
ಚೆನ್ನೈ: ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ ಅವರ ತಂದೆ ಎಸ್.ಎ. ಚಂದ್ರಶೇಖರ ಮುಂಬರುವ ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ತಮ್ಮ ಮಗನ ಪಕ್ಷ ಟಿವಿಕೆ ಜೊತೆ ಚುನಾವಣಾ ಮೈತ್ರಿ ಮಾಡಿಕೊಳ್ಳುವಂತೆ ಕಾಂಗ್ರೆಸ್ ಪಕ್ಷಕ್ಕೆ ಕರೆ ನೀಡಿದ್ದಾರೆ. ಇಂತಹ ಸಹಭಾಗಿತ್ವದಿಂದ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಹಿಂದಿನ ಶಕ್ತಿಯನ್ನು ಮರಳಿ ಪಡೆಯಲು ಸಹಕಾರಿಯಾಗಬಹುದು ಎಂದು ಅವರು ಹೇಳಿದ್ದಾರೆ.
ತಿರುವಾರೂರು ಜಿಲ್ಲೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಈ ಸಲಹೆ ನೀಡಿದ್ದಾರೆ.
ಅವರ ಪ್ರಕಾರ ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವ ಆಲೋಚನೆಗೆ ಟಿವಿಕೆ ಮುಖ್ತವಾಗಿದೆ. ಯಾವುದೇ ಔಪಚಾರಿಕ ಘೋಷಣೆ ಮಾಡದಿದ್ದರೂ ಬೆಂಬಲವನ್ನು ವಿಸ್ತರಿಸುವ ಬಗ್ಗೆ ಚರ್ಚೆಗಳನ್ನು ಪರಿಗಣಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

“ಕಾಂಗ್ರೆಸ್ಗೆ ಇತಿಹಾಸ ಮತ್ತು ಪರಂಪರೆ ಇದೆ… ವಿಜಯ ಅವರಿಗೆ ಬೆಂಬಲ ನೀಡಲು ಮತ್ತು ಹಳೆಯ ವೈಭವಕ್ಕೆ ಮರಳಲು ಕಾಂಗ್ರೆಸ್ಸಿಗೆ ಅವಕಾಶವಿದೆ. ಈ ಅವಕಾಶವನ್ನು ಬಳಸಿಕೊಳ್ಳುವುದು ಕಾಂಗ್ರೆಸ್ಗೆ ಬಿಟ್ಟದ್ದು” ಎಂದು ಅವರು ಹೇಳಿದರು.
ತಮ್ಮ ಮಗನಿಗೆ ಸ್ವತಂತ್ರವಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹಲವಾರು ಮಂದಿ ಪ್ರೋತ್ಸಾಹಿಸಿದ್ದಾರೆ ಎಂದ ಅವರು, ಯಾವುದೇ ರಾಜಕೀಯ ನಂಟು ಇಲ್ಲದಿದ್ದರೂ ತಮ್ಮ ಮಗನಿಗೆ ಗೆಲುವು ಸಿಗಲಿದೆ ಎಂದು ಪ್ರತಿಪಾದಿಸಿದರು. ಅವರ ಪ್ರಕಾರ, ಚುನಾವಣಾ ರಾಜಕೀಯದಲ್ಲಿ ವಿಜಯ ಅವರ ಅವಕಾಶಗಳು ಅತ್ಯಂತ ಆಶಾದಾಯಕವಾಗಿವೆ.
ಆಫರ್ ತಿರಸ್ಕರಿಸಿದ ತಮಿಳುನಾಡು ಕಾಂಗ್ರೆಸ್ ಮುಖ್ಯಸ್ಥ
ಇದಕ್ಕೆ ಪ್ರತಿಕ್ರಿಯಿಸಿದ ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ ಸೆಲ್ವಪೆರುಂತಗೈ ಅವರು ಚಂದ್ರಶೇಖರ ಅವರ ಪ್ರಸ್ತಾಪವನ್ನು ತಳ್ಳಿಹಾಕಿದ್ದಾರೆ. ರಾಹುಲ್ ಗಾಂಧಿ ಅವರು ಈಗಾಗಲೇ ಅಗತ್ಯವಿರುವ ಎಲ್ಲಾ ವೇಗವನ್ನು ಒದಗಿಸುತ್ತಿರುವುದರಿಂದ ಪಕ್ಷಕ್ಕೆ ಯಾವುದೇ ಬಾಹ್ಯ ಬಲವರ್ಧನೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
“ನಮ್ಮ ಕಾರ್ಯಕರ್ತರನ್ನು ನೋಡಿ, ಅವರು ಈಗಾಗಲೇ ಉತ್ತೇಜನವನ್ನು ಹೊಂದಿದ್ದಾರೆಂದು ನೀವು ಗಮನಿಸಬಹುದು. ನಮ್ಮ ನಾಯಕ ರಾಹುಲ್ ಗಾಂಧಿ ನಮಗೆ ಅಗತ್ಯವಿರುವ ಬೂಸ್ಟ್, ಹಾರ್ಲಿಕ್ಸ್ ಮತ್ತು ಬೋರ್ನ್ವಿಟಾವನ್ನು ನೀಡುತ್ತಿದ್ದಾರೆ. ಅದೇನೇ ಇದ್ದರೂ, ಅವರು ನೀಡಿದ ಆಫರ್ಗೆ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ” ಎಂದು ಅವರು ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ