12 ಭಾರತೀಯ ಯುವಕರನ್ನು ವಂಚಿಸಿ ರಷ್ಯಾದ ಪರ ಯುದ್ಧದಲ್ಲಿ ಹೋರಾಡಲು ಕಳುಹಿಸಿದ ಏಜೆಂಟರು : ಸರ್ಕಾರದ ಸಹಾಯ ಕೋರಿದ ಓವೈಸಿ

ನವದೆಹಲಿ: ರಷ್ಯಾದಲ್ಲಿ ಸಿಕ್ಕಿಬಿದ್ದಿರುವ ಯುವಕರನ್ನು ಸುರಕ್ಷಿತವಾಗಿ ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ರಷ್ಯಾ ಸರ್ಕಾರದೊಂದಿಗೆ ಮಾತುಕತೆ ನಡೆಸುವಂತೆ ಹೈದರಾಬಾದ್ ಸಂಸದ ಅಸಾದುದ್ದೀನ್‌ ಓವೈಸಿ ಅವರು, ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ ಅವರನ್ನು ವಿನಂತಿಸಿದ್ದಾರೆ.
ಹೈದರಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಒವೈಸಿ, ಕರ್ನಾಟಕ, ತೆಲಂಗಾಣ, ಗುಜರಾತ್, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರ ಪ್ರದೇಶಕ್ಕೆ ಸೇರಿದ ಯುವಕರನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ರಷ್ಯಾಕ್ಕೆ ಕರೆದೊಯ್ಯಲಾಗಿತ್ತು ಎಂದು ಹೇಳಿದ್ದಾರೆ.
ಭಾರತದ ಹನ್ನೆರಡು ಯುವಕರನ್ನು ಏಜೆಂಟರು ವಂಚಿಸಿದ್ದಾರೆ ಮತ್ತು ಅವರನ್ನು ಉದ್ಯೋಗ ನೀಡುವ ಭರವಸೆಯ ಮೇಲೆ ರಷ್ಯಾಕ್ಕೆ ಕರೆದೊಯ್ಯಲಾಗಿತ್ತು. ಅವರಿಗೆ (ನಿರುದ್ಯೋಗಿ ಯುವಕರಿಗೆ) ಕಟ್ಟಡದ ಭದ್ರತಾ ಕೆಲಸಗಳನ್ನು ನೀಡಲಾಗುತ್ತದೆ ಎಂದು ಏಜೆಂಟ್‌ಗಳು ಹೇಳಿದ್ದರು. ಆದರೆ ಅವರನ್ನು ವಂಚಿಸಿ ನಂತರ ಅವರನ್ನು ರಷ್ಯಾ-ಉಕ್ರೇನ್‌ ಗಡಿಯಲ್ಲಿ ಯುದ್ಧರಂಗದ ಮುಂಚೂಣಿ(warfront)ಗೆ ಕರೆದೊಯ್ಯಲಾಯಿತು. ಸಂತ್ರಸ್ತರ ಕುಟುಂಬ ಸದಸ್ಯರು ತಮ್ಮನ್ನು ಭೇಟಿಯಾಗಿ ಸಹಾಯ ಕೋರಿದ್ದಾರೆ ಎಂದು ಓವೈಸಿ ಹೇಳಿದ್ದಾರೆ.

ಮೂವರು ಏಜೆಂಟರು ದುಬೈನಲ್ಲಿದ್ದು ವ್ಲಾಗ್ ನಡೆಸುತ್ತಿದ್ದಾರೆ ಮತ್ತು ಇಬ್ಬರು ಮುಂಬೈನಿಂದ ಯುವಕರನ್ನು ವಂಚಿಸಿ ಯುದ್ಧರಂಗಕ್ಕೆ ಕಳುಹಿಸಿದ್ದಾರೆ. ಇದೊಂದು ದೊಡ್ಡ ವಂಚನೆ ಜಾಲ ಮತ್ತು ಏಜೆಂಟರು ದೇಶದ ನಿರುದ್ಯೋಗಿ ಯುವಕರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಮೊಬೈಲ್ ನಲ್ಲಿ ಹುಡುಗರ ಜೊತೆ ಹರಟೆ ಬೇಡ ಅಂದಿದ್ದಕ್ಕೆ ಅಣ್ಣನನ್ನೇ ಕೊಡಲಿಯಿಂದ ಹೊಡೆದು ಕೊಂದ 14 ವರ್ಷದ ಬಾಲಕಿ...!

ವಿದೇಶಾಂಗ ಸಚಿವ ಎಸ್ ಜೈಶಂಕರ ಅವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಓವೈಸಿ, “ಅವರು ಉದ್ಯೋಗದ ಉದ್ದೇಶಕ್ಕಾಗಿ ರಷ್ಯಾಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ, ಆದರೆ ಅವರು ಭಾರತೀಯ ಏಜೆಂಟರಿಂದ ವಂಚನೆಗೊಳಗಾಗಿ ರಷ್ಯಾದ ಸೈನ್ಯಕ್ಕೆ ಸೇರಿದ್ದಾರೆ, ಕುಟುಂಬಗಳಿಗೆ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಅವರ ಕುಟುಂಬಗಳು ಅವರ ಬಗ್ಗೆ ಸಾಕಷ್ಟು ಚಿಂತಿತರಾಗಿದ್ದಾರೆ ಎಂದು ಹೇಳಿದ್ದಾರೆ.
ಪತ್ರದಲ್ಲಿ, “ಯುವಕರು ಯುದ್ಧಭೂಮಿಯಲ್ಲಿ ಹೇಗೆ ಉಳಿದುಕೊಂಡರು ಮತ್ತು ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ತಿಳಿಸುವ ವೀಡಿಯೊಗಳನ್ನು ಸಹ ಬಿಡುಗಡೆ ಮಾಡಿದ್ದಾರೆ” ಎಂದು ಹೇಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement