
ನವದೆಹಲಿ: ಡಬಲ್ ಒಲಂಪಿಕ್ ಪದಕ ವಿಜೇತ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲು ಸಿದ್ಧರಾಗಿದ್ದಾರೆ. 29ರ ಹರೆಯದ ಪಿ.ವಿ. ಸಿಂಧು ಹೈದರಾಬಾದ್ ಮೂಲದ ಪೊಸಿಡೆಕ್ಸ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟ ದತ್ತ ಸಾಯಿ ಅವರನ್ನು ಡಿಸೆಂಬರ್ 22 ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ. ಡಿಸೆಂಬರ್ 20 ರಂದು ಮದುವೆಯ ಪೂರ್ವದ ಆಚರಣೆಗಳೊಂದಿಗೆ ಇದು ಆರಂಭವಾಗುತ್ತದೆ.
ಡಿಸೆಂಬರ್ 24 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ ಎಂದು ಸಿಂಧು ಕುಟುಂಬ ದೃಢಪಡಿಸಿದೆ. ಜನವರಿಯಲ್ಲಿ ಸಿಂಧು ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಸರ್ಕ್ಯೂಟ್‌ಗೆ ಮರಳಬಹುದು ಎಂಬ ಕಾರಣಕ್ಕಾಗಿ ಮದುವೆಯನ್ನು ಡಿಸೆಂಬರ್‌ನಲ್ಲಿ ನಿಗದಿಪಡಿಸಲಾಗಿದೆ.
ಉದಯಪುರದಲ್ಲಿ ಮದುವೆ
“ಎರಡೂ ಕುಟುಂಬಗಳು ಒಬ್ಬರಿಗೊಬ್ಬರು ಮೊದಲೇ ಗೊತ್ತಿದ್ದ ಕುಟುಂಬವಾಗಿವೆ. ಆದರೆ ಕೇವಲ ಒಂದು ತಿಂಗಳ ಹಿಂದೆಯೇ ಮದುವೆಯನ್ನು ಅಂತಿಮಗೊಳಿಸಲಾಯಿತು. ಜನವರಿಯಿಂದ ಪಿ.ವಿ. ಸಿಂಧು ಅವರು ವೇಳಾಪಟ್ಟಿಯಂತೆ ಬ್ಯಾಡ್ಮಿಂಟನ್‌ನಲ್ಲಿ ಹೆಚ್ಚು ಕಾರ್ಯನಿರತರಾಗುವುದರಿಂದ ಈಗ ಮದುವೆ ನಿಗದಿ ಮಾಡಲಾಗಿದೆ ಎಂದು ಸಿಂಧು ಅವರ ತಂದೆ ಪಿವಿ ರಮಣ ತಿಳಿಸಿದ್ದಾರೆ.
ಹಾಗಾಗಿ ಡಿಸೆಂಬರ್ 22 ರಂದು ಮದುವೆ ಸಮಾರಂಭವನ್ನು ನಡೆಸಲು ಎರಡು ಕುಟುಂಬಗಳು ನಿರ್ಧರಿಸಿವೆ. ಡಿಸೆಂಬರ್ 24 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ. ಮುಂದಿನ ಸೀಸನ್ ಪ್ರಮುಖವಾಗಿರುವುದರಿಂದ ಶೀಘ್ರದಲ್ಲೇ ಅವರು ತರಬೇತಿಗೆ ಸೇರಿಕೊಳ್ಳಲಿದ್ದಾರೆ.
ಭಾರತದ ಅತ್ಯಂತ ಪ್ರಸಿದ್ಧ ಕ್ರೀಡಾಪಟುಗಳಲ್ಲಿ ಒಬ್ಬರಾದ ಸಿಂಧು ಅವರು 2019 ರಲ್ಲಿ ಐತಿಹಾಸಿಕ ಚಿನ್ನ ಸೇರಿದಂತೆ ಐದು ವಿಶ್ವ ಚಾಂಪಿಯನ್‌ಶಿಪ್ ಪದಕಗಳನ್ನು ಹೊಂದಿದ್ದಾರೆ. ಅವರ 2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಮತ್ತು 2020 ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 2017 ರಲ್ಲಿ, ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ವಿಶ್ವ ಶ್ರೇಯಾಂಕ ನಂ. 2 ತಲುಪಿದ್ದರು.
ಇತ್ತೀಚೆಗಷ್ಟೇ, ಸಿಂಧು ಲಕ್ನೋದಲ್ಲಿ ನಡೆದ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಪ್ರಶಸ್ತಿ ಗೆಲ್ಲುವ ಮೂಲಕ ಕೆಲತಿಂಗಳಿಂದ ಇದ್ದ ತಮ್ಮ ಪ್ರಶಸ್ತಿಯ ಬರವನ್ನು ಕೊನೆಗೊಳಿಸಿದರು.



ನಿಮ್ಮ ಕಾಮೆಂಟ್ ಬರೆಯಿರಿ