ಸ್ಯಾಂಟ್ರೋ ರವಿ ವಿರುದ್ಧ ಸಮಗ್ರ ತನಿಖೆಗೆ ಸಿಎಂ ಬೊಮ್ಮಾಯಿ ಸೂಚನೆ

ಮೈಸೂರು: ಸ್ಯಾಂಟ್ರೊ ರವಿ ವಿರುದ್ಧ ಇರುವ ಎಲ್ಲಾ ಪ್ರಕರಣಗಳನ್ನೂ ಸಮಗ್ರವಾಗಿ ತನಿಖೆ ಕೈಗೊಳ್ಳುವಂತೆ ಮೈಸೂರು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತನ ವಿರುದ್ಧ ಬೇರೆ ಬೇರೆ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಪುರಾವೆಗಳನ್ನು ಸಂಗ್ರಹಿಸುವಂತೆ ಹಾಗೂ ನಿಖರವಾಗಿ ತನಿಖೆ ಮಾಡುವಂತೆ ಮೈಸೂರು ನಗರ ಪೊಲೀಸ್‌ ಆಯುಕ್ತರಿಗೆ ಸೂಚಿಸಿದ್ದೇನೆ. ಅವರು ವಿಚಾರಣೆ ನಡೆಸಿ, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಸ್ಯಾಂಟ್ರೋ ರವಿಯ 20 ವರ್ಷಗಳ ದಂಧೆಯನ್ನು ತನಿಖೆಗೆ ಒಳಪಡಿಸಲಾಗುವುದು. ಆತ ಈ 20 ವರ್ಷದಲ್ಲಿ ಯಾರ ಯಾರ ಜೊತೆ ಸಂಪರ್ಕದಲ್ಲಿದ್ದ, ಆತನ ವ್ಯವಹಾರಗಳು ಸಹ ತನಿಖೆ ಮೂಲಕ ಬಯಲಾಗಲಿದೆ ಎಂದು ಹೇಳಿದರು.
ಮಹಿಳೆಯೊಬ್ಬರ ದೂರು ಆಧರಿಸಿ ಆತನ ವಿರುದ್ಧ ತನಿಖೆ ಆರಂಭವಾಗಿದೆ. ಹಿಂದಿನ ಪ್ರಕರಣಗಳು ಸಹ ತನಿಖೆಯಾಗಲಿದೆ. ಆತನ ಸಂಪರ್ಕ ಸಹ ತನಿಖೆಗೆ ಒಳಪಡಲಿದೆ. ಯಾರನ್ನೂ ಬಚಾವ್‌ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಸ್ಯಾಂಟ್ರೋ ರವಿ ಜೊತೆ ಮಾತನಾಡಿರುವ ತಮ್ಮ ಮಗನ ಆಡಿಯೋ ಬಿಡುಗಡೆ ಬಗ್ಗೆಯೂ ತನಿಖೆ ಮಾಡಲಾಗುತ್ತದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೋ, ವೀಡಿಯೊ ಸೇರಿದಂತೆ ಎಲ್ಲವನ್ನೂ ತನಿಖೆಗೆ ಒಳಪಡಿಸಲಾಗುವುದು. ಬಳಿಕ ಇದರ ಸತ್ಯಾಸತ್ಯತೆ ಹೊರಬರಲಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಇಂದು ಸಿಎಂ ಆಗಿ ಡಿಕೆ ಶಿವಕುಮಾರ ಪ್ರಮಾಣ ವಚನ: ಪರಮೇಶ್ವರ ಡಿಸಿಎಂ ; 13 ಶಾಸಕರಿಗೆ ಸಚಿವ ಸ್ಥಾನ ; ಪಟ್ಟಿ ಇಲ್ಲಿದೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement