ಪೌರ ಕಾರ್ಮಿಕರಿಗೆ ಸಿಹಿಸುದ್ದಿ : ರಾಜ್ಯದ 11,133 ಪೌರಕಾರ್ಮಿಕರನ್ನು ಸರ್ಕಾರಿ ನೌಕರರೆಂದು ನೇಮಕ ಮಾಡಿಕೊಳ್ಳಲು ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡುದ ಬಿಪಿಎಲ್‌ (BPL) ಕಾರ್ಡ್‌ದಾರರಿಗೆ 75 ಯುನಿಟ್‌ ತನಕ ಉಚಿತ ವಿದ್ಯುತ್‌ ನೀಡಲು ರಾಜ್ಯ ಸಚಿವ ಸಂಪುಟ ಗ್ರೀನ್‌ ಸಿಗ್ನಲ್‌ ನೀಡಿದೆ. ಹಾಗೂ ರಾಜ್ಯದ ನಗರಸಭೆ, ಪುರಸಭೆ ಮತ್ತು ಇತರೆ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 11,133 ಪೌರಕಾರ್ಮಿಕರನ್ನು ವಿಶೇಷ ನೇಮಕಾತಿ ಅಡಿಯಲ್ಲಿ ಸಕ್ರಮ ಮಾಡಲುಸಹ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಇಂದು, ಸೋಮವಾರ ವಿಧಾನಸಭೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಬಿಬಿಎಂಪಿಯ 3673, ನಗರಸಭೆ ಮತ್ತು ಪುರಸಭೆಗಳ 5533 ಹಾಗೂ ಮಹಾನಗರ ಪಾಲಿಕೆಗಳಲ್ಲಿನ 1927 ಗುತ್ತಿಗೆ ನೌಕರರನ್ನು ಕಾಯಂಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ. ಚಾತಕ ಪಕ್ಷಿಯಂತೆ ಕಾಯುತ್ತಿರುವ ಪೌರಕಾರ್ಮಿಕರಿಗೆ ಇದು ದಸರಾ ಗಿಫ್ಟ್‌ ಆಗಿದೆ.

ಈ ನೌಕರರು ಈಗ 17000-28980 ವೇತನ ಶ್ರೇಣಿ ಅಡಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಪೌರ ಕಾರ್ಮಿಕರ ಕಾಯಂ ಮಾಡುವುದು ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಯಾಗಿದೆ. ಅನೇಕ ದಿನಗಳಿಂದ ಹೋರಾಟ ಮಾಡುತ್ತಿದ್ದ ಪೌರಕಾರ್ಮಿಕರ ಹೋರಾಟಕ್ಕೆ ನ್ಯಾಯ ಸಿಕ್ಕಿದೆ.
ಅಲ್ಲದೆ, ಎಸ್ಸೆಸ್ಸೆಲ್ಸಿ (SSLC) ಹಾಗೂ ಪಿಯು (PU) ಪರೀಕ್ಷಾ ಮಂಡಳಿ ವಿಲೀನಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪರೀಕ್ಷಾ ಮಂಡಳಿಗಳನ್ನ ವಿಲೀನಗೊಳಿಸಿ ಏಕರೂಪದ ಪರೀಕ್ಷಾ ಮಂಡಳಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಅನಗತ್ಯ ಖರ್ಚು, ಹೆಚ್ಚುವರಿ ಸಿಬ್ಬಂದಿ ನೇಮಕ ಸೇರಿದಂತೆ ಹಲವು ಅನಗತ್ಯ ಖರ್ಚಿಗೆ ಬ್ರೇಕ್ ಹಾಕಲು ಈ ವಿಲೀನಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಶಿಕ್ಷಕರ ಮ್ಯೂಚುಯಲ್‌ ವರ್ಗಾವಣೆಗೂ ಒಪ್ಪಿಗೆ ನೀಡಲಾಗಿದೆ. ಒಂದೇ ವಿಷಯದ ಇಬ್ಬರೂ ಶಿಕ್ಷಕರು ಒಪ್ಪಿಗೆ ಇದ್ದಲ್ಲಿ ವರ್ಗಾವಣೆ ಮಾಡಿಸಿಕೊಳ್ಳಬಹುದು. ಕರ್ನಾಟಕ ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕ್ಕೆ ಒಪ್ಪಿಗೆ ನೀಡಲಾಗಿದೆ. ಶಿಕ್ಷಕರ ವರ್ಗಾವಣೆಯಲ್ಲಿ ಕೆಲ ಗೊಂದಲಗಳ ನಿವಾರಣೆ ಕುರಿತ ವಿಧೇಯಕಕ್ಕೆ ಒಪ್ಪಿಗೆ ನೀಡಲಾಗಿದ್ದು, ನಾಳೆ ವಿಧೇಯಕ ಮಂಡನೆಯಾಗಲಿದೆ.

ಪ್ರಮುಖ ಸುದ್ದಿ :-   ಬೆಂಗಳೂರಿನ ಹಲವೆಡೆ ಜೋರಾಗಿ ಮಳೆ

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement