
ನವದೆಹಲಿ: ಬಿಹಾರ ಮತ್ತು ಪಶ್ಚಿಮ ಬಂಗಾಳ ಎರಡರಲ್ಲೂ ಮತದಾರರ ಗುರುತಿನ ಕಾರ್ಡ್ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಚುನಾವಣಾ ಆಯೋಗ (ಇಸಿಐ) ಮಂಗಳವಾರ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ ಕಿಶೋರ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಪಶ್ಚಿಮ ಬಂಗಾಳ ಮತ್ತು ಬಿಹಾರದ ಮತದಾರರ ಪಟ್ಟಿಯಲ್ಲಿ ಪ್ರಶಾಂತ ಕಿಶೋರ ಅವರ ಹೆಸರು ಕಾಣಿಸಿಕೊಂಡಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ತಂತ್ರಜ್ಞ-ರಾಜಕಾರಣಿಯಾಗಿರುವ ಪ್ರಶಾಂತ್ ಕಿಶೋರ ಅವರ ಜನ್ ಸುರಾಜ್ ಪಕ್ಷ ಸ್ಪರ್ಧಿಸಿದೆ. ಜನ್ ಸುರಾಜ್ ಮುಖ್ಯಸ್ಥರಾದ ಪ್ರಶಾಂತ ಕಿಶೋರ ಅವರಿಗೆ ಮೂರು ದಿನಗಳ ಒಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಬ್ಬ ವ್ಯಕ್ತಿಯನ್ನು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳುವುದನ್ನು ನಿಷೇಧಿಸುವ 1950 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 17 ಅನ್ನು ಚುನಾವಣಾ ಆಯೋಗದ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಒಂದೇ ಕ್ಷೇತ್ರದೊಳಗೆ ಬಹು ನಮೂದುಗಳನ್ನು ನಿಷೇಧಿಸುವ ಸೆಕ್ಷನ್ 18 ಅನ್ನು ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ದಾಖಲೆಗಳ ಪ್ರಕಾರ ಕಿಶೋರ್ ಪಶ್ಚಿಮ ಬಂಗಾಳದಲ್ಲಿ ವಿಳಾಸವನ್ನು 121, ಕಾಲಿಘಾಟ್ ರಸ್ತೆ ಎಂದು ನಮೂದಿಸಲಾಗಿದೆ. ಇದು ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭಬಾನಿಪುರ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಪ್ರಧಾನ ಕಚೇರಿಯ ವಿಳಾಸ ಅವರ ಮತಗಟ್ಟೆಯನ್ನು ಬಿ. ರಾಣಿಶಂಕರಿ ಲೇನ್‌ನಲ್ಲಿರುವ ಸೇಂಟ್ ಹೆಲೆನ್ ಶಾಲೆ ಎಂದು ಉಲ್ಲೇಖಿಸಲಾಗಿದೆ. 2021ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಿಶೋರ ಟಿಎಂಸಿಯ ರಾಜಕೀಯ ಸಲಹೆಗಾರರಾಗಿದ್ದರು.
ಪ್ರಶಾಂತ ಕಿಶೋರ ಅವರು ಬಿಹಾರದ ರೋಹ್ತಾಸ್ ಜಿಲ್ಲೆಯ ಸಸಾರಾಮ್ ಸಂಸದೀಯ ಕ್ಷೇತ್ರದ ಕಾರ್ಗಹರ್ ವಿಧಾನಸಭಾ ವಿಭಾಗದಲ್ಲಿ ತಮ್ಮ ಸ್ಥಳೀಯ ಸ್ಥಳವಾದ ಕೊನಾರ್‌ನ ಮಧ್ಯ ವಿದ್ಯಾಲಯದಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ಕಾನೂನಿನಡಿಯಲ್ಲಿ, ನಿವಾಸ ಬದಲಾಯಿಸುವ ವ್ಯಕ್ತಿಯು ಫಾರ್ಮ್ 8 ಮೂಲಕ ಹೊಸ ಕ್ಷೇತ್ರದಲ್ಲಿ ಸೇರ್ಪಡೆಗಾಗಿ ಅರ್ಜಿ ಸಲ್ಲಿಸಬೇಕು, ಹಿಂದಿನ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಅಳಿಸಲಾಗಿದೆ ಎಂದು ಘೋಷಿಸಬೇಕಾಗುತ್ತದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜನ್ ಸುರಾಜ್ ಪಕ್ಷದ ವಕ್ತಾರ ಕುಮಾರ ಸೌರಭ ಸಿಂಗ್, ಇದು ಚುನಾವಣಾ ಆಯೋಗದ ಕಡೆಯಿಂದ ಆಗಿರುವ ಲೋಪ. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುವಾಗ ಪ್ರಶಾಂತ ಕಿಶೋರ ಅವರಂತಹ ಪ್ರಸಿದ್ಧ ವ್ಯಕ್ತಿಯ ಹೆಸರು ಅವರ ಗಮನಕ್ಕೆ ಹೇಗೆ ಬಂದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪ್ರಶಾಂತ್ ಕಿಶೋರ ವಿದ್ಯಾವಂತ ವ್ಯಕ್ತಿ. ಅವರು ತಮ್ಮ ಜವಾಬ್ದಾರಿಗಳನ್ನು ಅರಿತಿದ್ದಾರೆ. ನಮ್ಮ ಕಡೆಯಿಂದ ತಪ್ಪು ನಡೆದಿದೆ ಎಂದು ಚುನಾವಣಾ ಆಯೋಗ ಭಾವಿಸಿದರೆ ನಮ್ಮನ್ನು ಸಂಪರ್ಕಿಸಲಿ. ನಮ್ಮ ಕಾನೂನು ತಂಡವು ಅದಕ್ಕೆ ಪ್ರತಿಕ್ರಿಯಿಸುತ್ತದೆ ಎಂದು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ