ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆ ಕೈಬಿಡಲು ಆಗ್ರಹಿಸಿ ಕಾರವಾರದಲ್ಲಿ ಬೃಹತ್ ಪ್ರತಿಭಟನೆ

ಕಾರವಾರ:  ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟ ಹಾಗೂ ನದಿಕಣಿವೆಗಳ ಪರಿಸರಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇರುವ ಪ್ರಸ್ತಾಪಿತ ಬೇಡ್ತಿ–ವರದಾ ಹಾಗೂ ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಕೈಬಿಡುವಂತೆ ಆಗ್ರಹಿಸಿ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.
 ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಸಾರ್ವಜನಿಕರು, ಪರಿಸರ ಹೋರಾಟಗಾರರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಯೋಜನೆಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಜಿಲ್ಲಾಧಿಕಾರಿ  ಕೆ. ಲಕ್ಷ್ಮೀಪ್ರಿಯಾ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರಸ್ತಾಪಿತ ನದಿ ಜೋಡಣೆ ಯೋಜನೆಗಳ ಅನುಷ್ಠಾನಕ್ಕಾಗಿ ಅಣೆಕಟ್ಟು, ಕಾಲುವೆ, ಸುರಂಗ, ಪೈಪ್‌ಲೈನ್‌, ಪಂಪ್‌ಹೌಸ್‌, ವಿದ್ಯುತ್ ಪ್ರಸರಣ ಮಾರ್ಗ ಹಾಗೂ ಸೇವಾ ರಸ್ತೆಗಳಂತಹ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳಬೇಕಾಗುತ್ತದೆ. ಇದರಿಂದ ಪಶ್ಚಿಮಘಟ್ಟದ ಗುಡ್ಡ ಪ್ರದೇಶಗಳಲ್ಲಿ ವ್ಯಾಪಕವಾಗಿ ಭೂ ಅಗೆತ ಹಾಗೂ ಅರಣ್ಯ ನಾಶ ಸಂಭವಿಸುವ ಆತಂಕವಿದೆ. ಭೂ ಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ಸಮಿತಿ ಮನವಿಯಲ್ಲಿ ತಿಳಿಸಿದೆ.
ಬೇಡ್ತಿ ನದಿ ಮಳೆಗಾಲದ ಅವಧಿಯಲ್ಲಿ ಮಾತ್ರ ಹರಿಯುತ್ತದೆ. ಉಳಿದ ಅವಧಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುತ್ತದೆ. ಹೀಗಾಗಿ ನದಿಯಲ್ಲಿ ಹೆಚ್ಚುವರಿ ನೀರು ಲಭ್ಯವಿದೆ ಎಂಬ ಪರಿಕಲ್ಪನೆಯೇ ವಾಸ್ತವಿಕವಲ್ಲ ಎಂದು ನೀರಾವರಿ ಹಾಗೂ ಜಲ ತಜ್ಞರ ಅಧ್ಯಯನಗಳನ್ನು ಉಲ್ಲೇಖಿಸಿ ಸಮಿತಿ ಮನವಿಯಲ್ಲಿ ಹೇಳಿದೆ. ನದಿಯಲ್ಲಿ ಕನಿಷ್ಠ  ಹರಿವು ಮತ್ತಷ್ಟು ಕಡಿಮೆಯಾದರೆ ಸ್ಥಳೀಯಗೆ ನೀರಿನ ಸಮಸ್ಯೆ ಉಂಟಾಗುವುದರ ಜೊತೆಗೆ ನದಿ ಪರಿಸರ ವ್ಯವಸ್ಥೆಯ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸಮಿತಿ ಎಚ್ಚರಿಸಿದೆ.
ಗಂಗಾವಳಿ ನದಿ ಉತ್ತರ ಕನ್ನಡದ ಪ್ರಮುಖ ನದಿಗಳಲ್ಲೊಂದಾಗಿದ್ದು, ಅದರ ನೀರು ಸ್ಥಳೀಯ ಜನರ ಕುಡಿಯುವ ನೀರು, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಅಗತ್ಯಗಳಿಗೆ ಮಹತ್ವದ್ದಾಗಿದೆ. ನದಿಯ ನೀರನ್ನು ಬೇರೆಡೆಗೆ ತಿರುಗಿಸಿದರೆ ನದಿಯ ಸಹಜ ಹರಿವು ಕುಂಠಿತವಾಗಿ, ಮುಂದಿನ ದಿನಗಳಲ್ಲಿ ನೀರಿನ ಕೊರತೆ ಎದುರಾಗುವ ಆತಂಕವಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ನದಿಗಳ ಸಿಹಿನೀರಿನ ಹರಿವು ಕಡಿಮೆಯಾದರೆ ಸಮುದ್ರದ ಉಪ್ಪುನೀರು ನದಿಮುಖ ಪ್ರದೇಶಗಳಿಗೆ ಒಳನುಗ್ಗುವ ಸಾಧ್ಯತೆ ಇದ್ದು, ಇದರಿಂದ ನದಿ ಪಾತ್ರದ ಕರಾವಳಿ ಪ್ರದೇಶದಲ್ಲಿ ಕುಡಿಯುವ ನೀರು, ಕೃಷಿ ಹಾಗೂ ಮೀನುಗಾರಿಕೆ ಮೇಲೆ ಪರಿಣಾಮ ಬೀರುವ ಆತಂಕವನ್ನೂ ವ್ಯಕ್ತಪಡಿಸಲಾಗಿದೆ.
ಅಭಿವೃದ್ಧಿಯ ಹೆಸರಿನಲ್ಲಿ ಉತ್ತರ ಕನ್ನಡದ ನೈಸರ್ಗಿಕ ಸಂಪನ್ಮೂಲಗಳಿಗೆ ಧಕ್ಕೆ ತರುವ ಯೋಜನೆಗಳನ್ನು ಜಾರಿಗೊಳಿಸಬಾರದು. ಜಿಲ್ಲೆಯ ಜನರ ಹಿತ ಹಾಗೂ ಪರಿಸರ ಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಗಂಗಾವಳಿ (ಬೇಡ್ತಿ) ಮತ್ತು ಅಘನಾಶಿನಿ ನದಿತಿರುವು ಯೋಜನೆಗಳನ್ನು ಕೈಬಿಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.
ಜನವರಿಯಲ್ಲಿ ಶಿರಸಿಯಲ್ಲಿ ನಡೆದ ‘ಪಶ್ಚಿಮಘಟ್ಟ ಉಳಿಸಿ’ ಸಮಾವೇಶದಲ್ಲಿ ಸುಮಾರು 25 ಸಾವಿರ ಜನರು ಭಾಗವಹಿಸಿದ್ದರು. ಜೂನ್‌ನಲ್ಲಿ ಸುಮಾರು 20 ಸಾವಿರ ಸಹಿಗಳ ಮನವಿ ಸಲ್ಲಿಸಲಾಗಿದ್ದು, ಆಗಸ್ಟ್‌ನಿಂದ ಸುಮಾರು ಒಂದು ಲಕ್ಷ ಜನರ ಸಹಿ ಸಂಗ್ರಹಿಸುವ ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಲಾಯಿತು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅನಂತ ಅಶೀಸರ ಮೊದಲಾದವರು ಪಾಲ್ಗೊಂಡಿದ್ದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅವರು ಬೇಡ್ತಿ ಅಘನಾಶಿನಿ ತಿರುವು ಯೋಜನೆ ಖಂಡಿಸಿ ಪ್ರತ್ಯೇಕ ಮನವಿ ನೀಡಿದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement