ಸಿಎಸ್ ಹೊರತಾಗಿ ಸಚಿವರು, ಅಧಿಕಾರಿಗಳು ಕೊರೊನಾ ಆದೇಶ, ಹೇಳಿಕೆ ನೀಡುವಂತಿಲ್ಲ; ಸಿಎಂ ಬಿಎಸ್‌ವೈ ಖಡಕ್ ಸೂಚನೆ

ಬೆಂಗಳೂರು : ಕೇಂದ್ರ ಗೃಹ ಮಂತ್ರಾಲಯದ ಮಾದರಿಯಲ್ಲೇ ರಾಜ್ಯದಲ್ಲೂ ಲಾಕ್ ಡೌನ್ ತೆರವುಗೊಳಿಸುವಿಕೆ, ಪುನರಾರಂಭ, ಕಂಟೈನ್ಮೆಂಟ್, ನಿರ್ಭಂಧ ಹೇರುವುದು ಇತ್ಯಾದಿ ಆದೇಶಗಳನ್ನು ಮುಖ್ಯ ಕಾರ್ಯದರ್ಶಿಯವರ ಸಹಿಯಲ್ಲಿ ಆದೇಶ ಹೊರಬರಬೇಕು. ಈ ಬಗ್ಗೆ ಯಾವುದೇ ಸಚಿವರಾಗಲಿ, ಅಧಿಕಾರಿಗಳಾಗಲಿ ಪತ್ರಿಕಾ ಹೇಳಿಕೆ ನೀಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಡಕ್ ಆದೇಶ ಮಾಡಿದ್ದಾರೆ.

ಈ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲ ಸಚಿವರಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಕೋವಿಡ್-19ಕ್ಕೆ ಸಂಬಂಧಿಸಿದಂತೆ ಕಾರ್ಯವಿಧಾನದಲ್ಲಿ ಏಕರೂಪತೆ ಮತ್ತು ದೃಢತೆಯನ್ನು ತರಲು ಭಾರತ ಸರ್ಕಾರವು ಅನುಸರಿಸುತ್ತಿರುವ ವಿಧಾನವನ್ನೇ ರಾಜ್ಯ ಸರ್ಕಾರವು ಪಾಲಿಸಲು ನಿರ್ಧರಿಸಲಾಗಿದೆ. ಲಾಕ್ ಡೌನ್ ತೆರವುಗೊಳಿಸುವಿಕೆ, ಪುನರಾರಂಭ, ಕಂಟೈನ್ಮೆಂಟ್, ನಿರ್ಭಂಧ ಹೇರುವುದು ಇತ್ಯಾದಿ ಆದೇಶಗಳನ್ನು ಮುಖ್ಯ ಕಾರ್ಯದರ್ಶಿಯವರ ಸಹಿಯಲ್ಲಿ ರಾಜ್ಯದ ಕಾರ್ಯಕಾರಿ ಸಮಿತಿಗೆ ಸೆಕ್ರೆಟೇರಿಯಲ್ ನೆರವು ನೀಡುತ್ತಿರುವ ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ವಿಭಾಗ ಆದೇಶ ಹೊರಡಿಸುತ್ತದೆ. ಆದರೆ ಇತ್ತೀಚೆಗೆ ಆದೇಶಗಳನ್ನು ಇತರೆ ಇಲಾಖೆಗಳು ಹೊರಡಿಸುತ್ತಿರುವುದನ್ನು ಗಮನಿಸಲಾಗಿದೆ.ಅವುಗಳು ಆದೇಶಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡಬಹುದೇ ವಿನಹ, ಹೊಸ ನಿರ್ಬಂಧಗಳನ್ನು ಹೇರುವ ಕುರಿತು ಆದೇಶ ನೀಡುವುದು ಹಾಗೂ ಪತ್ರಿಕಾ ಹೇಳಿಕೆ ನೀಡುವಂತಿಲ್ಲ ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
ಮುಖ್ಯ ಕಾರ್ಯದರ್ಶಿಯವರು ಹೊರಡಿಸಿದ ಮೇಲ್ಕಂಡ ಆದೇಶಗಳ ಆಧಾರದ ಮೇಲೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಇತರೆ ಇಲಾಖೆಗಳು ನಿರ್ದಿಷ್ಟವಾದ ಎಸ್‌ಓಪಿಗಳನ್ನು ಹೊರಡಿಸಬೇಕು ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಪ್ರದೇಶಗಳೂ ಸೇರಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement