ನವದೆಹಲಿ: ದೆಹಲಿಯ ಮಾಳವೀಯ ನಗರ ಪ್ರದೇಶದ ರೆಸ್ಟೋರೆಂಟಿನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 21 ಜನರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದಕ್ಷಿಣ ದೆಹಲಿಯ ಹೌಜ್ ರಾಣಿ ಪ್ರದೇಶದಲ್ಲಿರುವ ಬಹುಮಹಡಿಯ ರೆಸ್ಟೋರೆಂಟ್’ನಲ್ಲಿ ಈ ದುರಂತ ಸಂಭವಿಸಿದೆ. ಮೃತರ ಪೈಕಿ ಹಲವರು ವಿದೇಶಿಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಗ್ನಿ ದುರಂತವು ನೆಹರು ಪ್ಲೇಸ್ ಅಗ್ನಿಶಾಮಕ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಬೆಳಗ್ಗೆ ಸುಮಾರು 8:50ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಬೆಳಗ್ಗೆ 9:45ಕ್ಕೆ ದೆಹಲಿ ಅಗ್ನಿಶಾಮಕ ಸೇವೆಗೆ (DFS) ಕರೆ ಬಂದಿದೆ. ತಕ್ಷಣವೇ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.
ಬೆಂಕಿಯನ್ನು ನಿಯಂತ್ರಿಸಲು ಒಟ್ಟು 10 ಅಗ್ನಿಶಾಮಕ ವಾಹನಗಳನ್ನು ಬಳಸಲಾಯಿತು. ಅಗ್ನಿಶಾಮಕ ಸಿಬ್ಬಂದಿ ರೆಸ್ಟೋರೆಂಟ್‌ನ ಬೇಸ್‌ಮೆಂಟ್‌ನಿಂದ (ನೆಲಮನೆ) 37 ಜನರನ್ನು ರಕ್ಷಿಸಿ, ಆಂಬ್ಯುಲೆನ್ಸ್‌ಗಳ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ದೆಹಲಿ ಪೊಲೀಸರ ಮಾಹಿತಿ ಪ್ರಕಾರ, ಆರಂಭದಲ್ಲಿ 11 ಗಾಯಾಳುಗಳನ್ನು ಕಟ್ಟಡದಿಂದ ಹೊರತೆಗೆದು ಚಿಕಿತ್ಸೆಗೆ ರವಾನಿಸಲಾಗಿದೆ.
ಬೆಂಕಿಯನ್ನು ಸದ್ಯ ಹತೋಟಿಗೆ ತರಲಾಗಿದ್ದರೂ, ಕಟ್ಟಡದಲ್ಲಿ ಯಾರಾದರೂ ಸಿಲುಕಿಕೊಂಡಿದ್ದಾರೆಯೇ ಎಂದು ಪರಿಶೀಲಿಸಲು ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಅಧಿಕಾರಿಗಳು ಇನ್ನೂ ಅಧಿಕೃತ ಕಾರಣವನ್ನು ಬಿಡುಗಡೆ ಮಾಡದಿದ್ದರೂ, ಪ್ರಾಥಮಿಕ ಮಾಹಿತಿಯ ಪ್ರಕಾರ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ತಿಳಿದುಬಂದಿದೆ. ತನಿಖಾಧಿಕಾರಿಗಳು ವಿದ್ಯುತ್ ವ್ಯವಸ್ಥೆಗಳು ಮತ್ತು ಬೆಂಕಿಗೆ ಕಾರಣವಾಗಬಹುದಾದ ಇತರ ಸಂಭಾವ್ಯ ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳ ತಪಾಸಣೆ ನಡೆಸುತ್ತಿದ್ದಾರೆ. ಗಾಯಾಳುಗಳ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರ ವರದಿ ಬಂದ ನಂತರವಷ್ಟೇ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೌಜ್ ರಾಣಿಯ ಕಿರಿದಾದ ಲೇನ್‌ಗಳಲ್ಲಿರುವ ಈ ಹೋಟೆಲ್ ಸುಮಾರು 25 ಕೊಠಡಿಗಳನ್ನು ಒಳಗೊಂಡಿದೆ. ವೈದ್ಯಕೀಯ ಚಿಕಿತ್ಸೆಗಾಗಿ ದೇಶಕ್ಕೆ ಪ್ರಯಾಣಿಸಿದ್ದ ವಿದೇಶಿ ಪ್ರಜೆಗಳು ಸೇರಿದಂತೆ ಸುಮಾರು 40 ಅತಿಥಿಗಳಿಗೆ ಇದು ವಸತಿ ಕಲ್ಪಿಸಿತ್ತು ಎಂದು ವರದಿಯಾಗಿದೆ. ಬೆಂಕಿ ಅವಘಡ ಸಂಭವಿಸಿದಾಗ ಹೋಟೆಲ್‌ನಲ್ಲಿದ್ದ ಹೆಚ್ಚಿನ ಅತಿಥಿಗಳು ನಿದ್ರಿಸುತ್ತಿದ್ದರು ಎಂದು ವರದಿಯಾಗಿದೆ.
ಪ್ರಧಾನಿ ಕಾರ್ಯಾಲಯದಿಂದ ಪರಿಹಾರ ಘೋಷಣೆ
ದುರಂತದ ಬೆನ್ನಲ್ಲೇ ಪ್ರಧಾನಮಂತ್ರಿ ಕಾರ್ಯಾಲಯವು (PMO) ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದೆ. “ದೆಹಲಿಯ ಮಾಳವೀಯ ನಗರದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಜೀವಹಾನಿಯಾಗಿರುವುದು ಅತ್ಯಂತ ಕರಳು ಕಲಕುವಂತದ್ದಾಗಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಸಂತ್ರಸ್ತರಿಗೆ ಅಧಿಕಾರಿಗಳು ಸಾಧ್ಯವಿರುವ ಎಲ್ಲಾ ನೆರವು ನೀಡುತ್ತಿದ್ದಾರೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50,000 ರೂ.ಗಳ ಎಕ್ಸ್-ಗ್ರೇಷಿಯಾ (ಪರಿಹಾರ) ನೀಡಲಾಗುವುದು,” ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಮುಖ್ಯಮಂತ್ರಿ ರೇಖಾ ಗುಪ್ತಾ ಕಂಬನಿ
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “”ದೆಹಲಿ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ನೆರವು ಮತ್ತು ಬೆಂಬಲವನ್ನು ವಿಸ್ತರಿಸಲಾಗುತ್ತಿದೆ. ಈ ದುಃಖದ ಅವಧಿಯಲ್ಲಿ ದೆಹಲಿ ಸರ್ಕಾರವು ಬಾಧಿತ ಕುಟುಂಬಗಳೊಂದಿಗೆ ದೃಢವಾಗಿ ನಿಲ್ಲುತ್ತದೆ. ಸಂತ್ರಸ್ತರಿಗೆ ಪ್ರತಿಯೊಂದು ಸಂಭವನೀಯ ಬೆಂಬಲವನ್ನು ನೀಡಲು ನಾವು ಬದ್ಧರಾಗಿದ್ದೇವೆ,” ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ