ಸಿಕಾರ್ : ತಿಂಗಳಿಗೆ ಕೇವಲ 10 ಸಾವಿರ ರೂಪಾಯಿ ಸಂಬಳ ಪಡೆಯುವ 22 ವರ್ಷದ ಮೆಡಿಕಲ್ ಸ್ಟೋರ್ ಉದ್ಯೋಗಿಯೊಬ್ಬನ ಬ್ಯಾಂಕ್ ಖಾತೆಯಲ್ಲಿ ದಿಢೀರ್ 10 ಸಾವಿರ ಕೋಟಿ ರೂಪಾಯಿ ಜಮೆಯಾಗಿರುವುದು ಆತನನ್ನು ಅಚ್ಚರಿಗೀಡು ಮಾಡಿದೆ. ಆದರೆ, ಈ ಹಣವನ್ನು ನೋಡಿ ಖುಷಿಪಡುವ ಮೊದಲೇ ಹಣ ವಿತ್ಡ್ರಾ ಮಾಡದಂತೆ ಬ್ಯಾಂಕ್ ಖಾತೆಗೆ ನಿರ್ಬಂಧ ವಿಧಿಸಲಾಗಿದೆ. ಅಚ್ಚರಿಯ ಸಂಗತಿಯೆಂದರೆ, ಆತನ ಖಾತೆಯಲ್ಲಿದ್ದ ಸ್ವಂತ ಹಣವಾದ 55 ಸಾವಿರ ರೂಪಾಯಿಯನ್ನೂ ಹಿಂಪಡೆಯಲು ಸಾಧ್ಯವಾಗದೆ ಪರದಾಡುವಂತಾಗಿದೆ.
ರಾಜಸ್ಥಾನದ ಸಿಕಾರ್ನ ಸಲಾಸರ್ ಬಸ್ ನಿಲ್ದಾಣದ ಸಮೀಪವಿರುವ ನಿರ್ಮಲ್ ಮೆಡಿಕಲ್ ಪಾಯಿಂಟ್ನಲ್ಲಿ ಕೆಲಸ ಮಾಡುತ್ತಿರುವ ಸಮೀರ್ ಖಾನ್ ಎಂಬಾತನಿಗೆ ಬುಧವಾರ ಈ ವಿಚಿತ್ರ ಅನುಭವವಾಗಿದೆ. ತನ್ನ ಪ್ರಿಪೇಯ್ಡ್ ಮೊಬೈಲ್ ಸಂಖ್ಯೆಗೆ ರೀಚಾರ್ಜ್ ಮಾಡಿಸುವ ಉದ್ದೇಶದಿಂದ ಬ್ಯಾಂಕ್ ಖಾತೆಯಲ್ಲಿನ ಬ್ಯಾಲೆನ್ಸ್ ಪರಿಶೀಲಿಸಲು ಮೊಬೈಲ್ ಬ್ಯಾಂಕಿಂಗ್ ಆ್ಯಪ್ ತೆರೆದಿದ್ದಾನೆ. ಪಿನ್ ನಮೂದಿಸಿ ಖಾತೆಯ ವಿವರಗಳನ್ನು ಪರಿಶೀಲಿಸಿದಾಗ ಖಾತೆಯ ಬ್ಯಾಲೆನ್ಸ್ ಶೂನ್ಯವಾಗಿರುವುದು ಕಂಡುಬಂದಿದೆ.
ಇದರಿಂದ ಗೊಂದಲಕ್ಕೊಳಗಾದ ಸಮೀರ್ ಹೆಚ್ಚಿನ ವಿವರಗಳನ್ನು ಪರಿಶೀಲಿಸಿದಾಗ, ಆತನ ಬ್ಯಾಂಕ್ ಖಾತೆಗೆ 10 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣಕ್ಕೆ ಲಿಯನ್ (ತಾತ್ಕಾಲಿಕ ನಿರ್ಬಂಧ) ವಿಧಿಸಿರುವುದು ಗೊತ್ತಾಗಿದೆ. ಅಂದರೆ, ಖಾತೆಯಲ್ಲಿ ಭಾರೀ ಮೊತ್ತದ ಹಣ ಜಮೆಯಾಗಿರುವಂತೆ ದಾಖಲಾಗಿದ್ದರೂ, ಆ ಹಣ ತೆಗೆಯದಂತೆ ನಿರ್ಬಂಧ ಹೇರಲಾಗಿತ್ತು. ಇದರಿಂದಾಗಿ ಖಾತೆಯಲ್ಲಿದ್ದ ತನ್ನ ಸ್ವಂತ ಹಣವನ್ನೂ ಬಳಸಲಾಗದ ಸ್ಥಿತಿ ಉಂಟಾಗಿತ್ತು.
ಕೂಡಲೇ ಸಮೀರ್ ತನ್ನ ಮಾಲೀಕ ಧೀರಜ್ ಶರ್ಮಾ ಅವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಇಬ್ಬರೂ ಸಿಕರ್ನ ಸೈಬರ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದಾರೆ. ಆದರೆ, ಈ ಸಮಸ್ಯೆಗೆ ಸಂಬಂಧಿಸಿದಂತೆ ನೇರವಾಗಿ ಬ್ಯಾಂಕ್ ಅನ್ನು ಸಂಪರ್ಕಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.
ಅದರಂತೆ ಸಮೀರ್ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ವಿವರಿಸಿದ್ದಾರೆ. ಈ ವೇಳೆ ಬ್ಯಾಂಕ್ ಖಾತೆಯಲ್ಲಿ ತಾಂತ್ರಿಕ ದೋಷ ಉಂಟಾಗಿರುವುದರಿಂದ ಇಂತಹ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಬ್ಯಾಂಕ್ ತಾಂತ್ರಿಕ ದೋಷವನ್ನು ಸರಿಪಡಿಸಿದ್ದು, ಸಮೀರ್ ಖಾತೆಯಲ್ಲಿದ್ದ ಸರಿಯಾದ ಬ್ಯಾಲೆನ್ಸ್ ಮರುಸ್ಥಾಪನೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಮೀರ್ ಖಾನ್, “ನನ್ನ ಬ್ಯಾಂಕ್ ಖಾತೆಯಲ್ಲಿ ಈ ಹಿಂದೆ ಸುಮಾರು 55 ಸಾವಿರ ರೂಪಾಯಿ ಇತ್ತು. ಆದರೆ, ಖಾತೆಗೆ 10 ಸಾವಿರ ಕೋಟಿ ರೂಪಾಯಿಯ ಲಿಯನ್ ವಿಧಿಸಿರುವುದು ಕಂಡುಬಂತು. ನನ್ನ ಸ್ವಂತ ಹಣವನ್ನೂ ಬಳಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪೊಲೀಸರನ್ನು ಸಂಪರ್ಕಿಸಿ, ಬಳಿಕ ಬ್ಯಾಂಕ್ನವರೊಂದಿಗೂ ಮಾತನಾಡಿದೆ. ಕೊನೆಗೆ ಸಮಸ್ಯೆ ಬಗೆಹರಿಯಿತು” ಎಂದು ತಿಳಿಸಿದ್ದಾರೆ.
ಸಮೀರ್ ಕೆಲಸ ಮಾಡುತ್ತಿರುವ ಮೆಡಿಕಲ್ ಸ್ಟೋರ್ನ ಮಾಲೀಕ ಧೀರಜ್ ಶರ್ಮಾ ಕೂಡ ಈ ಘಟನೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಸಮೀರ್ ಜನವರಿಯಿಂದ ನನ್ನ ಬಳಿ ಕೆಲಸ ಮಾಡುತ್ತಿದ್ದಾನೆ. ಆತನಿಗೆ ತಿಂಗಳಿಗೆ 10 ಸಾವಿರ ರೂಪಾಯಿ ಸಂಬಳ ನೀಡಲಾಗುತ್ತದೆ. ಖಾತೆಗೆ 10 ಸಾವಿರ ಕೋಟಿ ರೂಪಾಯಿಯ ಲಿಯನ್ ವಿಧಿಸಿರುವುದಾಗಿ ಆತ ತಿಳಿಸಿದಾಗ ನನಗೆ ಆಘಾತವಾಯಿತು. ಇಂತಹ ಘಟನೆಯನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ