ಪುರೂಲಿಯಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಾದ್ಯಂತ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿರುವ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯು ಪುರೂಲಿಯಾದ ಪುಟ್ಟ ಗ್ರಾಮವೊಂದರಲ್ಲಿ ಅನಿರೀಕ್ಷಿತ ಸಂತೋಷದಾಯಕ ತಿರುವಿಗೆ ಕಾರಣವಾಗಿದೆ. ಸಾಮಾನ್ಯವಾಗಿ ಕೇವಲ ಕಾಗದಪತ್ರಗಳ ಕೆಲಸ ಎಂದು ಪರಿಗಣಿಸಲಾಗುವ ಈ ಪ್ರಕ್ರಿಯೆಯು, ಈ ಅಪರೂಪದ ನಿದರ್ಶನದಲ್ಲಿ, ಸುಮಾರು ನಾಲ್ಕು ದಶಕಗಳ ಹಿಂದೆ ಮುರಿದು ಹೋಗಿದ್ದ ಒಂದು ಕುಟುಂಬವನ್ನು ಪುನಃ ಒಂದು ಮಾಡಿದೆ.
ಚಕ್ರವರ್ತಿ ಕುಟುಂಬದ ಹಿರಿಯ ಮಗ ವಿವೇಕ ಚಕ್ರವರ್ತಿ ಅವರು 1988 ರಲ್ಲಿ ಮನೆ ಬಿಟ್ಟು ಹೋದ ನಂತರ ಯಾವುದೇ ಸುಳಿವಿಲ್ಲದೆ ಕಣ್ಮರೆಯಾಗಿದ್ದರು. ಹಲವು ವರ್ಷಗಳ ಹುಡುಕಾಟವೂ ಫಲ ನೀಡಲಿಲ್ಲ. ಈ ಕುಟುಂಬಕ್ಕೆ ಈ ದುಃಖವು ಆಹ್ವಾನವಿಲ್ಲದ ಶಾಶ್ವತ ಅತಿಥಿಯಂತೆ ಕಾಡುತ್ತಿತ್ತು. ತಮ್ಮ ಮನೆಯ ಮಗನನ್ನು ಮತ್ತೆ ನೋಡುವ ಭರವಸೆಯನ್ನು ಕುಟುಂಬ ಸಂಪೂರ್ಣವಾಗಿ ಕೈಬಿಟ್ಟಿತ್ತು.
ಆದರೆ, ವಿಧಿಯ ಅನಿರೀಕ್ಷಿತ ತಿರುವಿನಲ್ಲಿ, ಚುನಾವಣಾ ಆಯೋಗದ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಅವರು ಶಾಶ್ವತವಾಗಿ ಮುಚ್ಚಿಹೋಗಿದೆ ಎಂದು ಭಾವಿಸಿದ್ದ ಬಾಗಿಲು ಪುನಃ ತೆರೆಯುವಂತೆ ಮಾಡಿತು.
ಒಂದು ಫೋನ್ ಕರೆಯಿಂದ ಪ್ರಕರಣಕ್ಕೆ ಟ್ವಿಸ್ಟ್
ಈ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು ಒಂದು ಸಾಮಾನ್ಯ ಸರ್ಕಾರಿ ಅರ್ಜಿ ನಮೂನೆ ಮತ್ತು ತಮ್ಮ ಕರ್ತವ್ಯವನ್ನು ಬಿಡದ ತಮ್ಮನ ಸ್ಥಿರ ಪ್ರಯತ್ನದಿಂದ. ಕಿರಿಯ ಸಹೋದರನಾದ ಪ್ರದೀಪ ಚಕ್ರವರ್ತಿ ಅವರು ತಮ್ಮ ಪ್ರದೇಶದಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿ (BLO) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಸ್‌ಐಆರ್ (SIR) ಪ್ರಕ್ರಿಯೆ ಸಂದರ್ಭದಲ್ಲಿ, ಅವರ ಹೆಸರು ಮತ್ತು ಫೋನ್ ಸಂಖ್ಯೆ ಸ್ಥಳೀಯವಾಗಿ ವಿತರಿಸಲಾದ ಪ್ರತಿಯೊಂದು ಮತಗಟ್ಟೆ ಸಮೀಕ್ಷೆ ಅರ್ಜಿಯಲ್ಲಿ ಮುದ್ರಣಗೊಂಡಿತ್ತು.
ಒಂದು ಫೋನ್ ಕರೆ, ಬದಲಾದ ಜೀವನ
ಒಂದು ದಿನ ಬಂದ ಸಾಮಾನ್ಯ ದೂರವಾಣಿ ಕರೆ ಎಲ್ಲವನ್ನೂ ಬದಲಾಯಿಸಿತು. ಕೋಲ್ಕತ್ತಾದಲ್ಲಿ ವಾಸಿಸುತ್ತಿದ್ದ ವಿವೇಕ ಅವರ ಮಗ, ಬೂತ್ ಮಟ್ಟದ ಅಧಿಕಾರಿ (BLO)ಗೆ ಡಾಕ್ಯುಮೆಂಟ್‌ಗಳ ಬಗ್ಗೆ ಕೇಳಲು ಕರೆ ಮಾಡಿದರು. ಅದು ಬಿಎಲ್‌ಒ ಪ್ರದೀಪ ಅವರಿಗೆ ಬಂತು. ಆಗ ವಿವೇಕ ಅವರ ಮಗನಿಗೆ ತಾನು ತನ್ನ ಚಿಕ್ಕಪ್ಪನ ಜೊತೆ ಮಾತನಾಡುತ್ತಿದ್ದೇನೆಂಬ ಅರಿವಿರಲಿಲ್ಲ. ಸಹಜವಾಗಿ ಎಸ್‌ಐಆರ್ ಪ್ರಕ್ರಿಯೆಯ ಬಗ್ಗೆ ಪ್ರಾರಂಭವಾದ ಮಾತುಕತೆಯು, ನಂತರ ಇಬ್ಬರೂ ತಮ್ಮ ಕುಟುಂಬದ ಬಗ್ಗೆ ಮಾತುನಾಡುವತ್ತ ತಿರುಗಿತು. ಆಗ ಇದಕ್ಕೆ ಅನಿರೀಕ್ಷಿತ ಹಾಗೂ ಭಾವನಾತ್ಮಕ ತಿರುವು ಸಿಕ್ಕಿತು.
ಬಿಎಲ್‌ಒ ಪ್ರದೀಪ ಚಕ್ರವರ್ತಿ ಈ ಬಗ್ಗೆ ಪ್ರತಿಕ್ರಿಯಿಸಿ, “ನನ್ನ ಅಣ್ಣ 1988 ರಲ್ಲಿ ಕೊನೆಯ ಬಾರಿ ಮನೆಗೆ ಬಂದಿದ್ದರು. ನಂತರ ಅವರು ಕಣ್ಮರೆಯಾದರು. ನಾವು ಎಲ್ಲೆಡೆ ಹುಡುಕಿದೆವು. ಬಹುಶಃ ತಪ್ಪು ತಿಳುವಳಿಕೆಯಿಂದ ಅವರು ಎಲ್ಲ ಸಂಬಂಧಗಳನ್ನು ಕಡಿದುಕೊಂಡಿದ್ದರು. ಈ ಹುಡುಗ ನನಗೆ ಕರೆ ಮಾಡಿದಾಗ ಮತ್ತು ಅವರ ಉತ್ತರಗಳು ನಮ್ಮ ಕುಟುಂಬಕ್ಕೆ ಮಾತ್ರ ತಿಳಿದಿರುವ ವಿಷಯಗಳಿಗೆ ಹೊಂದಿಕೆಯಾದಾಗ, ನಾನು ನನ್ನ ಅಣ್ಣನ ಮಗನೊಂದಿಗೆ ಮಾತನಾಡುತ್ತಿದ್ದೇನೆಂದು ನನಗೆ ಅರಿವಾಯಿತು ಎಂದು ಹೇಳಿದ್ದಾರೆ.
37 ವರ್ಷಗಳ ಮೌನದ ನಂತರ…
ಈ ವಿಷಯ ಎರಡೂ ಕಡೆಗಳಲ್ಲಿ ಅಲೆಯಂತೆ ಅಪ್ಪಳಿಸಿತು. ಶೀಘ್ರದಲ್ಲೇ ಅನಿರೀಕ್ಷಿತ ಘಟನೆ ಸಂಭವಿಸಿತು. ಪ್ರದೀಪ ಅವರು ತಮ್ಮ ಅಣ್ಣ ವಿವೇಕ ಅವರೊಂದಿಗೆ ಮಾತನಾಡಿದರು. 37 ವರ್ಷಗಳ ಮೌನದ ನಂತರ, ಅಣ್ಣ-ತಮ್ಮಂದಿರು ಅಂತಿಮವಾಗಿ ಮತ್ತೆ ಒಬ್ಬರ ಧ್ವನಿಯನ್ನು ಒಬ್ಬರು ಕೇಳಿದರು ಮತ್ತು ದಶಕಗಳ ಅನಿಶ್ಚಿತತೆಯ ನಡುವೆ ಸಂತೋಷವು ಉಕ್ಕಿ ಹರಿಯಿತು.
ಈ ಅನಿರೀಕ್ಷಿತ ತಿರುವಿಗೆ ಪ್ರತಿಕ್ರಿಯಿಸಿರುವ ವಿವೇಕ ಚಕ್ರವರ್ತಿ ಅವರು, “ಈ ಭಾವನೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. 37 ಸುದೀರ್ಘ ವರ್ಷಗಳ ನಂತರ, ನಾನು ಅಂತಿಮವಾಗಿ ಮನೆಗೆ ಮರಳುತ್ತಿದ್ದೇನೆ. ನಾನು ಎಲ್ಲರೊಂದಿಗೆ ಮಾತನಾಡಿದ್ದೇನೆ. ನನಗೆ ತುಂಬಿದ ಸಂತೋಷವಿದೆ. ಚುನಾವಣಾ ಆಯೋಗಕ್ಕೆ ನಾನು ಧನ್ಯವಾದ ಹೇಳುತ್ತೇನೆ, ಏಕೆಂದರೆ SIR ಪ್ರಕ್ರಿಯೆ ಇಲ್ಲದಿದ್ದರೆ, ಈ ಪುನರ್ಮಿಲನ ಎಂದಿಗೂ ಸಂಭವಿಸುತ್ತಿರಲಿಲ್ಲ” ಎಂದು ಹೇಳಿದ್ದಾರೆ.
ರಾಜ್ಯಾದ್ಯಂತ SIR ಪ್ರಕ್ರಿಯೆಯ ಕುರಿತು ರಾಜಕೀಯ ಚರ್ಚೆಗಳು ಮುಂದುವರಿದಿದ್ದರೂ, ಗೋಬೊರಂಡಾ ಗ್ರಾಮದಿಂದ ಬಂದ ಈ ಕಥೆಯು ಮಾತ್ರ ವಿಭಿನ್ನವಾಗಿದೆ. ಒಂದು ಸರ್ಕಾರಿ ಕಾರ್ಯವಿಧಾನವು ಈ ಕುಟುಂಬದ ಆಳವಾದ ಗಾಯವನ್ನು ಗುಣಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಚಕ್ರವರ್ತಿ ಕುಟುಂಬ ಈಗ ಕೃತಜ್ಞತೆಯಿಂದ ಹೇಳುತ್ತದೆ.
ಕೇವಲ ಒಂದು ಹೆಸರು ಮತ್ತು ಫೋನ್ ಸಂಖ್ಯೆಯನ್ನು ಎಸ್‌ಐಆರ್ (SIR) ಫಾರ್ಮ್‌ನಲ್ಲಿ ಮುದ್ರಿಸಿದ್ದರಿಂದ, ಗೊತ್ತಿಲ್ಲದೆ ಮುರಿದಹೋಗಿದ್ದ ಕುಟುಂಬವೊಂದು ಮತ್ತೆ ಒಂದುಗೂಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ