ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಬೆಂಗಳೂರಿನಲ್ಲಿ ಭೀಕರ ಹತ್ಯಾಕಾಂಡ : ಪತ್ನಿ ಸೇರಿ ಒಂದೇ ಕುಟುಂಬದ ಏಳು ಮಂದಿಯನ್ನು ಕೊಂದ ಕ್ಯಾಬ್ ಚಾಲಕ

ಬೆಂಗಳೂರು: ಪತ್ನಿಯು ತವರು ಮನೆಯವರ ಜೊತೆ ನಿರಂತರ ಸಂಪರ್ಕದಲ್ಲಿದ್ದಳೆಂಬ ಅಸಮಾಧಾನದಿಂದ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಸೇರಿದಂತೆ ಆಕೆಯ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಹತ್ಯೆಗೀಡಾದವರಲ್ಲಿ ಏಳು ವರ್ಷದ ಬಾಲಕನೂ ಸೇರಿದ್ದಾನೆ ಎಂದು ಹೇಳಲಾಗಿದೆ.
ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪ ವಾಸವಿದ್ದ ಆರೋಪಿ ಇಂದೂಶೇಖರ ಎಂಬಾತ ತಾನೇ ಏಳು ಮಂದಿಯನ್ನು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಆದರೆ ಇದರ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಯುತ್ತಿದೆ. ಈ ಪೈಕಿ ಏಳು ವರ್ಷದ ಪುನೀತ ಎಂಬ ಬಾಲಕನ ಶವವನ್ನು ಪೊಲೀಸರು ಪತ್ತೆ ಮಾಡಿದ್ದು, ಉಳಿದವರ ಮೃತದೇಹಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಕೌಟುಂಬಿಕ ಕಲಹವೇ ಈ ಸಾಮೂಹಿಕ ಹತ್ಯೆಗೆ ಪ್ರಮುಖ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪತ್ನಿ ತನ್ನ ತವರು ಮನೆಯವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವುದನ್ನು ಇಂದೂಶೇಖರ ಸಹಿಸುತ್ತಿರಲಿಲ್ಲ ಎನ್ನಲಾಗಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಮನಸ್ತಾಪ ಉಂಟಾಗುತ್ತಿತ್ತು. ಈ ಅಸಮಾಧಾನವೇ ಪತ್ನಿ ಹಾಗೂ ಆಕೆಯ ಕುಟುಂಬದವರನ್ನು ಹತ್ಯೆ ಮಾಡಲು ಕಾರಣವಾಗಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಮೃತರನ್ನು ಆರೋಪಿಯ ಪತ್ನಿ ಸುನೀತಾ, ಶ್ರೀರಾಮಪುರದವರಾದ ಅತ್ತೆ ರೂಪವತಿ, ಭಾವಂದಿರಾದ ಶಿವಕುಮಾರ ಮತ್ತು ಶಂಕರ, ರೂಪವತಿಯ ಸೊಸೆಯಂದಿರಾದ ದಿವ್ಯಾ ಮತ್ತು ನಳಿನಿ ಹಾಗೂ ಶಿವಕುಮಾರ ಅವರ ಏಳು ವರ್ಷದ ಪುತ್ರ ಪುನೀತ ಎಂದು ಗುರುತಿಸಲಾಗಿದೆ.
ಪೊಲೀಸರ ಅನುಮಾನದ ಪ್ರಕಾರ, ಆರೋಪಿ ರುಬ್ಬುವ ಕಲ್ಲನ್ನು (grinding stone) ಬಳಸಿ ಏಳು ಮಂದಿಯ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಮೃತದೇಹಗಳನ್ನು ತನ್ನ ಕಾರಿನಲ್ಲಿ ಸಾಗಿಸಿ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾನೆ ಎನ್ನಲಾಗಿದೆ. ಹತ್ಯೆ ನಡೆದ ಸ್ಥಳಗಳಲ್ಲಿ ರಕ್ತದ ಕಲೆಗಳು ಉಳಿಯದಂತೆ ರಾಸಾಯನಿಕಗಳನ್ನು ಬಳಸಿ ಸ್ವಚ್ಛಗೊಳಿಸುವ ಮೂಲಕ ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವ ಶಂಕೆಯೂ ವ್ಯಕ್ತವಾಗಿದೆ.

ಪ್ರಮುಖ ಸುದ್ದಿ :-   ದೀಪಾವಳಿಗೆ ಮುನ್ನ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ

ಕಾಣೆಯಾದ ಬಗ್ಗೆ ದೂರು ನೀಡಿದ ಬಳಿಕ ಬಯಲಾದ ಪ್ರಕರಣ
ಸುಮಾರು 20 ವರ್ಷಗಳ ಹಿಂದೆ ಸುನೀತಾಳನ್ನು ವಿವಾಹವಾಗಿದ್ದ ಇಂದುಶೇಖರ ಪತ್ನಿ ತನ್ನ ತವರು ಮನೆಯವರ ಜೊತೆ ಸಂಬಂಧವನ್ನು ಮುಂದುವರಿಸಿದ್ದಕ್ಕೆ ಅಸಮಾಧಾನಗೊಂಡಿದ್ದ. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಪತ್ನಿಯ ತಾಯಿ ಮತ್ತು ಸಹೋದರರು ಆಕೆಯ ಪರವಾಗಿ ನಿಲ್ಲುತ್ತಿದ್ದರು ಎಂಬುದಕ್ಕೆ ಈತನಿಗೆ ಅವರ ಮೇಲೆ ಕೋಪವಿತ್ತು. ಪತ್ನಿ ಮತ್ತು ಆಕೆಯ ತವರು ಮನೆಯವರ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಆರೋಪಿ, ಇಡೀ ಕುಟುಂಬವನ್ನೇ ಮುಗಿಸಲು ಸಂಚು ರೂಪಿಸಿದ್ದ. ಮೊದಲು ಪತ್ನಿ ಸುನೀತಾಳನ್ನು ತನ್ನ ಮನೆಯಲ್ಲೇ ರುಬ್ಬುಗುಂಡಿನಿಂದ ಹೊಡೆದು ಕೊಂದಿದ್ದಾನೆ. ಬಳಿಕ ಆಕೆಯ ಕುಟುಂಬದವರಿಗೆ ಅನುಮಾನ ಬಾರದಂತೆ ಸುನೀತಾ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾಳೆ ಎಂದು ಸುಳ್ಳು ಹೇಳಿ ನಂಬಿಸಿದ್ದಾನೆ. ನಂತರ ಪಾರ್ಟಿ ನೆಪದಲ್ಲಿ ಭಾಮೈದರಾದ ಶಿವಕುಮಾರ ಮತ್ತು ಶಂಕರ ಅವರನ್ನು ಮನೆಗೆ ಕರೆಸಿ ರುಬ್ಬುಗುಂಡಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ. ಬಳಿಕ ಬಾಮೈದರ ಪತ್ನಿಯರಾದ ನಳಿನಿ, ದಿವ್ಯಾ, ಅತ್ತೆ ರೂಪವತಿ ಹಾಗೂ ಬಾಲಕ ಪುನೀತನನ್ನು ರುಬ್ಬುಗುಂಡಿನಿಂದ ಕೊಂದಿದ್ದಾನೆ ಎನ್ನಲಾಗಿದೆ. ನಂತರ ಶವಗಳನ್ನು ಯಾರಿಗೂ ಸಿಗಬಾರದು ಎಂದು ಬೇರೆ ಬೇರೆ ಕಡೆ ಎಸೆದಿದ್ದ.
ನಳಿನಿ ನಿಗೂಢವಾಗಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆಕೆಯ ತಾಯಿ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಇಂದೂಶೇಖರನನ್ನು ವಿಚಾರಣೆಗೊಳಪಡಿಸಿದಾಗ ಆತ ಪರಸ್ಪರ ವಿರುದ್ಧವಾದ ಹೇಳಿಕೆಗಳನ್ನು ನೀಡಿದ್ದಾನೆ. ಆತನ ಹೇಳಿಕೆಗಳಲ್ಲಿ ಕಂಡುಬಂದ ವ್ಯತ್ಯಾಸಗಳಿಂದ ಅನುಮಾನಗೊಂಡ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಏಳು ಮಂದಿಯ ಹತ್ಯೆಯ ಭೀಕರ ಪ್ರಕರಣ ಬಯಲಾಗಿದೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಕುಕ್ಕೆ ಸುಬ್ರಹ್ಮಣ್ಯ | ಸಾಯುವುದಕ್ಕಾಗಿ ನದಿಗೆ ಹಾರಿದ ಮಹಿಳೆ ; ಜೀವ ಉಳಿಸಿದ ನದಿಯಲ್ಲಿದ್ದ ಮೊಸಳೆ...!

ನಂದಿ ಬೆಟ್ಟದ ತಪ್ಪಲಿನಲ್ಲಿ ಏಳು ವರ್ಷದ ಬಾಲಕನ ಶವ ಪತ್ತೆ
ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರು ನಂದಿ ಬೆಟ್ಟದ ತಪ್ಪಲಿನಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಏಳು ವರ್ಷದ ಪುತ್ರ ಪುನೀತನ ಮೃತದೇಹ ಪತ್ತೆಯಾಗಿದೆ. ಈ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಪತ್ತೆಯಾದ ಮೊದಲ ಮೃತದೇಹ ಇದಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಇಂದೂಶೇಖರ ತಾನು ಪತ್ನಿ ಸೇರಿದಂತೆ ಆಕೆಯ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ, ಆತ ನೀಡಿರುವ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪೊಲೀಸರು ಇನ್ನೂ ಪರಿಶೀಲಿಸುತ್ತಿದ್ದಾರೆ. ಉಳಿದ ಆರು ಮಂದಿಯ ಮೃತದೇಹಗಳು ಎಲ್ಲಿವೆ ಎಂಬುದನ್ನು ಪತ್ತೆಹಚ್ಚಲು ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಘಟನೆಯ ಸಂಪೂರ್ಣ ಹಿನ್ನೆಲೆ, ಹತ್ಯೆ ನಡೆದಿರುವ ನಿಖರ ಕ್ರಮ ಹಾಗೂ ಮೃತದೇಹಗಳನ್ನು ಸಾಗಿಸಿ ಎಸೆದಿರುವ ಸ್ಥಳಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸುವ ಮತ್ತು ಆರೋಪಿಯ ಹೇಳಿಕೆಗಳನ್ನು ಪರಿಶೀಲಿಸುವ ಕಾರ್ಯವೂ ಮುಂದುವರಿದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement