ಅಡಿಕೆ ಬೆಳೆಗಾರರ ಸಮಸ್ಯೆ ; ದೆಹಲಿಯಲ್ಲಿ ಕೃಷಿ ಸಚಿವರನ್ನು ಭೇಟಿ ಮಾಡಿದ ಕರ್ನಾಟಕದ ಸಂಸದರ ನಿಯೋಗ

ನವದೆಹಲಿ: ಅಡಿಕೆಗೆ ಕೊಳೆ ರೋಗ  ಹರಡಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈ ಸಂಬಂಧ ಕರ್ನಾಟಕದ ಸಂಸದರು ಇಂದು (ಆಗಸ್ಟ್ 21) ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ (Shivraj Singh Chauhan) ಅವರನ್ನು ಭೇಟಿ ಮಾಡಿದ್ದಾರೆ.
ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕರ್ನಾಟಕದ ಕೇಂದ್ರ ಸಚಿವರು, ಕರ್ನಾಟಕದ ರಾಜ್ಯದ ಅಡಿಕೆ ಬೆಳೆಯುವ ಪ್ರದೇಶದ ಲೋಕಸಭಾ ಸದಸ್ಯರು ಮತ್ತು ಅಡಿಕೆ ಬೆಳೆಗಾರರ ಸಂಘಗಳ ಪ್ರತಿನಿಧಿಗಳ ನಿಯೋಗವು ದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ ಸಿಂಗ್ ಚೌಹಾಣ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಮನವಿ ಆಲಿಸಿದ ಕೃಷಿ‌ ಸಚಿವ ಶಿವರಾಜ ಸಿಂಗ್ ಚೌಹಾಣ ಅಡಿಕೆ ರೈತರ ಸಮಸ್ಯೆ ತ್ವರಿತವಾಗಿ‌ ಇತ್ಯರ್ಥ ಮಾಡುವ ಭರವಸೆ ನೀಡಿದ್ದಾರೆ.
ನಿಯೋಗವು ತಮ್ಮ ಮನವಿಯಲ್ಲಿ ಪ್ರಮುಖವಾಗಿ ಹಳದಿ ಎಲೆ ರೋಗ ಮತ್ತು ಕೊಳೆ ರೋಗದಂತಹ ಮಾರಕ ರೋಗಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಒತ್ತಾಯಿಸಿತು. ಅಲ್ಲದೆ, ಹಾಗೂ ಅಡಿಕೆ ಬೆಳೆಯಿಂದ ಆರೋಗ್ಯದ ಕುರಿತು ವೈಜ್ಞಾನಿಕ ವರದಿಯನ್ನು ತುರ್ತಾಗಿ ತರಿಸಿಕೊಳ್ಳಬೇಕು ಎಂದು ಸಚಿವರಿಗೆ ಒತ್ತಾಯಿಸಿತು. ಅಮೆರಿಕಾದಲ್ಲಿ ಅಡಿಕೆ ಎಲೆಗಳಿಂದ ಮಾಡಿದ ಬಯೋಡಿಗ್ರೇಡಬಲ್ ಪ್ಲೇಟ್‌ಗಳನ್ನು ಕ್ಯಾನ್ಸರ್-ಕಾರಕ ಎಂದು ಘೋಷಿಸಿರುವುದರಿಂದ ಉಂಟಾದ ರಫ್ತು ಸಮಸ್ಯೆಗಳನ್ನು ಬಗೆಹರಿಸಲು ವೈಜ್ಞಾನಿಕ ಅಧ್ಯಯನ ನಡೆಸುವಂತೆ ಒತ್ತಾಯಿಸಲಾಯಿತು. ಹಾಗೂ ಕಾರ್ಬನ್ ಫೈಬರ್ ದೋಟಿ ಮತ್ತು ಇತರೆ ಕೃಷಿ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲು ಮನವಿ ಮಾಡಲಾಯಿತು.

ಪ್ರಮುಖ ಸುದ್ದಿ :-   ಹೊನ್ನಾವರದ ಪ್ರಕೃತಿಯ ‘ಮಾಯಾಲೋಕ’ಕ್ಕೆ ಆನಂದ ಮಹೀಂದ್ರಾ ಫಿದಾ ! ಕೇರಳದ ಹಿನ್ನೀರಿನಷ್ಟೇ ಸುಂದರ ಎಂದ ಉದ್ಯಮಿ

ಅಕ್ರಮ ಆಮದು ನಿಯಂತ್ರಿಸಲು ಕಠಿಣ ಕ್ರಮಕ್ಕೆ ಒತ್ತಾಯ
ಅಡಕೆಯ ಅಕ್ರಮ ಆಮದನ್ನು ತಡೆಯಲು ಕಸ್ಟಮ್ಸ್ ವ್ಯವಸ್ಥೆಯನ್ನು ಬಲಪಡಿಸುವಂತೆ ನಿಯೋಗವು ಸರ್ಕಾರವನ್ನು ಒತ್ತಾಯಿಸಿತು. ಇದರ ಜೊತೆಗೆ, ಅಕ್ರಮ ವ್ಯಾಪಾರವನ್ನು ಹತ್ತಿಕ್ಕಲು ದೊಡ್ಡ ಪ್ರಮಾಣದ ಅಡಿಕೆ ಸಾಗಣೆಗಳಿಗೆ ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸಬೇಕು ಮತ್ತು ಅಡಿಕೆ ಆಮದು ಮಾಡುವ ಮೊದಲು ಸ್ಥಳೀಯ ಸಹಕಾರಿ ಸಂಸ್ಥೆಗಳಾದ ಕ್ಯಾಂಪ್ಕೋ, ಟಿಎಸ್‌ಎಸ್, ಮಾಮ್ಕೋಸ್ ಹಾಗೂ ಇನ್ನಿತರ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಮನವಿ ಮಾಡಿತು.
ತೇವಾಂಶ ಮತ್ತು ಗುಣಮಟ್ಟದ ಮಾನದಂಡಗಳ ಪರಿಷ್ಕರಣೆ
ರೈತರಿಗೆ ಅನುಕೂಲವಾಗುವಂತೆ ಅಡಿಕೆಯಲ್ಲಿನ ತೇವಾಂಶ ಮಟ್ಟವನ್ನು ಶೇ.7 ರಿಂದ ಶೇ.11-12ಕ್ಕೆ ಹೆಚ್ಚಿಸುವಂತೆ ಎಫ್‌ಎಸ್‌ಎಸ್‌ಎಐಗೆ ಮನವಿ ಸಲ್ಲಿಸಲಾಯಿತು. ಸೂರ್ಯನ ಬೆಳಕಿನಲ್ಲಿ ಶೇ.7 ತೇವಾಂಶವನ್ನು ಕಾಯ್ದುಕೊಳ್ಳುವುದು ರೈತರಿಗೆ ಕಷ್ಟಕರ ಎಂದು ನಿಯೋಗವು ವಿವರಿಸಿತು. ಅಲ್ಲದೆ, ಭಾರತೀಯ ಮಾನದಂಡಗಳ ಬ್ಯೂರೋ (ಬಿಐಎಸ್) ನಿಗದಿಪಡಿಸಿರುವ ಅಡಿಕೆ ಗ್ರೇಡಿಂಗ್ ಮಾನದಂಡಗಳನ್ನು ಪುನರ್ ಪರಿಶೀಲಿಸಿ, ಸ್ಥಳೀಯ ಭೌಗೋಳಿಕ ವ್ಯತ್ಯಾಸಗಳನ್ನು ಗಣನೆಗೆ ತೆಗೆದುಕೊಳ್ಳುವಂತೆ ಕೋರಲಾಯಿತು.

ಬೆಳೆಗಾರರಿಗೆ ಆರ್ಥಿಕ ನೆರವು, ತೆರಿಗೆ ಕಡಿತಕ್ಕೆ ಮನವಿ
ಸಹಕಾರಿ ಸಂಸ್ಥೆಗಳಿಗೆ ನೀಡುವ ಸಾಲಗಳ ಮೇಲಿನ ಬಡ್ಡಿದರ ಕಡಿಮೆ ಮಾಡಿ, ಕಾರ್ಪೊರೇಟ್‌ಗಳ ಮಾದರಿಯಲ್ಲಿ ಕ್ರೆಡಿಟ್ ರೇಟಿಂಗ್ ಅನ್ವಯಿಸದೆ ಹೊಸ ಮಾನದಂಡಗಳನ್ನು ರೂಪಿಸುವಂತೆ ನಿಯೋಗವು ಸಚಿವರನ್ನು ಒತ್ತಾಯಿಸಿತು. ಇದರಿಂದ ರೈತರಿಗೆ ಸುಲಭವಾಗಿ ಸಾಲ ದೊರೆಯಲು ಸಹಾಯವಾಗುತ್ತದೆ ಎಂದು ನಿಯೋಗ ಹೇಳಿತು.
ಅಲ್ಲದೆ, ಅಡಿಕೆಗೆ ಬಳಸುವ ಕಾಪರ್ ಸಲ್ಫೇಟ್ ಮೇಲಿನ ಜಿಎಸ್‌ಟಿ ದರವನ್ನು ಶೇ.18 ರಿಂದ ಶೇ.5ಕ್ಕೆ ಮತ್ತು ಅಡಿಕೆ ಮೇಲಿನ ಜಿಎಸ್‌ಟಿ ದರವನ್ನು ಸಹ ಇಳಿಸುವಂತೆ ಕೋರಿಕೆ ಸಲ್ಲಿಸಲಾಯಿತು.
ಬೆಳೆ ವಿಮೆ ಮತ್ತು ಸಂಗ್ರಹಣಾ ಸೌಲಭ್ಯಗಳ ಬೇಡಿಕೆ
ಬೆಳೆ ನಷ್ಟದಿಂದ ರೈತರನ್ನು ರಕ್ಷಿಸಲು ಬೆಳೆ ವಿಮಾ ಸೌಲಭ್ಯಗಳನ್ನು ಬಲಪಡಿಸುವಂತೆ ನಿಯೋಗವು ಮನವಿ ಮಾಡಿತು. ಇದರ ಜೊತೆಗೆ, ರೈತರು ಕಡಿಮೆ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ತಪ್ಪಿಸಲು ಸಹಕಾರಿ ಸಂಸ್ಥೆಗಳಿಗೆ ಸಬ್ಸಿಡಿ ದರದಲ್ಲಿ ಹಣಕಾಸು ಒದಗಿಸಿ ಗೋದಾಮಿನ ಸೌಲಭ್ಯಗಳನ್ನು ನಿರ್ಮಿಸಲು ನೆರವಾಗುವಂತೆ ಕೋರಲಾಯಿತು.

ಪ್ರಮುಖ ಸುದ್ದಿ :-   ಗೃಹಲಕ್ಷ್ಮಿ ಯೋಜನೆ’ಗೆ ಸೌಲಭ್ಯ ಪಡೆಯಲು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು

ನಿಯೋಗದ ಎಲ್ಲಾ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಎಲ್ಲಾ ವಿಷಯಗಳನ್ನು ಪರಿಶೀಲಿಸಿ ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವಂತಹ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು. ಈ ಸಭೆಯು ಅಡಿಕೆ ಬೆಳೆಗಾರರ ಬಹುಕಾಲದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಎಚ್ ಡಿ ಕುಮಾರಸ್ವಾಮಿ, ವಿ ಸೋಮಣ್ಣ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಬಿ ವೈ ರಾಘವೇಂದ್ರ, ಬ್ರಿಜೇಶ ಚೌಟ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ, ಪ್ರಭಾ ಮಲ್ಲಿಕಾರ್ಜುನ, ಶಾಸಕರು ಮತ್ತು ಅಡಿಕೆ ಮಹಾಮಂಡಳದ ಅಧ್ಯಕ್ಷರಾದ ಅರಗ ಜ್ಞಾನೇಂದ್ರ, ಕ್ಯಾಂಪ್ಕೋ ಅಧ್ಯಕ್ಷರಾದ ಕಿಶೋರಕುಮಾರ ಕೊಡಗಿ ಸೇರಿದಂತೆ ಅಡಿಕೆ ಬೆಳೆಗಾರರ ವಿವಿಧ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement