ತುಮಕೂರು: ಜ್ಯೋತಿಷಿಯೊಬ್ಬರ ಮಾತನ್ನು ನಂಬಿ, ತನ್ನ ತಂದೆಯ ಸಾವಿಗೆ ತಾಯಿಯೇ ಕಾರಣ ಎಂದು ಭಾವಿಸಿದ ಮಗಳೊಬ್ಬಳು ಹೆತ್ತ ತಾಯಿಯನ್ನೇ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಘೋರ ಘಟನೆ ತುಮಕೂರು ತಾಲೂಕಿನ ಅನುಪನಹಳ್ಳಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಅಲ್ಲದೆ, ಮೃತ ಪುಷ್ಪಲತಾ ಹೆಸರಲ್ಲಿ ಒಂದು ಮನೆ ಹಾಗೂ ಬ್ಯಾಂಕ್ ಖಾತೆಯಲ್ಲಿ ಹಣ ಇತ್ತು. ಇದಕ್ಕಾಗಿಯೂ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಘಟನೆಯ ಹಿನ್ನೆಲೆ:
ಘಟನೆಯ ಹಿನ್ನೆಲೆ:
ಕೊಲೆಯಾದ ದುರ್ದೈವಿಯನ್ನು ಪುಷ್ಪವತಿ (55) ಎಂದು ಗುರುತಿಸಲಾಗಿದೆ. ಇವರ ಮಗಳು ಸುಚಿತ್ರಾ (33) ಕೊಲೆ ಮಾಡಿದ ಆರೋಪಿಯಾಗಿದ್ದಾಳೆ. ಸುಚಿತ್ರಾ ತನ್ನ ಪತಿಯೊಂದಿಗೆ ತುಮಕೂರು ನಗರದಲ್ಲಿ ವಾಸವಾಗಿದ್ದಳು. ಸುಮಾರು 18 ತಿಂಗಳ ಹಿಂದೆ ಈಕೆಯ ತಂದೆ ನಿಧನರಾಗಿದ್ದರು. ತಂದೆಯ ಸಾವಿನಿಂದ ಕಂಗಾಲಾಗಿದ್ದ ಸುಚಿತ್ರಾ, ಸಾವಿಗೆ ಕಾರಣ ತಿಳಿಯಲು ಜ್ಯೋತಿಷಿಯೊಬ್ಬರನ್ನು ಸಂಪರ್ಕಿಸಿದ್ದಳು.
ಸುಚಿತ್ರಾಳ ತಂದೆಯ ಸಾವಿಗೆ ಆಕೆಯ ತಾಯಿಯೇ ನಡೆಸಿದ ‘ಮಾಟ-ಮಂತ್ರ’ ಕಾರಣ ಎಂದು ಜ್ಯೋತಿಷಿ ನಂಬಿಸಿದ್ದ ಎನ್ನಲಾಗಿದೆ. ಜ್ಯೋತಿಷಿಯ ಈ ಮಾತನ್ನು ಕುರುಡಾಗಿ ನಂಬಿದ ಸುಚಿತ್ರಾ, ತನ್ನ ತಾಯಿಯ ಮೇಲೆ ದ್ವೇಷ ಬೆಳೆಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ತಾಯಿಯನ್ನು ಮುಗಿಸಲು ಸಂಚು ರೂಪಿಸಿದ್ದಳು ಎಂದು ಆರೋಪಿಸಲಾಗಿದೆ.
ತಾಯಿಯ ಮನೆಗೆ ಭೇಟಿ ನೀಡಿದ್ದ ಸುಚಿತ್ರಾ, ತಾಯಿ ನಿದ್ರಿಸುತ್ತಿದ್ದ ಸಮಯದಲ್ಲಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂಬುದು ಈಕೆಯ ಮೇಲಿನ ಆರೋಪ. ಈ ಕೃತ್ಯದ ನಂತರ ಇದು ಸಹಜ ಸಾವು ಎಂದು ಬಿಂಬಿಸಲು ಆಕೆ ಪ್ರಯತ್ನಿಸಿದ್ದಾಳೆ. ಅಷ್ಟೇ ಅಲ್ಲದೆ, ಪೊಲೀಸರಿಗೆ ಅಥವಾ ಯಾರಿಗೂ ಅನುಮಾನ ಬರದಂತೆ ತರಾತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಳು.
ಸುಚಿತ್ರಾಳ ವರ್ತನೆ ಮತ್ತು ಪುಷ್ಪವತಿಯವರ ಸಾವಿನ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂತ್ಯಸಂಸ್ಕಾರ ನಡೆಯುವ ಮುನ್ನವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ವಿಚಾರಣೆಯ ವೇಳೆ ಸುಚಿತ್ರಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.
ಈ ಬಗ್ಗೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಈ ಕೊಲೆ ಸಂಚಿನಲ್ಲಿ ಸುಚಿತ್ರಾಳ ಪತಿಯ ಪಾತ್ರವೇನಾದರೂ ಇದೆಯೇ ಎಂಬ ಬಗ್ಗೆ ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.


ನಿಮ್ಮ ಕಾಮೆಂಟ್ ಬರೆಯಿರಿ