ಸುಳ್ಳು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ 10 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದ ಇಬ್ಬರು ಮಹಿಳೆಯರ ಬಂಧನ

ಮುಂಬೈ: ಉದ್ದೇಶಪೂರ್ವಕವಾಗಿ ಲೈಂಗಿಕ ಕಿರುಕುಳದ ಸುಳ್ಳು ಪ್ರಕರಣ ದಾಖಲಿಸಿ, ಉದ್ಯಮಿಯೊಬ್ಬರಿಂದ 10 ಕೋಟಿ ರೂಪಾಯಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ ಇಬ್ಬರು ಮಹಿಳೆಯರನ್ನು ಮುಂಬೈ ಪೊಲೀಸರ ಸುಲಿಗೆ ವಿರೋಧಿ ದಳ (AEC) ಬಂಧಿಸಿದೆ ಎಂದು ವರದಿಯಾಗಿದೆ.
ಎನ್‌ಡಿಟಿವಿ ವರದಿ ಪ್ರಕಾರ, ಬಂಧಿತರನ್ನು ಹೇಮಲತಾ ಪಾಟ್ಕರ (39) ಮತ್ತು ಅಮ್ರೀನಾ ಇಕ್ಬಾಲ್ ಜವೇರಿ (33) ಎಂದು ಗುರುತಿಸಲಾಗಿದೆ. ಉದ್ಯಮಿಯೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಲಂಚದ ಹಣವನ್ನು ಪಡೆಯುವಾಗ ಈ ಇಬ್ಬರು ಮಹಿಳೆಯರನ್ನು ರೆಡ್-ಹ್ಯಾಂಡ್‌ ಆಗಿ ಹಿಡಿದಿದ್ದಾರೆ.
ಗೋರೆಗಾಂವ್ ಪಶ್ಚಿಮದ ನಿವಾಸಿ ಮತ್ತು ಬಿಲ್ಡರ್‌ ಒಬ್ಬರು ಈ ಪ್ರಕರಣದ ದೂರುದಾರರು.

ನವೆಂಬರ್ 14ರಂದು ಅಂಬೋಲಿ ಪ್ರದೇಶದ ಹೋಟೆಲ್‌ನಲ್ಲಿ ಅವರ ಪುತ್ರನ ನಿಶ್ಚಿತಾರ್ಥದ ಪಾರ್ಟಿ ಆಯೋಜಿಸಲಾಗಿತ್ತು. ನವೆಂಬರ್ 15ರ ಮುಂಜಾನೆ ಸುಮಾರು 2:40ಕ್ಕೆ ಉದ್ಯಮಿಯ ಪುತ್ರ ಹಾಗೂ ಅವರ ಭಾವಿ ಪತ್ನಿ ಲಿಫ್ಟ್‌ನಲ್ಲಿ ಕೆಳಗೆ ಬರುತ್ತಿದ್ದಾಗ ಅಪರಿಚಿತ ಮಹಿಳೆಯೊಬ್ಬರು ಒಳಬಂದಿದ್ದರು. ಆ ವೇಳೆ ಉದ್ಯಮಿಯ ಪುತ್ರ ಲೇಸರ್ ಲೈಟ್ ತಮ್ಮ ಮೇಲೆ ಬಿಟ್ಟಿದ್ದಾರೆ ಎಂದು ಆರೋಪಿಸಿ ಆ ಮಹಿಳೆ ಜಗಳ ತೆಗೆದಿದ್ದರು. ಈ ಗಲಾಟೆ ತಾರಕಕ್ಕೇರಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಉದ್ಯಮಿಯ ಪುತ್ರನ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿತ್ತು.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

10 ಕೋಟಿ ರೂಪಾಯಿ ಸೆಟಲ್‌ಮೆಂಟ್ ಡಿಮ್ಯಾಂಡ್
ಪ್ರಕರಣ ದಾಖಲಾದ ನಂತರ, ಪ್ರಕರಣವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಲು ಆರೋಪಿ ಮಹಿಳೆಯರು 10 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದರು. “ಹಣ ನೀಡದಿದ್ದರೆ ನಿಮ್ಮ ಮಗ ಜೈಲಿನಲ್ಲೇ ಕಳೆಯಬೇಕಾಗುತ್ತದೆ ಮತ್ತು ಕುಟುಂಬದ ಮಾನ ಹರಾಜಾಗುತ್ತದೆ” ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಮಾತುಕತೆಯ ನಂತರ ಈ ಮೊತ್ತವನ್ನು 5.5 ಕೋಟಿ ರೂಪಾಯಿಗೆ ಇಳಿಸಲಾಗಿತ್ತು.

ಪೊಲೀಸ್ ಕಾರ್ಯಾಚರಣೆ
ಮಹಿಳೆಯರ ಸಂಚನ್ನು ಅರಿತ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ಸೂಚನೆಯಂತೆ ಲೋಯರ್ ಪರೇಲ್ ಪ್ರದೇಶದಲ್ಲಿ 1.5 ಕೋಟಿ ರೂಪಾಯಿ ಮುಂಗಡ ಹಣ (ಇದರಲ್ಲಿ ನಕಲಿ ನೋಟುಗಳೂ ಸೇರಿದ್ದವು) ನೀಡಲು ಮಹಿಳೆಯರನ್ನು ಕರೆಯಿಸಲಾಗಿತ್ತು. ಹಣ ಪಡೆಯುತ್ತಿದ್ದಂತೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ರೆಡ್‌ಹ್ಯಾಂಡ್‌ ಆಗಿ ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಮೂರನೇ ಆರೋಪಿಯ ಕೈವಾಡವಿದ್ದು, ಸದ್ಯ ಆತ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement