ಸೋತು ಗೆದ್ದ ಯಡಿಯೂರಪ್ಪ..:ಕಿಂಗ್‌ ಸ್ಥಾನದಿಂದ ಕೆಳಗಿಳಿದು ಕಿಂಗ್‌ ಮೇಕರ್‌ ಆದ ಬಿಎಸ್‌ ವೈ..!

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನಂತರ ಕರ್ನಾಟಕದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನವುದು ಯಕ್ಷ ಪ್ರಶ್ನೆ ಆಗಿತ್ತು‌. ಬಸವರಾಜ ಬೊಮ್ಮಾಯಿ ಆಯ್ಕೆ ಆಗುವ ಮೂಲಕ ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಆಯ್ಕೆ ಮೂಲಕ ಸೋಮವಾರದ ವರೆಗೆ ಕಿಂಗ್‌ ಆಗಿದ್ದ ಯಡಿಯೂರಪ್ಪ ಈಗ ಕಿಂಗ್ ಮೇಕರ್ ಆದರು.
ಬಸವರಾಜು ಬೊಮ್ಮಾಯಿ ಮುಖ್ಯಮಂತ್ರಿಯಾಗಲು ಮುಖ್ಯ ಕಾರಣ ಯಡಿಯೂರಪ್ಪ ಎಂಬುದು ಬೇರೆ ಹೇಳಬೇಕಾಗಿಲ್ಲ. ಯಡಿಯೂರಪ್ಪ ರಾಜೀನಾಮೆ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ನಾಲ್ಕೈದು ಹೆಸರು ಕೇಳಿ ಬಂದಿದ್ದರೂ ಅಂತಿಮವಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾದರು. ಆ ಮೂಲಕ ಕೇಂದ್ರದ ದೆಹಲಿಯ ಬಿಜೆಪಿ ಹೈಕಮಾಂಡ್‌ ಯಡಿಯೂರಪ್ಪ ಅಭಿಪ್ರಾಯಕ್ಕೆ ಮಣೆ ಹಾಕಿದ್ದಾರೆ.
ಯಡಿಯೂರಪ್ಪ ವಿರುದ್ಧವಾಗಿ ಕರ್ನಾಟಕದಲ್ಲಿ ನಿರ್ಣಯ ತೆಗೆದುಕೊಂಡು ಅದರಿಂದ ಪಕ್ಷಕ್ಕೆ ಹಾನಿಯಾದರೆ ಎಂದು ದೆಹಲಿ ನಾಯಕರು ಯಡಿಯೂರಪ್ಪ ಅವರ ಅಭಿಪ್ರಾಯಕ್ಕೆ ಓಕೆ ಅಂದರು.
ವಿಧಾನಸೌಧದಲ್ಲಿ ರಾಜೀನಾಮೆ ವಿಷಯ ಪ್ರಕಟಿಸುವ ವೇಳೆ ಯಡಿಯುರಪ್ಪ ಕಣ್ಣೀರು ಹಾಕಿದ್ದು, ರಾಜ್ಯದಲ್ಲಿ ಯಡಿಯೂರಪ್ಪ ಪರವಾಗಿ ಅನುಕಂಪ ಸೃಷ್ಟಿಗೆ ಕಾರಣವಾಗಿತ್ತು. ಅವರ ಪಕ್ಷದ ಸಾವಿರಾರು ಕಾರ್ಯಕರ್ತರಲ್ಲಿ, ಲಿಂಗಾಯತ ಸಮುದಾಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಗುರಿಯಾಗಿತ್ತು. ಇದರಿಂದ ಬಹುಬೇಗ ಎಚ್ಚೆತ್ತುಕೊಂಡ ಬಿಜೆಪಿ ಹೈ ಕಮಾಂಡ್ ಯಡಿಯೂರಪ್ಪ ಆಪ್ತನಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಡಿಯೂರಪ್ಪ ಮೂಲಕವೇ ಬೊಮ್ಮಯಿ ಹೆಸರು ಘೋಷಣೆ ಮಾಡಿಸಿತು.
ಹೀಗಾಗಿ ಯಡಿಯೂರಪ್ಪ ಸೋತು ಗೆದ್ದಿದ್ದಾರೆ ಎಂದೇ ಹೇಳಬಹುದು. ಯಡಿಯೂರಪ್ಪ ತನ್ನ ಆಪ್ತನಿಗೆ ಮುಖ್ಯಮಂತ್ರಿ ಪಟ್ಟ ಕೊಡಿಸಿ ಕಿಂಗ್‌ ಮೇಕರ್‌ ತಾನೇ ಎಂದು ಹೇಳಿದಂತಾಗಿದೆ.
ಸೋಮವಾರ ಯಡಿಯೂರಪ್ಪ ತಾನು ರಾಜ್ಯಪಾಲ ಹುದ್ದೆಯ ಪ್ರಸ್ತಾಪ ಬಂದರೂ ಆಗುವುದಿಲ್ಲ, ಸಕ್ರಿಯ ರಾಜಕಾರಣದಲ್ಲಿಯೇ ಮುಂದುವರಿಯುತ್ತೇನೆ ಎಂದು ಹೇಳಿದಾಗಲೇ ಹೈಕಮಾಂಡ್‌ ಎಚ್ಚೆತ್ತುಕೊಂಡಿತ್ತು. ಆ ಮಾತು ಬಿಜೆಪಿ ಹೈಕಮಾಂಡಿಗೆ ಯಡಿಯೂರಪ್ಪ ನೀಡಿದ ಸಂದೇಶವೇ ಆಗಿತ್ತು,
ಚುನಾವಣೆ ಒಂದೂವರೆ ವರ್ಷವಿದ್ದಾಗ ಹಾಗೂ ಯಡಿಯುರಪ್ಪ ನಿರ್ಗಮನದ ಸೂಚನೆ ಸಿಗುತ್ತಿದ್ದಂತೆ ನೂರಾರು ಸ್ವಾಮೀಜಿಗಳು ಯಡಿಯೂರಪ್ಪ ಪರವಾಗಿ ಬಹಿರಂಗವಾಗಿ ನಿಂತರು. ಇದರ ಹಿಂದೆ ಯಡಿಯೂರಪ್ಪ ಅವರ ತೆರೆಯ ಹಿಂದಿನ ಆಟವೂ ಇತ್ತು ಎಂಬುದು ರಾಜಕೀಯ ಬಲ್ಲವರಿಗೆ ಗೊತ್ತು. ಆದರೆ ಯಡಿಯೂರಪ್ಪ ಎಲ್ಲಿಯೂ ಅದನ್ನು ತೋರಿಸಿಕೊಳ್ಳಲಿಲ್ಲ ಹಾಗೂ ಎಲ್ಲಿಯೂ ಹೈಕಮಾಂಡ್‌ ವಿರುದ್ಧ ಒಂದೇ ಒಂದು ಮಾತನ್ನೂ ಆಡಲಿಲ್ಲ. ತನ್ನ ಮಾಗಿದ ರಾಜಕೀಯ ನಡೆಯ ಮೂಲಕವೇ ಹೈಕಮಾಂಡನ್ನೇ ಉಭಯ ಸಂಕಟಕ್ಕೆ ಸಿಲುಕಿಸಿದರು.
ಕರ್ನಾಟಕದಲ್ಲಿ ಏನೇ ಮಾಡಿದರೂ ಅದು ನನ್ನ ಅಣತಿಯಂತೆಯೇ ಆಗಬೇಕು ಎಂಬ ಸಂದೇಶದ ರಾಜಕೀಯದಾಟದ ಮೊದಲನೇ ಹಂತದಲ್ಲಿ ಯಡಿಯೂರಪ್ಪ ಗೆದ್ದಿದ್ದಾರೆ.ಇನ್ನು ಮುಂದೆ ಮಂತ್ರಿಮಂಡಲ ರಚನೆಯಲ್ಲಿ ಯಡಿಯೂರಪ್ಪ ಅವರ ಪಾತ್ರ ಎಷ್ಟಿರುತ್ತದೆ ಎಂಬುದನ್ನು ಮುಂದೆ ನೋಡಬೇಕಾಗಿದೆ.ಹೈಕಮಾಂಡ್‌ ಯಡಿಯೂರಪ್ಪ ಅವರ ಒಂದ ಉಮಾತು ಕೇಳಿ ನೂರು ಕೆಲಸ ಸಾಧಿಸಿತ್ತದೆಯೋ ಅಥವಾ ಯಡಿಯೂರಪ್ಪ ಹೈಕಮಾಂಡ್‌ ಹೇಳಿದಂತೆ ರಾಜೀನಾಮೆ ನೀಡಿ ತನ್ನ ಕೆಲಸ ಸಾಧಿಸಿಕೊಳ್ಳುತ್ತಾರೆಯೋ ಎಂಬುದು ಮುಂದಕ್ಕೆ ಗೊತ್ತಾಗಲಿದೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement