ಉ.ಕ.ಜಿಲ್ಲೆ ನೆರೆ: ಭೂಕುಸಿತವಾದ ಕಳಚೆ ಗ್ರಾಮದ ಸಂಪೂರ್ಣ ಸ್ಥಳಾಂತರ, ಅಧ್ಯಯನ ವರದಿ ಆಧಾರದ ಮೇಲೆ ಜಿಲ್ಲೆ ನೆರೆ ಹಾನಿ ಶಾಶ್ವತ ಪರಿಹಾರಕ್ಕೆ ಕ್ರಮ

ಉತ್ತರ ಕನ್ನಡ ಜಿಲ್ಲೆ ಪ್ರವಾಹ ಪೀಡಿತ ಸ್ಥಳಗಳ ಪರಿಶೀಲನೆ ನಡೆಸಿದ ಬಸವರಾಜ ಬೊಮ್ಮಾಯಿ
ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಭೂಕುಸಿತಕ್ಕೊಳಗಾದ ಕಳಚೆ‌ ಗ್ರಾಮದಲ್ಲಿ ಪರಿಹಾರ ನೀಡಿದರೂ ಮನೆ ಕಟ್ಟುವುದು ಕಷ್ಟಸಾಧ್ಯ ಕೆಲಸ. ಹೀಗಾಗಿ ಗ್ರಾಮವನ್ನೇ ಸಂಪೂರ್ಣ ಸ್ಥಳಾಂತರಿಸಿ. ನಾಳೆಯಿಂದಲೇ ಕೆಲಸ ಮಾಡಬೇಕು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಈ ಸ್ಥಳಾಂತರಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ಪೂರ್ಣ ಬಿದ್ದ ಮನೆಗಳಿಗೆ 5 ಲಕ್ಷ ರೂ.ಗಳು, ಭಾಗಶಃ ಬಿದ್ದ ಮನೆಗಳಿಗೆ ಲಕ್ಷ, ಸ್ವಲ್ಪ ಹಾನಿಯಾಗಿದ್ದರೆ 50 ಸಾವಿರ ರೂ. ಪರಿಹಾರವನ್ನುಮುಕ್ಯಮಂತ್ರಿ ಘೋಷಿಸಿದರು. ಕಳಚೆ ಗ್ರಾಮಸ್ಥರ ಪುರ್ವಸತಿಗೆ 15 ಎಕರೆ ಜಮೀನು ಹುಡುಕಲು ಜಿಲ್ಲಾಧಿಕಾರಿಗೆ ಸೂಚಿಸಿದರು. ಅರಬೈಲ್ ಘಾಟ್ ರಸ್ತೆ , ಕಳಚೆ ರಸ್ತೆ , ಘಟ್ಟ ಕುಸಿದ ಸ್ಥಳ ದುರಸ್ತೆಗೆ 10 ಕೋಟಿ‌ ರೂ. ಘೋಷಿಸಿದರು.
ಎನ್​ಡಿಆರ್​ಎಫ್ ನಿಯಮದಂತೆ ಕಾಳಜಿ ಕೇಂದ್ರದಲ್ಲಿನ ಜನರಿಗೆ 3800 ರೂ.ಗಳ ಪರಿಹಾರವನ್ನು ಕಳೆದ ವರ್ಷ ನೀಡಲಾಗಿತ್ತು. ಇದೀಗ ರಾಜ್ಯ ಸರಕಾರದಿಂದ ತಲಾ 10 ಸಾವಿರ ರೂ.ಗಳಪರಿಹಾರ ನೀಡಲು ನಿರ್ಧರಿಸಲಾಗಿದ್ದು, ಉಳಿದ 6200 ರೂ. ಹಣವನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಿದ್ದ ಮನೆಗಳ ಸರ್ವೆ ನಡೆಸಿ ಕಳೆದ ವರ್ಷದ ಮಾದರಿಯಲ್ಲಿಯೇ ಪರಿಹಾರ ನೀಡಲು ತಿಳಿಸಲಾಗಿದೆ ಎಂದು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ನಷ್ಟವಾಗಿದೆ. ಅನೇಕ ಕಡೆ ಭೂಕುಸಿತ ಉಂಟಾಗಿದೆ. ಅನೇಕ ಗ್ರಾಮಗಳ ಸಂಪರ್ಕವೇ ಕಡಿತವಾಗಿದೆ. ಇಂಥ ಸಂದರ್ಭದಲ್ಲಿ ಸರಿಯಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. 100 ಕೋಟಿ ರೂ.ಗಳ ಅನುದಾನವನ್ನು ಲೋಕೋಪಯೋಗಿ ಇಲಾಖೆ ರಸ್ತೆಗಳಿಗೆ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ ಅರಣ್ಯದಲ್ಲಿ ಮನೆ ಕಟ್ಟಿಕೊಂಡವರಿಗೆ ಪರಿಹಾರ ನೀಡಿದ್ದೇವೆ. ಈ ವರ್ಷವೂ ಮನೆ ಕಳೆದುಕೊಂಡವರಿಗೂ ಪರಿಹಾರ ಒದಗಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುಳ್ಳಾಪುರದ ಹಳವಳ್ಳಿ ಸೇತುವೆ ವೀಕ್ಷಣೆ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಳ್ಳಾಪುರದ ಹಳವಳ್ಳಿ ಸೇತುವೆ ಕುಸಿತದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪಶ್ಚಿಮ ಘಟ್ಟದ ತಪ್ಪಲಲ್ಲಿ ಕಳಚೆಯಿಂದ ಹಿಡಿದು ಜಿಲ್ಲೆಯ ಹಲವು ಭಾಗದಲ್ಲಿ ಭೂ ಕುಸಿತ ಆಗಿದೆ. ನೆರೆ ಪ್ರತಿ ವರ್ಷ ಜನರನ್ನು ಬಾಧಿಸುತ್ತಿದೆ. ಈ ಹಿನ್ನಲೆಯಲ್ಲಿ ಸಮಗ್ರ ಅಧ್ಯಯನ ನಡೆಸಲು ನಿರ್ಧರಿಸಲಾಗಿದೆ. ಈ ವರದಿ ಆಧಾರದಲ್ಲಿ ಶಾಶ್ವತ ಪರಿಹಾರಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಾಗುವುದು ಎಂದರು
ಉತ್ತರ ಕನ್ನಡ ಜಿಲ್ಲೆಯಲ್ಲಿ ಮನೆ ನಾಶ, ತೋಟಕ್ಕಾದ ಹಾನಿ, ಬೆಳೆ ಹಾನಿ ಹೀಗೆ ಎಲ್ಲ ಹಾನಿಯ ಪಾರದರ್ಶಕ ಸರ್ವೆಗೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಎನ್.ಡಿ.ಆರ್.ಎಫ್ ಹಣ ಪರಿಹಾರ- ಪುನರ್ವಸತಿಗೆ ಸಾಲದು. ಜಿಲ್ಲಾಡಳಿಯದಿಂದ ಬರುವ ಹಾನಿಯ ವರದಿ ಆಧರಿಸಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಲಿದೆ. ನೆರೆ ಪರಿಹಾರ ಮತ್ತು ಪುನರ್ವಸತಿಯನ್ನು ಸರ್ಕಾರ ಆದ್ಯತೆ ಮೇಲೆ ಮಾಡಲಿದೆ ಎಂದರು.
ಮಾಜಿ ಸಚಿವ ಶಿವರಾಮ ಹೆಬ್ಬಾರ, ಶಾಸಕಿ ರೂಪಾಲಿ ನಾಯ್ಕ,‌ ಶಾಸಕ ಸುನೀಲ ನಾಯ್ಕ , ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement