ಶಿರಸಿ: ಪಡಿತರ ವ್ಯವಸ್ಥೆಯಡಿ ಜನರಿಗೆ ವಿತರಿಸಬೇಕಾದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಭಾರಿ ಪ್ರಮಾಣದ ಪಡಿತರ ಅಕ್ಕಿಯನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನೀಲೇಕಣಿ ಬಳಿ ವಶಪಡಿಸಿಕೊಳ್ಳಲಾಗಿದೆ ಎಂದುವರದಿಯಾಗಿದೆ.
ಪಡಿತರ ಅಕ್ಕಿಯ ಅಕ್ರಮ ಸಾಗಾಟದ ಜಾಲದ ವಿರುದ್ಧ ಶಿರಸಿ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಸಿದ್ದಾಪುರದಿಂದ ಮಹಾರಾಷ್ಟ್ರದ ಕೊಲ್ಲಾಪುರದತ್ತ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 473 ಚೀಲ ಅಕ್ಕಿಯನ್ನು ವಶಕ್ಕೆಪಡೆಯಲಾಗಿದೆ ಎಂದು ತಿಳಿದುಬಂದಿದೆ.
ತಹಶೀಲ್ದಾರ್ ಪಟ್ಟರಾಜ ಗೌಡ ಹಾಗೂ ಶಿರಸಿ ಟೌನ್ ಠಾಣೆಯ ಪಿಎಸ್‌ಐ ನರಸಿಂಹಲು ಅವರ ನೇತೃತ್ವದಲ್ಲಿ ನೀಲೇಕಣಿ ಭೀಮನಗುಡ್ಡ ಕ್ರಾಸ್ ಬಳಿ ಅಧಿಕಾರಿಗಳು ದಿಢೀರ್ ತಪಾಸಣೆ ಆರಂಭಿಸಿದರು. ಆದರೆ, ಅಧಿಕಾರಿಗಳ ಕಾರ್ಯಾಚರಣೆಯ ಸುಳಿವು ಸಿಗುತ್ತಿದ್ದಂತೆಯೇ ಲಾರಿ ಚಾಲಕ ವಾಹನ ಓಡಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಲಾರಿಯನ್ನು ಬೆನ್ನಟ್ಟಿ ಅಡ್ಡಗಟ್ಟಿ ವಶಕ್ಕೆ ಪಡೆದಿದ್ದಾರೆ.
ಲಾರಿಯ ಪರಿಶೀಲನೆ ನಡೆಸಿದಾಗ ದಾಖಲೆಗಳಿಲ್ಲದೆ ಅಪಾರ ಪ್ರಮಾಣದ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಲಾರಿಯಲ್ಲಿ ಸುಮಾರು 473 ಚೀಲ ಪಡಿತರ ಅಕ್ಕಿ ಪತ್ತೆಯಾಗಿದ್ದು, ಅಕ್ಕಿ ಸಮೇತ 10 ಚಕ್ರದ ಲಾರಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಪ್ರಕರಣದಲ್ಲಿ ಮತ್ತೊಂದು ಕುತೂಹಲಕಾರಿ ಅಂಶವೂ ಅಧಿಕಾರಿಗಳ ಗಮನ ಸೆಳೆದಿದೆ. ಲಾರಿ ಅಕ್ಕಪಕ್ಕವೇ ಸಾಗುತ್ತಿದ್ದ ಕಾರಿನ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಲಾರಿಯ ಚಲನವಲನಕ್ಕೆ ಮುನ್ನೆಚ್ಚರಿಕೆ ನೀಡಲು ಅಥವಾ ತಪಾಸಣಾ ಕೇಂದ್ರಗಳ ಮಾಹಿತಿ ರವಾನಿಸಲು ಈ ಕಾರು ಬಳಸಲಾಗುತ್ತಿತ್ತೇ ಎಂಬ ಅನುಮಾನ ಮೂಡಿದ್ದು, ಅಕ್ರಮ ಸಾಗಾಟದ ಹಿಂದೆ ಸಂಘಟಿತ ಜಾಲ ಕಾರ್ಯನಿರ್ವಹಿಸುತ್ತಿದೆಯೇ ಎಂಬ ದಿಕ್ಕಿನಲ್ಲಿ ತನಿಖೆ ಚುರುಕುಗೊಂಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ