ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಜಾಗ ಮಂಜೂರು ಮಾಡಿ ಸರ್ಕಾರದ ಆದೇಶ-ಬಹುದಿನದ ಬೇಡಿಕೆಗೆ ಮನ್ನಣೆ

ಕುಮಟಾ ; ಉತ್ತರ ಕನ್ನಡ ಜಿಲ್ಲೆಯ ಜನರ ಬಹುದಿನದ ಬೇಡಿಕೆಗೆ ಸರ್ಕಾರದ ಮನ್ನಣೆ ಸಿಕ್ಕಿದೆ. ಜಿಲ್ಲೆಯಲ್ಲಿ ನಿರ್ಮಾಣವಾಗಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಜಾಗ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಾಗಿ ಮೀಸಲಿಟ್ಟಿದ್ದ ಸರ್ವೆ ನಂಬರ್ 440 ಅ/ಬದ 15.35 ಎಕರೆ ಜಾಗವನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ನಿಗದಿಪಡಿಸಿ ಆದೇಶ ಮಾಡಲಾಗಿದೆ. ಈ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಒಟ್ಟು 17.14 ಎಕರೆ ವಿಸ್ತೀರ್ಣದ ಜಾಗವನ್ನು ಏಕಲವ್ಯ ವಸತಿ ಶಾಲೆ ನಿರ್ಮಾಣಕ್ಕೆ ಮೀಸಲಿಡಲಾಗಿತ್ತು. ಕುಮಟಾದಲ್ಲಿ ಆಸ್ಪತ್ರೆ ಸ್ಥಾಪನೆಗೆ ಜಾಗದ ಕೊರತೆ ಇದ್ದ ತಾಲೂಕಿನಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಾಗಿ ಮೀಸಲಿಟ್ಟಿದ್ದ 17.14 ಎಕರೆ ವಿಸ್ತೀರ್ಣದ ಜಾಗದಲ್ಲಿ 15.35 ಎಕರೆ ಜಾಗವನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ನೀಡಲು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಸಲ್ಲಿಸಿದ್ದ ಪ್ರಸ್ತಾಪ ಆಧರಿಸಿ ಜಾಗ ಮಂಜೂರು ಮಾಡಲಾಗಿದೆ. ಈ ಜಾಗಕ್ಕೆ ಪರ್ಯಾಯ ಭೂಮಿಯನ್ನು ಜಿಲ್ಲಾಧಿಕಾರಿಗಳು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ನೀಡಬೇಕು ಎಂದು ಷರತ್ತು ಹಾಕಲಾಗಿದೆ.
ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿ ಶಂಭುಲಿಂಗಯ್ಯ ಆದೇಶ ಹೊರಡಿಸಿದ್ದಾರೆ. ಏಕಲವ್ಯ ಶಾಲೆ ನಿರ್ಮಾಣಕ್ಕೆ ಪರ್ಯಾಯ ಭೂಮಿ ನೀಡಲಾಗುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕು ಎಂದು ದೊಡ್ಡ ಹೋರಾಟವೇ ನಡೆದಿತ್ತು. ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಹೋರಾಟ, ಪ್ರತಿಭಟನೆಗಳು ತೀವ್ರಗೊಂಡಿದ್ದವು. ಕಳೆದ ವರ್ಷ ಈ ಹೋರಾಟ ತೀವ್ರಗೊಂಡಿತ್ತು. ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಯಾನವೇ ನಡೆದಿತ್ತು. ವಿಧಾನಸಭೆಯಲ್ಲಿ ಈ ಕುರಿತು ಚರ್ಚೆಯೂ ಆಗಿತ್ತು. ತೀವ್ರ ಒತ್ತಡಕ್ಕೆ ಮಣಿದ ಸರ್ಕಾರ ಮಾಡುವುದಾಗಿ ಭರವಸೆ ನೀಡಿತ್ತು. ನಂತರ ಸ್ಥಳ ಪರಿಶೀಲನೆಗಾಗಿ ಆರೋಗ್ಯ ಸಚಿವ ಡಾ.ಸುಧಾಕರ ಅವರು ಆಗಮಿಸಿ ಕುಮಟಾ ಸೇರಿದಂತೆ ಕೆಲವೆಡೆ ಸ್ಥಳ ವೀಕ್ಷಣೆ ಮಾಡಿದ್ದರು ಹಾಗೂ ಕುಮಟಾ ಸೂಕ್ತ ಸ್ಥಳವೆಂದು ಹೇಳಿದ್ದರು. ನಂತರ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದ ಹಣಕಾಸು ಸಚಿವ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು.

ಪ್ರಮುಖ ಸುದ್ದಿ :-   ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಕೇಸ್: ಎಸ್ಐಟಿ ತಂಡಕ್ಕೆ 18 ಸಿಬ್ಬಂದಿ ನೇಮಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement