
ಕಾರವಾರ: ಭಾರತೀಯ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಕಾರವಾರದಲ್ಲಿ ನೌಕಾಪಡೆಯ ‘ಐಎನ್ಎಸ್ ವಾಗ್ಶೀರ್’ (INS Vaghsheer) ಸಬ್‌ಮರಿನ್‌ನಲ್ಲಿ (ಜಲಾಂತರ್ಗಾಮಿ) ಸಮುದ್ರದ ಆಳಕ್ಕೆ ಇಳಿಯುವ ಮೂಲಕ ಐತಿಹಾಸಿಕ ಸಾಹಸ ಮೆರೆದಿದ್ದಾರೆ.
ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ನಂತರ ಸಬ್‌ಮರಿನ್‌ನಲ್ಲಿ ಪಯಣಿಸಿದ ಎರಡನೇ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಮುರ್ಮು ಪಾತ್ರರಾಗಿದ್ದಾರೆ. ಕಾರವಾರದ ನೌಕಾ ನೆಲೆಯಿಂದ ಸಬ್‌ಮರಿನ್ ಏರಿದ ಅವರು, ಸುಮಾರು ಎರಡು ಗಂಟೆಗಳ ಕಾಲ ನೀರಿನ ಅಡಿಯಲ್ಲಿ ಕಳೆದರು. ಈ ವೇಳೆ ನೌಕಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ್ದಲ್ಲದೆ, ಯುದ್ಧ ಸನ್ನದ್ಧತೆಯ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದರು.

‘ಪ್ರಾಜೆಕ್ಟ್ 75’ ಅಡಿಯಲ್ಲಿ ಭಾರತದಲ್ಲೇ ತಯಾರಾದ ಆರು ಸ್ಕಾರ್ಪೀನ್ ದರ್ಜೆಯ ಸಬ್‌ಮರಿನ್‌ಗಳಲ್ಲಿ ‘ವಾಗ್ಶೀರ್’ ಕೊನೆಯದ್ದಾಗಿದೆ. ಇದು ಗುಪ್ತಚರ ಮಾಹಿತಿ ಸಂಗ್ರಹಣೆ ಮತ್ತು ಶತ್ರು ಹಡಗುಗಳ ವಿರುದ್ಧ ದಾಳಿ ಮಾಡುವ ಅತ್ಯಾಧುನಿಕ ಸಾಮರ್ಥ್ಯ ಹೊಂದಿದೆ.
ಸಬ್‌ಮರಿನ್‌ನ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅನುಭವ ಹಂಚಿಕೊಂಡ ರಾಷ್ಟ್ರಪತಿಯವರು, “ಐಎನ್ಎಸ್ ವಾಗ್ಶೀರ್‌ನಲ್ಲಿ ನಮ್ಮ ವೀರ ನೌಕಾಸೇನೆ ಮತ್ತು ಅಧಿಕಾರಿಗಳೊಂದಿಗೆ ಸಮಯ ಕಳೆದದ್ದು ಅವಿಸ್ಮರಣೀಯ ಅನುಭವ. ‘ವೀರತಾ ವರ್ಚಸ್ವ ವಿಜಯ’ ಎಂಬ ಅದರ ಧ್ಯೇಯವಾಕ್ಯಕ್ಕೆ ತಕ್ಕಂತೆ ನಮ್ಮ ಸಬ್‌ಮರಿನ್‌ಗಳು ಮತ್ತು ನೌಕಾಪಡೆಯು ಯಾವುದೇ ಸವಾಲನ್ನು ಎದುರಿಸಲು ಸನ್ನದ್ಧವಾಗಿದೆ ಎಂಬ ಭರವಸೆ ನನಗಿದೆ,” ಎಂದು ಬರೆದಿದ್ದಾರೆ.
ಇದರ ಮಹತ್ವವೇನು?
ನೌಕಾಪಡೆಯ ಈ ‘ನಿಶ್ಯಬ್ದ ಶಕ್ತಿ’ (Silent Arm) ಅತ್ಯಂತ ಅಪಾಯಕಾರಿ ಮತ್ತು ಏಕಾಂತದ ಪರಿಸರದಲ್ಲಿ ಕೆಲಸ ಮಾಡುತ್ತದೆ. ರಾಷ್ಟ್ರಪತಿಯವರ ಈ ಭೇಟಿಯು ಸಬ್‌ಮರಿನ್ ವಿಭಾಗದ ಅಧಿಕಾರಿಗಳು ಮತ್ತು ನಾವಿಕರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಅಲ್ಲದೆ, ಸಮುದ್ರ ಮಾರ್ಗದ ರಕ್ಷಣೆಯಲ್ಲಿ ಭಾರತದ ಸ್ವದೇಶಿ ತಂತ್ರಜ್ಞಾನದ ಮೇಲಿರುವ ನಂಬಿಕೆಯನ್ನು ಇದು ಪುನರುಚ್ಚರಿಸಿದೆ.
ಈ ಸಂದರ್ಭದಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರು ರಾಷ್ಟ್ರಪತಿಗಳಿಗೆ ಸಾಥ್ ನೀಡಿದರು.


ನಿಮ್ಮ ಕಾಮೆಂಟ್ ಬರೆಯಿರಿ