ಬೆಂಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭದ ದಿನಾಂಕವನ್ನು ಪರಿಷ್ಕರಿಸಿ ಶಿಕ್ಷಣ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.
ಹಿಂದಿನ ಆದೇಶವನ್ನು ಪರಿಷ್ಕರಿಸಿದ ಶಿಕ್ಷಣ ಇಲಾಖೆ ಜುಲೈ 1ರಿಂದ ಶೈಕ್ಷಣಿಕ ವರ್ಷ ಆರಂಭಕ್ಕೆ ಹೊಸ ಸುತ್ತೋಲೆ ಹೊರಡಿಸಿದೆ.ನಾಲ್ಕು ದಿನಗಳ ಹಿಂದೆ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದ ಶಿಕ್ಷಣ ಇಲಾಖೆ ಜೂನ್ 15ರಂದು ಶಾಲೆ ಪ್ರಾರಂಭಕ್ಕೆ ಅಧಿಸೂಚನೆ ಹೊರಡಿಸಿತ್ತು.
ಜುಲೈ 1ರಿಂದ ಅ.9ರವರೆಗೆ ಮೊದಲ ಅವಧಿ, ಅ.21ರಿಂದ ಏಪ್ರಿಲ್ 30ರವರೆಗೆ 2ನೇ ಅವಧಿ ಆರಂಭವಾಗಿದೆ ಎಂದು ತಿಳಿಸಿದೆ. ಅಲ್ಲದೇ, ಜುಲೈ 15ರಿಂದ ದಾಖಲಾತಿ ಆರಂಭಕ್ಕೆ ಸೂಚನೆ ನೀಡಿದ್ದು, ಆ.31ರೊಳಗೆ ದಾಖಲಾತಿ ಮುಕ್ತಾಯಕ್ಕೆ ಸೂಚಿಸಲಾಗಿದೆ.
ರಾಜ್ಯದಲ್ಲಿ ಕೊರೋನಾ ಸೋಂಕು ತಗ್ಗಿದೆಯಾದರೂ, ಮೂರನೇ ಅಲೆ ಬಗ್ಗೆ ಈಗಾಗಲೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ಸರ್ಕಾರ ಲಾಕ್ಡೌನ್ ಅನ್ನು ಜೂನ್. 14 ರವರೆಗೆ ಘೋಷಣೆ ಮಾಡಿರುವ ಹಿನ್ನಲೆ ಶಾಲೆಗಳನ್ನು ಜೂನ್ 15ರಿಂದ ತೆರೆಯಲು ಸಾಧ್ಯವಿಲ್ಲ. ಈ ಕಾರಣದಿಂದ ಆದೇಶವನ್ನು ಪರಿಷ್ಕರಿಸಲಾಗಿದೆ.
ಕೋವಿಡ್ ಹಿನ್ನೆಲೆ ತರಗತಿಗಳನ್ನು ಭೌತಿಕವಾಗಿ ನಡೆಸಲು ಸಾಧ್ಯವಾಗದೆ ಇದ್ದರೆ ಪರ್ಯಾಯವಾಗಿ ಆನ್ ಲೈನ್, ದೂರದರ್ಶನ, ಅಂತರ್ಜಾಲ ಕಲೆಕೆಯನ್ನು ಅನುಸರಿಸಬೇಕು. ಮಕ್ಕಳು ಪಾಠ-ಪ್ರವಚನಗಳಲ್ಲಿ ಪಾಲ್ಗೊಳ್ಳುವ ಮೂಲಕ ಕಲಿಕೆ ಮತ್ತು ಮೌಲ್ಯಮಾಪನದ ಕಾರ್ಯದ ನಿರಂತರತೆಯನ್ನು ಕಾಯ್ದುಕೊಳ್ಳಬೇಕು, ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. ಪರ್ಯಾಯ ಮಾರ್ಗಗಳ ಮೂಲಕ ಶಿಕ್ಷಣ ನೀಡುವ ಕುರಿತು ವಿವರವಾದ ಮಾರ್ಗಸೂಚಿಯನ್ನು ಬಳಿಕ ಹೊರಡಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಆಯುಕ್ತರು ತಿಳಿಸಿದ್ದಾರೆ.
ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಫ್ರೌಢ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಸಬೇಕು. ಶೈಕ್ಷಣಿಕ ಅವಧಿಗಳು, ರಜಾ ದಿನಗಳು, ವಾರ್ಷಿಕ ಕಾರ್ಯಸೂಚಿಯನ್ನು ನಿಗದಿಪಡಿಸಬೇಕು ಎಂದು ಸೂಚಿಸಲಾಗಿದೆ.
ದಸರಾ ರಜೆ ಅಕ್ಟೋಬರ್ 10 ರಿಂದ ರಿಂದ ಅಕ್ಟೋಬರ್ 20 ರವರೆಗೆ, ಬೇಸಿಗೆ ರಜೆ : 2022ರ ಮೇ 1ರಿಂದ 28 ಮೇ ವರೆಗೆ ಇರಲಿದೆ. ಶಾಲೆ ಶುರು ಎಂದರೆ ಆನ್ಲೈನ್ ಮೂಲಕ ಮಾತ್ರ ಪಾಠಗಳು ನಡೆಯಲಿವೆ. ಆಫ್ಲೈನ್ ಶಾಲೆ ನಡೆಸುವ ಬಗ್ಗೆ ಇನ್ನೂ ನಿರ್ಧರಿಸಬೇಕಿದೆ. ಆನ್ಲೈನ್ ಶಿಕ್ಷಣವೇ ಸದ್ಯದ ಮಾರ್ಗವಾಗಿದೆ.
ಆದೇಶದ ಪ್ರತಿ ಪಿಡಿಎಫ್‌ನಲ್ಲಿ ಕೆಳಗೆ ಕೊಡಲಾಗಿದೆ.


MOHAN K NAIK
old order