ವಿಯಾದರು.
25 ವರ್ಷಗಳ ಹಿಂದಿನ ಸಾಲವನ್ನು ತೀರಿಸಲು ಇಷ್ಟೊಂದು ದೂರ ಪ್ರಯಾಣಿಸಿ ಬಂದಿರುವುದಾಗಿ ಇಸ್ಮಾಯಿಲ್ ತಿಳಿಸಿದಾಗ ಲಕ್ಷಣ್ಣ ಅವರ ಕುಟುಂಬ ಸದಸ್ಯರು ಅಚ್ಚರಿಗೊಂಡರು. ಅವರು ತಕ್ಷಣವೇ ಗಲ್ಫ್‌ನಲ್ಲಿದ್ದ ಲಚ್ಚಣ್ಣ ಅವರಿಗೆ ಕರೆ ಮಾಡಿದರು.
ಸುಮಾರು 25 ವರ್ಷಗಳ ಹಿಂದೆ ನೀಡಿದ್ದ ಸಾಲವನ್ನು ಲಚ್ಚಣ್ಣ ಅವರು ಮರೆತಿದ್ದರೂ, ದೂರವಾಣಿಯಲ್ಲಿ ಹಳೆಯ ಸ್ನೇಹಿತನ ಧ್ವನಿ ಕೇಳುತ್ತಿದ್ದಂತೆಯೇ ಎಲ್ಲವೂ ನೆನಪಾಯಿತು. ಇಬ್ಬರೂ ಬಹಳ ಆತ್ಮೀಯವಾಗಿ ಮಾತನಾಡಿಕೊಂಡರು.
ನಂತರ ಇಸ್ಮಾಯಿಲ್ ಅವರು 25 ಸಾವಿರ ರೂಪಾಯಿಗಳನ್ನು ಲಕ್ಷಣ್ಣ ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದರು. ಹಲವು ವರ್ಷಗಳಿಂದ ತಮ್ಮ ಮನಸ್ಸಿನಲ್ಲಿದ್ದ ಸಾಲದ ಹೊರೆ ಈಗ ಇಳಿದಿದೆ ಎಂದು ಹೇಳುವ ವೇಳೆ ಅವರು ಭಾವುಕರಾದರು.
ಈ ಅಪರೂಪದ ಘಟನೆ ಸ್ನೇಹ, ನಂಬಿಕೆ ಹಾಗೂ ಪ್ರಾಮಾಣಿಕತೆ ಎಂದಿಗೂ ಕಾಲಹರಣವಾಗುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement