23 ಸಂಸದರ ಆಸ್ತಿ 15 ವರ್ಷಗಳಲ್ಲಿ ಸರಾಸರಿ 1,045%ರಷ್ಟು ಏರಿಕೆ : ಕರ್ನಾಟಕದ ಯಾವ ಸಂಸದರ ಆಸ್ತಿಯಲ್ಲಿ ಏರಿಕೆ ?

ನವದೆಹಲಿ : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಕಳೆದ ಇಪ್ಪತ್ತು ವರ್ಷಗಳಲ್ಲಿ ಆಸ್ತಿ ಹೆಚ್ಚಿಸಿಕೊಂಡ ಸಂಸದರ ಪಟ್ಟಿ ಬಹಿರಂಗವಾಗಿದೆ. ವರದಿಯೊಂದರ ಪ್ರಕಾರ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೇನಕಾ ಗಾಂಧಿ ಸೇರಿದಂತೆ 2004ರಿಂದ ಪುನರಾಯ್ಕೆಗೊಳ್ಳುತ್ತಿರುವ 23 ಸಂಸದರ ಒಟ್ಟಾರೆ ಆಸ್ತಿ ಮೌಲ್ಯವು 35.18 ಕೋಟಿ ರೂ.ಗಳಿಂದ 402.79 ಕೋಟಿರೂ.ಗಳಿಗೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.
ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ವರದಿಯ ಪ್ರಕಾರ ಕರ್ನಾಟಕ ಸಂಸದರ ಆಸ್ತಿ ಮೌಲ್ಯದಲ್ಲಿಯೂ ಕೂಡ ಹೆಚ್ಚಳವಾಗಿದೆ. ಕರ್ನಾಟಕದ ವಿಜಯಪುರ ಕ್ಷೇತ್ರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರು ಆಸ್ತಿ ಮೌಲ್ಯ ಗರಿಷ್ಠ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಆಸ್ತಿ ಮೌಲ್ಯದಲ್ಲಿ ಶೇ. 9,098ರಷ್ಟು ಏರಿಕೆಯಾಗಿದೆ. 2004ರಲ್ಲಿ 54.8 ಲಕ್ಷ ರೂ.ಗಳಷ್ಟಿದ್ದ ಅವರ ಆಸ್ತಿ ಮೌಲ್ಯವು 2019ರ ವೇಳೆಗೆ 50.41 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಎಡಿಆರ್‌ಯ ವರದಿಯ ಪ್ರಕಾರ, 2004ರಿಂದ ಆಯ್ಕೆಯಾಗುತ್ತಿರುವ ಕರ್ನಾಟಕದ ಒಟ್ಟು ಆರು ಸಂಸದರ ಆಸ್ತಿಯಲ್ಲಿ ಏರಿಕೆಯಾಗಿದೆ.

ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರ 54.8 ಲಕ್ಷ ರೂ.ಗಳಷ್ಟಿದ್ದ ಆಸ್ತಿ ಮೌಲ್ಯ 50.41 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಡಿ.ವಿ.ಸದಾನಂದ ಗೌಡ (ಬೆಂಗಳೂರು ಉತ್ತರ) ಆಸ್ತಿ ಮೌಲ್ಯವು 46.39 ಲಕ್ಷರೂ.ಗಳಿಂದ 20.93 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ದಾವಣೆಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಆಸ್ತಿ ಮೌಲ್ಯವು 5.02 ಕೋಟಿ ರೂ.ಗಳಿಂದ 38.01 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಕೇಂದ್ರ ಸಚಿವ ಹಾಗೂ ಧಾರವಾಡ ಸಂಸದ ಪಹ್ಲಾದ ಜೋಶಿ ಆಸ್ತಿ ಮೌಲ್ಯ 77.60 ಲಕ್ಷ ರೂ.ಗಳಿಂದ 11.13 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರ ಆಸ್ತಿ ಮೌಲ್ಯವು 12.06 ಲಕ್ಷ ರೂ.ಗಳಿಂದ 8.47 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಅವರ ಆಸ್ತಿ ಮೌಲ್ಯವು 53.75 ಲಕ್ಷ ರೂ.ಗಳಿಂದ 4.39 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.

ಪ್ರಮುಖ ಸುದ್ದಿ :-   ಆರೋಗ್ಯದಲ್ಲಿ ಏರುಪೇರು; ಮಾಜಿ ಸಿಎಂ ಎಸ್.ಎಂ.ಕೃಷ್ಣ ಆಸ್ಪತ್ರೆಗೆ ದಾಖಲು

2004ರಿಂದ ದೇಶದಲ್ಲಿ ಪುನರಾಯ್ಕೆಗೊಂಡಿರುವ 23 ಸಂಸದರ ಪೈಕಿ 17 ಸಂಸದರು ಬಿಜೆಪಿಗೆ ಸೇರಿದ್ದರೆ, ಮೂವರು ಸಂಸದರು ಕಾಂಗ್ರೆಸ್ ಪಕ್ಷಕ್ಕೆ, ಎಐಎಂಐಎಂ, ಶಿವಸೇನೆ ಹಾಗೂ ಬಿಜೆಡಿಗೆ ಸೇರಿದ ತಲಾ ಓರ್ವ ಸಂಸದರಿದ್ದಾರೆ. ಈ ಎಲ್ಲಾ ಸಂಸದರ ಸರಾಸರಿ ಆಸ್ತಿ ಮೌಲ್ಯವು 2004ರಲ್ಲಿ 1.52 ಕೋಟಿಯಾಗಿದ್ದರೆ, 2009ರಲ್ಲಿ 3.46 ಕೋಟಿಗೆ, 2014ರಲ್ಲಿ 9.85 ಕೋಟಿಗೆ ಹಾಗೂ 2019ರಲ್ಲಿ ರೂ. 17.51 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ. ಸಂಸದರ ಸರಾಸರಿ ಆಸ್ತಿ ಮೌಲ್ಯದ ಏರಿಕೆ 15.98 ಕೋಟಿ ರೂ. ಅಥವಾ ಶೇ. 1,045ರಷ್ಟಾಗಿದೆ ಎಂಬ ವಿಷಯವನ್ನು ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರಗಳ ವಿಶ್ಲೇಷಣೆಯಿಂದ ತಿಳಿದು ಬಂದಿದೆ ಎಂದು ಎದಿಆರ್‌ ವರದಿ ಹೇಳಿದೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಆಸ್ತಿ ಮೌಲ್ಯ 2004 ರಲ್ಲಿ ರೂ. 55.38 ಲಕ್ಷದಿಂದ 2009 ರಲ್ಲಿ ರೂ. 2.32 ಕೋಟಿಗೆ, 2014 ರಲ್ಲಿ ರೂ. 9.4 ಕೋಟಿ ಮತ್ತು 2019ರಲ್ಲಿ ರೂ. 15.88 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಕಳೆದ 15 ವರ್ಷಗಳಲ್ಲಿ ರಾಹುಲ್ ಗಾಂಧಿಯವರ ಆಸ್ತಿ ಮೌಲ್ಯದಲ್ಲಿ ಶೇ. 2,769ರಷ್ಟು ಏರಿಕೆ ಕಂಡಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಆಸ್ತಿ ಮೌಲ್ಯ ರೂ. 85.68 ಲಕ್ಷದಿಂದ 11.82 ಕೋಟಿ ರೂ.ಗಳಿಗೆ (ಶೇ.1,280ರಷ್ಟು) ಏರಿಕೆ ಕಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖ ಸುದ್ದಿ :-   ಅಶ್ಲೀಲ ವಿಡಿಯೋ ಪ್ರಕರಣ : ಜೆಡಿಎಸ್‌ ನಿಂದ ಪ್ರಜ್ವಲ್‌ ರೇವಣ್ಣ ಅಮಾನತಿಗೆ ನಿರ್ಧಾರ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement