ಕೈಗಾ ಅಣು ವಿದ್ಯುತ್ ಸ್ಥಾವರ: 5, 6ನೇ ಘಟಕಗಳ ಕಾಮಗಾರಿಗೆ ಚಾಲನೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ನಿರ್ಮಾಣದ ಪ್ರಮುಖ ಹಂತವಾದ ‘ಕಾಂಕ್ರೀಟಿಂಗ್’ ಕಾರ್ಯಕ್ಕೆ ಭಾರತೀಯ ಅಣುಶಕ್ತಿ ಆಯೋಗದ ಅಧ್ಯಕ್ಷ ಅಜಿತಕುಮಾರ ಮೊಹಾಂತಿ ಭಾನುವಾರ ಅಧಿಕೃತವಾಗಿ ಚಾಲನೆ ನೀಡಿದರು.
ದೇಶೀಯ ತಂತ್ರಜ್ಞಾನದ PHW (Pressurised Heavy Water) ಮಾದರಿಯ ರಿಯಾಕ್ಟರ್‌ಗಳನ್ನು ಇಲ್ಲಿ ಬಳಸಲಾಗುತ್ತಿದೆ. ಈ ತಂತ್ರಜ್ಞಾನದ ವಿಶೇಷತೆಯೆಂದರೆ, ಒಮ್ಮೆ ಬಳಸಿದ ಇಂಧನವನ್ನು ಪುನಃ ಹಲವು ಬಾರಿ ಬಳಸಬಹುದಾಗಿದೆ. ತಲಾ 700 ಮೆಗಾ ವ್ಯಾಟ್ ಸಾಮರ್ಥ್ಯದ ಎರಡು ಹೊಸ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಈ ಯೋಜನೆಯ ಒಟ್ಟು ಅಂದಾಜು ವೆಚ್ಚ ಸುಮಾರು ₹21,000 ಕೋಟಿಗಳಾಗಿವೆ. ಪ್ರಸ್ತುತ ಕೈಗಾದಲ್ಲಿ 220 ಮೆಗಾ ವ್ಯಾಟ್ ಸಾಮರ್ಥ್ಯದ ನಾಲ್ಕು ಘಟಕಗಳಿದ್ದು, ಹೊಸ ಘಟಕಗಳ ಕಾರ್ಯಾರಂಭದ ನಂತರ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 2280 ಮೆಗಾ ವ್ಯಾಟ್ ಗೆ ಏರಲಿದೆ.

ಅಜಿತಕುಮಾರ ಮೊಹಾಂತಿ ಅವರು ಗುಂಡಿ ಒತ್ತುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ದೇಶದ ವಿವಿಧೆಡೆ ಇಂತಹ 10 ಸ್ವದೇಶಿ ತಂತ್ರಜ್ಞಾನದ ಘಟಕಗಳನ್ನು ನಿರ್ಮಿಸಲಾಗುತ್ತಿದೆ,” ಎಂದು ತಿಳಿಸಿದರು.
ಈ ಘಟಕಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು 59 ತಿಂಗಳುಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. 2025ರಲ್ಲೇ ಆರಂಭವಾಗಿದ್ದ ಪೂರ್ವಸಿದ್ಧತಾ ಕಾರ್ಯಗಳ ನಂತರ, ಈಗ ಕಾಂಕ್ರೀಟಿಂಗ್ ಹಂತಕ್ಕೆ ತಲುಪಿರುವುದು ಯೋಜನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ

ಆದಾಯ ಮತ್ತು ಉತ್ಪಾದನೆ:
ಎನ್‌ಪಿಸಿಎಲ್ (NPCL) ಅಧ್ಯಕ್ಷ ಭುವನಚಂದ್ರ ಪಾಠಕ್ ಮಾತನಾಡಿ, “ದೇಶದಲ್ಲಿ ಅಣು ವಿದ್ಯುತ್ ಸ್ಥಾವರಗಳು ಪ್ರತಿದಿನ 85 ಮಿಲಿಯನ್ ಯುನಿಟ್‌ಗಳಿಗಿಂತ ಹೆಚ್ಚು ವಿದ್ಯುತ್ ಉತ್ಪಾದಿಸುತ್ತಿದ್ದು, ಉತ್ತಮ ಆದಾಯ ತರುತ್ತಿವೆ. ಅಣುಶಕ್ತಿ ನಿಯಂತ್ರಣ ಮಂಡಳಿಯ (AERB) ಅನುಮತಿ ಪಡೆದ ನಂತರವೇ ಈ ಕಾಂಕ್ರೀಟಿಂಗ್ ಕೆಲಸ ಆರಂಭಿಸಲಾಗಿದೆ,” ಎಂದರು.
ಈ ಸಂದರ್ಭದಲ್ಲಿ ಕೈಗಾ ಸ್ಥಾವರದ ನಿರ್ದೇಶಕ ಬಿ. ವಿನೋದಕುಮಾರ, ಹೊಸ ಘಟಕಗಳ ನಿರ್ದೇಶಕ ಸುರೇಶ ಕುಲಕರ್ಣಿ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement